ಯಲ್ಲಾಪುರ : ಪಟ್ಟಣದ ತಳ್ಳಿಕೇರಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ನಾಯಿಗಳ ಸರಣಿ ಸಾವು ಸಂಭವಿಸುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಆಗ್ರಹಿಸಿದ್ದಾರೆ.
ತಳ್ಳಿಕೇರಿ ಬಳಿ ಶುಕ್ರವಾರ ಮಧ್ಯಾಹ್ನ ಸುಮಾರು 4 ರಿಂದ 5 ನಾಯಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದವು. ಶನಿವಾರ ಬೆಳಿಗ್ಗೆಯಷ್ಟರಲ್ಲಿ ಮತ್ತೆ 4-5 ನಾಯಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನಾಯಿಗಳು ಸಾವನ್ನಪ್ಪಿರುವ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಯಾರೋ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಬಲವಾದ ಅನುಮಾನ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ ಅವರು, ಮುಗ್ಧ ಮತ್ತು ಮೂಕ ಪ್ರಾಣಿಗಳನ್ನು ಈ ರೀತಿ ಕ್ರೂರವಾಗಿ ಕೊಲ್ಲುತ್ತಿರುವುದು ಖಂಡನೀಯ. ಈ ಭಾಗದಲ್ಲಿ ಸಾರ್ವಜನಿಕರು ಮತ್ತು ಸಣ್ಣ ಮಕ್ಕಳು ಓಡಾಡುತ್ತಿರುತ್ತಾರೆ. ಇಂತಹ ಜಾಗದಲ್ಲಿ ವಿಷದ ಆಹಾರ ಹಾಕಿರುವುದು ಆತಂಕ ತಂದಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಯಿಂದಾಗಿ ತಳ್ಳಿಕೇರಿ ಪರಿಸರದಲ್ಲಿ ಸದ್ಯ ಪ್ರಾಣಿ ಪ್ರೇಮಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾವನ್ನಪ್ಪಿದ ನಾಯಿಗಳ ಮುಂದಿನ ಕಾರ್ಯಗಳನ್ನು ವಿಜಯ್ ಮಿರಾಶಿ ಹಾಗೂ ಶ್ವಾನ ಪ್ರೀಯ ಮಹಮದ್ ಹುಸೇನ್ ಇದ್ದರು.















Leave a Reply