Actress ಕೃಷಿ ತಾಪಂಡ ಮನೆಯಲ್ಲಿ ಸ್ನೇಹಿತ ವೈಶಾಕ್ ಆತ್ಮಹ*ತ್ಯೆ: ಆರ್ಥಿಕ ಸಂಕಷ್ಟ, ಖಿನ್ನತೆಯೇ ಕಾರಣ?

ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಅವರ ಸ್ನೇಹಿತ ವೈಶಾಕ್ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯ ಭಾಗವಾಗಿ ನಟಿ ಕೃಷಿ ತಾಪಂಡ ಅವರಿಂದ ಘಟನೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ವಿಚಾರಣೆಯ ವೇಳೆ ಸಾವಿನ ಹಿಂದಿನ ಪ್ರಮುಖ ಕಾರಣಗಳ ಸುಳಿವು ದೊರೆತಿದೆ.

ಖಿನ್ನತೆಗೆ ಕಾರಣವಾದ ಆರ್ಥಿಕ ಸಂಕಷ್ಟ

ಪೊಲೀಸರ ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳು ಹೊರಬಿದ್ದಿವೆ. ಮೃತ ವೈಶಾಕ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನಿರಂತರ ಆರ್ಥಿಕ ಅಡಚಣೆಗಳಿಂದಾಗಿ ಅವರು ತೀವ್ರವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಹಣಕಾಸಿನ ಸಮಸ್ಯೆಯಿಂದಲೇ ಅವರು ಮನನೊಂದು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.

ಆಗಾಗ ಆರ್ಥಿಕ ನೆರವು ನೀಡುತ್ತಿದ್ದ ನಟಿ

ಸ್ನೇಹಿತನ ಕಷ್ಟಕ್ಕೆ ಸ್ಪಂದಿಸುತ್ತಿದ್ದ ನಟಿ ಕೃಷಿ ತಾಪಂಡ, ವೈಶಾಕ್ ಅವರಿಗೆ ಆಗಾಗ ಆರ್ಥಿಕ ನೆರವು ನೀಡುತ್ತಿದ್ದರು. ಆರ್ಥಿಕವಾಗಿ ಕುಗ್ಗಿದ್ದ ಸ್ನೇಹಿತನಿಗೆ ಅಗತ್ಯವಿದ್ದಾಗಲೆಲ್ಲಾ 40 ರಿಂದ 50 ಸಾವಿರ ರೂ.ಗಳವರೆಗೆ ಹಣವನ್ನು ವರ್ಗಾವಣೆ (Transfer) ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಾವು ವೈಶಾಕ್ ಅವರಿಗೆ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು ಸಹ ನಟಿ ವಿಚಾರಣೆ ವೇಳೆ ಪೊಲೀಸರಿಗೆ ಹಾಜರುಪಡಿಸಿದ್ದಾರೆ.

ಸಾವಿಗೂ ಮುನ್ನ ಕೆಲವು ದಿನಗಳಿಂದ ವೈಶಾಕ್ ಅವರು ನಟಿ ಕೃಷಿತಾ ಪಂಡ ಅವರ ಫ್ಲಾಟ್‌ನಲ್ಲಿಯೇ ವಾಸವಾಗಿದ್ದರು ಎಂಬ ಅಂಶವೂ ತನಿಖೆ ವೇಳೆ ದೃಢಪಟ್ಟಿದೆ. ಪ್ರಕರಣದ ಕುರಿತು ಪೊಲೀಸರು ಇನ್ನಷ್ಟು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *