IPL ರನ್ನರ್ ಅಪ್ ಗುಜರಾತ್ ಟೈಟಾನ್ಸ್‌ಗೆ ಮತ್ತೊಂದು ಬಿಗ್ ಶಾಕ್: ಆಟಗಾರರಿದ್ದ ಬಸ್‌ನಲ್ಲಿ ಭೀಕರ ಅಗ್ನಿ ಅವಘಡ..!

ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ ಫೈನಲ್ ಹಣಾಹಣಿಯಲ್ಲಿ ಆರ್‌ಸಿಬಿ ವಿರುದ್ಧ ಸೋತು ನಿರಾಸೆ ಅನುಭವಿಸಿದ ಗುಜರಾತ್ ಟೈಟಾನ್ಸ್ ತಂಡ, ಅದಾದ ಸ್ವಲ್ಪ ಸಮಯದಲ್ಲೇ ಮತ್ತೊಂದು ಭೀಕರ ಸಂಕಷ್ಟದಿಂದ ಕೂದಲೆಳೆತೆಯ ಅಂತರದಲ್ಲಿ ಪಾರಾಗಿದೆ. ಪಂದ್ಯ ಮುಗಿಸಿ ಹೋಟೆಲ್‌ಗೆ ಮರಳುತ್ತಿದ್ದ ಜಿಟಿ ಆಟಗಾರರಿದ್ದ ಬಸ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ತಂಡ ಆತಂಕದ ಕ್ಷಣಗಳನ್ನು ಕಳೆಯುವಂತಾಯಿತು.

ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್: 1 ಗಂಟೆ ಕಾಲ ಒಳಗೇ ಸಿಲುಕಿದ ಆಟಗಾರರು!

ನರೇಂದ್ರ ಮೋದಿ ಸ್ಟೇಡಿಯಂನಿಂದ ಹೊರಟಿದ್ದ ಗುಜರಾತ್ ಟೈಟಾನ್ಸ್ ತಂಡದ ಅಧಿಕೃತ ಐಷಾರಾಮಿ ಬಸ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮ ಬಸ್‌ನಲ್ಲಿ ಭಾರೀ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಬಸ್ ನಿಲ್ಲಿಸಿದರಾದರೂ, ತಾಂತ್ರಿಕ ಸಮಸ್ಯೆಯಿಂದಾಗಿ ಆಟಗಾರರು ಸುಮಾರು 1 ಗಂಟೆಯ ಕಾಲ ಬಸ್‌ನೊಳಗೇ ಸಿಲುಕಿಕೊಳ್ಳಬೇಕಾಯಿತು. ಆ ಬಳಿಕ ಕಷ್ಟಪಟ್ಟು ಆಟಗಾರರನ್ನು ಸುರಕ್ಷಿತವಾಗಿ ಹೊರಗೆ ತಂದು, ಮತ್ತೊಂದು ಪರ್ಯಾಯ ಬಸ್‌ಗೆ ಸ್ಥಳಾಂತರಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳು ಸಂಭವಿಸಿಲ್ಲ ಎಂದು ವರದಿಗಳು ಖಚಿತಪಡಿಸಿವೆ.

ಪ್ಲೇಆಫ್ಸ್‌ನಿಂದಲೇ ಜಿಟಿ ತಂಡಕ್ಕೆ ಬೆಂಬಿಡದ ಸರಣಿ ಅಡೆತಡೆಗಳು!

ಈ ಬಾರಿಯ ಪ್ಲೇಆಫ್ ಹಂತ ತಲುಪಿದಾಗಿನಿಂದಲೂ ಗುಜರಾತ್ ಟೈಟನ್ಸ್ ತಂಡದ ಪ್ರಯಾಣ ಅತ್ಯಂತ ಒತ್ತಡ ಮತ್ತು ಸವಾಲುಗಳಿಂದ ಕೂಡಿತ್ತು. ಮೇ 27 ರಂದು ಆರ್‌ಸಿಬಿ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ನಂತರ, ಮೇ 29 ರಂದು 2ನೇ ಕ್ವಾಲಿಫೈಯರ್ ಪಂದ್ಯ ಆಡಲು ತಂಡವು ಮುಲ್ಲನಪುರಕ್ಕೆ ಹಾರಬೇಕಾಯಿತು. ಅಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್‌ಗೇರಿದ ಜಿಟಿ ತಂಡಕ್ಕೆ ಹವಾಮಾನ ವೈಪರೀತ್ಯ ಭಾರೀ ವಿಘ್ನ ತಂದೊಡ್ಡಿತ್ತು.

ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಅಹಮದಾಬಾದ್‌ಗೆ ಬರಬೇಕಿದ್ದ ವಿಮಾನ ತಡವಾಗಿ, ಮೇ 30ರ ತಡರಾತ್ರಿ 10 ಗಂಟೆ ಸುಮಾರಿಗೆ ತಂಡವು ಕ್ರೀಡಾಂಗಣ ತಲುಪಿತ್ತು. ಹೀಗಾಗಿ ಸತತ ಹೈ-ಪ್ರೆಶರ್ ಪಂದ್ಯಗಳನ್ನು ಎದುರಿಸಿದ ಗುಜರಾತ್‌ ತಂಡಕ್ಕೆ ಫೈನಲ್ ಪಂದ್ಯಕ್ಕೂ ಮುನ್ನ ಸೂಕ್ತ ವಿಶ್ರಾಂತಿ ಮತ್ತು ನೆಟ್ ಪ್ರಾಕ್ಟೀಸ್‌ಗೆ ಸಮಯವೇ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಫೈನಲ್ ಪಂದ್ಯದ ಸಂಕ್ಷಿಪ್ತ ಸ್ಕೋರ್:

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 155 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ನು 2 ಓವರ್‌ಗಳು ಬಾಕಿ ಇರುವಂತೆಯೇ, ಅಂದರೆ 18 ಓವರ್‌ಗಳಲ್ಲೇ 161 ರನ್‌ ಬಾರಿಸಿ ಭರ್ಜರಿಯಾಗಿ ಸತತ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

Leave a Reply

Your email address will not be published. Required fields are marked *