
ಶಿರಸಿ: ಮಾನವನ ಚಿತ್ತ ನಿರಂತರವಾಗಿ ಹರಿಯುವ ನದಿಯಂತಿದ್ದು, ಅದರ ಪ್ರವಾಹವು ಉರ್ಧ್ವಗತಿ ಅಥವಾ ಅಧೋಗತಿಯತ್ತ ಸಾಗಬಹುದು. ರಾಗ, ದ್ವೇಷ ಮತ್ತು ಮೋಹಗಳು ಮನುಷ್ಯನನ್ನು ಅಧೋಗತಿಯತ್ತ ಕೊಂಡೊಯ್ಯುವ ಪ್ರಮುಖ ದೋಷಗಳಾಗಿದ್ದು, ಅವುಗಳನ್ನು ತ್ಯಜಿಸಿ ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳನ್ನು ಬೆಳೆಸಿಕೊಳ್ಳಬೇಕು. ಚಂಚಲ ಮನಸ್ಸನ್ನು ಉರ್ಧ್ವಗತಿಯತ್ತ ಕೊಂಡೊಯ್ಯಲು ನಿರಂತರ ಅಭ್ಯಾಸ ಮತ್ತು ವೈರಾಗ್ಯ ಅತ್ಯಗತ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಹೇಳಿದರು.

ಚಿನ್ನಾಪುರ ಸೀಮೆಯ ಮೇಲ್ತರ್ಪು ಹಾಗೂ ಕೆಳ್ತರ್ಪು ಸೀಮೆಯ ಭಕ್ತರು ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರ ಚಾತುರ್ಮಾಸ್ಯದ ಅಂಗವಾಗಿ ಸಲ್ಲಿಸಿದ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನುಡಿದರು.
ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಜೀವನದೃಷ್ಟಿಯನ್ನು ಉಲ್ಲೇಖಿಸಿದ ಶ್ರೀಗಳು, ಶಾಂತಿ ಮತ್ತು ಸಮತೋಲನಕ್ಕಾಗಿ ಪರಿಮಿತಿಯನ್ನರಿತ ಆಸೆ, ಪರವಶತೆ ಇಲ್ಲದ ಸುಖ, ವಿರತಿಯೊಡಗೂಡಿದ ಲೋಕೋದ್ಯೋಗ ಹಾಗೂ ಸತ್ಯವನ್ನು ಗ್ರಹಿಸುವ ಮನಸ್ಸು ಎಂಬ ನಾಲ್ಕು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತನ್ನ ಸಾಮರ್ಥ್ಯ ಹಾಗೂ ಮಿತಿಯನ್ನು ಅರಿತು ಆಸೆಗಳನ್ನು ಹೊಂದುವುದು, ಬಾಹ್ಯ ವಸ್ತುಗಳಿಗೆ ಅವಲಂಬನೆಯಾಗದೆ ಸುಖವನ್ನು ಕಂಡುಕೊಳ್ಳುವುದು, ಕರ್ತವ್ಯ ನಿರ್ವಹಿಸುತ್ತಲೇ ಫಲದ ಮೇಲಿನ ಅತಿಯಾದ ಮೋಹವನ್ನು ಬಿಡುವುದು ಮತ್ತು ಪೂರ್ವಾಗ್ರಹರಹಿತ ಮನಸ್ಸಿನಿಂದ ಸತ್ಯವನ್ನು ಸ್ವೀಕರಿಸುವುದು ಉತ್ತಮ ಜೀವನಕ್ಕೆ ಅಗತ್ಯ ಎಂದು ವಿವರಿಸಿದರು.
ಇಂದಿನ ಸಮಾಜದಲ್ಲಿ ಹಣ, ಆಸ್ತಿ ಮತ್ತು ಪ್ರಸಿದ್ಧಿಯ ಬೆನ್ನತ್ತುವುದಕ್ಕಿಂತ ನಿಸ್ವಾರ್ಥ ಜನಸೇವೆಗೆ ಹೆಚ್ಚಿನ ಮೌಲ್ಯವಿದೆ. ಸೇವೆಯಿಂದ ದೊರೆಯುವ ಜನರ ಪ್ರೀತಿ, ಆಶೀರ್ವಾದ ಮತ್ತು ಆತ್ಮತೃಪ್ತಿಯೇ ಶಾಶ್ವತ ಸಂಪತ್ತು ಎಂದು ಅವರು ಹೇಳಿದರು.
ಆಧ್ಯಾತ್ಮಿಕ ಸಾಧನೆಯನ್ನು ಮುಂದೂಡುವ ಪ್ರವೃತ್ತಿಯ ವಿರುದ್ಧ ಎಚ್ಚರಿಸಿದ ಶ್ರೀಗಳು, ‘ನಾಳೆ ಮಾಡೋಣ, ನಿವೃತ್ತಿಯ ನಂತರ ಭಗವಂತನ ಚಿಂತನೆ ಮಾಡೋಣ’ ಎಂಬ ಆಲೋಚನೆ ಅಪಾಯಕಾರಿ ಎಂದರು.
ಕಮಲದ ಹೂವಿನೊಳಗೆ ಸಿಲುಕಿದ ದುಂಬಿಯ ಕಥೆಯನ್ನು ಉದಾಹರಣೆಯಾಗಿ ನೀಡಿದ ಶ್ರೀಗಳು,
ಕಮಲ ಅರಳಿದಾಗ ಹೊರಬರಬಹುದು ಎಂದು ಬೆಳಗ್ಗಿನ ನಿರೀಕ್ಷೆಯಲ್ಲಿದ್ದ ದುಂಬಿಯು, ರಾತ್ರಿ ಬಂದ ಮದದ ಆನೆಯೊಂದು ಕಮಲದ ಗಿಡವನ್ನೇ ಕಿತ್ತುಹಾಕಿದಾಗ ತನ್ನ ಅವಕಾಶ ಕಳೆದುಕೊಳ್ಳುತ್ತದೆ. ಅದೇ ರೀತಿ ಮೃತ್ಯು ಯಾವುದೇ ಮುನ್ಸೂಚನೆ ನೀಡದೆ ಬರಬಹುದಾದ್ದರಿಂದ ಸತ್ಯ ಮತ್ತು ಅಮೃತತ್ವದ ಚಿಂತನೆಯನ್ನು ಮುಂದೂಡದೆ ಈಗಿನಿಂದಲೇ ಆರಂಭಿಸಬೇಕು ಎಂದರು.
ವೈದಿಕ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಅತ್ಯುನ್ನತ ಸ್ಥಾನವಿದೆ. ಪರಮಾತ್ಮನೇ ಜಗತ್ತಿನ ಪ್ರಥಮ ಗುರುವಾಗಿದ್ದು, ಚಾತುರ್ಮಾಸ್ಯದ ಅವಧಿಯಲ್ಲಿ ಯೋಗನಿದ್ರೆಯಲ್ಲಿರುವ ಪರಮಾತ್ಮನ ಧ್ಯಾನಾರ್ಥವಾಗಿ ಸನ್ಯಾಸಿಗಳು ಮತ್ತು ಯತಿಗಳು ದೇಶಸಂಚಾರವನ್ನು ಸ್ಥಗಿತಗೊಳಿಸಿ ಒಂದೇ ಸ್ಥಳದಲ್ಲಿ ನೆಲೆಸುತ್ತಾರೆ. ಇದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಈ ಪವಿತ್ರ ಅವಧಿಯಲ್ಲಿ ಗುರುಗಳ ದರ್ಶನ ಮತ್ತು ನಮಸ್ಕಾರಕ್ಕೆ ವಿಶೇಷ ಮಹತ್ವವಿದೆ ಎಂದು ಶ್ರೀಗಳು ತಿಳಿಸಿದರು.
ಇಂದಿನ ಕುಟುಂಬ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆಯೂ ಅವರು ಕಳಕಳಿ ವ್ಯಕ್ತಪಡಿಸಿದರು. ಯುವಕ-ಯುವತಿಯರ ವಿವಾಹಗಳು ವಿಳಂಬವಾಗುವುದು, ನಿಶ್ಚಯವಾದ ಸಂಬಂಧಗಳು ಮುರಿಯುವುದು ಹಾಗೂ ಕುಟುಂಬಗಳಲ್ಲಿ ಶಾಂತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆಚಾರ, ವಿಚಾರ ಮತ್ತು ಜೀವನಶೈಲಿಯಲ್ಲಿ ಧರ್ಮದ ಕೊರತೆಯೂ ಇದಕ್ಕೆ ಕಾರಣವಾಗಿದ್ದು, ಪ್ರತಿಯೊಬ್ಬರೂ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಧರ್ಮಶ್ರದ್ಧೆ, ಸಂಯಮ ಮತ್ತು ಸನ್ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ದೇವರ ಅನುಗ್ರಹದೊಂದಿಗೆ ಧಾರ್ಮಿಕ ಮೌಲ್ಯಗಳ ಪಾಲನೆಯಿಂದ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣ ಹೆಗಡೆ, ದತ್ತಾತ್ರೇಯ ಭಟ್, ಮಹಾಲಕ್ಷ್ಮಿ ಗಾಂವ್ಕರ, ದತ್ತಾತ್ರೇಯ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.













Leave a Reply