ಪಡಿತರ ಅಕ್ಕಿ ಕಳ್ಳ ಸಾಗಣೆದಾರರ ಪತ್ತೆ ಹಚ್ಚಿ : ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಸೂಚನೆ

ಹಂಚಿಕೊಳ್ಳಿ

ಶಿರಸಿ: ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ ಯಾರು ಎಂಬುದನ್ನು ಪತ್ತೆಹಚ್ಚಿ, ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ಬಂಧಿಸಬೇಕು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ಯಾರೆಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಸೂಚಿಸಿದರು.
ಅವರು ಸೋಮವಾರ ನಗರದ ತಾಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಶಾಸಕ ಭೀಮಣ್ಣ ನಾಯ್ಕ ಪಾದರಸದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಪಡಿತರ ಅಕ್ಕಿ ಅಕ್ರಮ ಸಾಗಾಟದಂತಹ ಪ್ರಕರಣಗಳು ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗೆ ಕಳಂಕ ತರುವಂತಿವೆ. ತಹಸೀಲ್ದಾರ್ ಮೇಲೆ ಒತ್ತಡ ಬಂದರೂ ಯಾವುದಕ್ಕೂ ಬಗ್ಗದೆ ದಾಳಿ ನಡೆಸಿ ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿರುವುದು ಶ್ಲಾಘನೀಯ. ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು. ನ್ಯಾಯಬೆಲೆ ಅಂಗಡಿಗಳ ಸಭೆ ನಡೆಸಿ, ಮುಂದೆ ಇಂತಹ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಕೂಲಿಕಾರರು ಹಾಗೂ ಬಡವರಿಗೆ ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣಾ ಅವಧಿಯನ್ನು ರಾತ್ರಿ 7 ಗಂಟೆಯವರೆಗೆ ವಿಸ್ತರಿಸಲಾಗಿದೆ. ಸರ್ಕಾರದ ನಿಯಮದಂತೆ ಅಂಗಡಿ ತೆರೆಯಲು ಸಾಧ್ಯವಾಗದಿದ್ದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು. ಕೆಲವೆಡೆ ಒಂದು ಲೀಟರ್ ಸೀಮೆಎಣ್ಣೆ ಮಾತ್ರ ವಿತರಿಸಲಾಗುತ್ತಿದೆ. ಉಳಿದ ಒಂದು ಲೀಟರ್ ಸೀಮೆಎಣ್ಣೆ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ವಿಲ್ಲಿಂಗ್‌ನೆಸ್‌ ನೀಡಿರುವ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ಎರಡು ಲೀಟರ್ ಸೀಮೆಎಣ್ಣೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಿತಿ ಸದಸ್ಯ ರಘು ಕಾನಡೆ ಮಾತನಾಡಿ, ಅಕ್ಕಿ ದಾಸ್ತಾನು ಕೊಠಡಿಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎಂಬ ದೂರುಗಳಿವೆ. ಪ್ರತಿ ಚೀಲದಲ್ಲಿ 2–3 ಕೆಜಿ ಅಕ್ಕಿ ಕಡಿಮೆ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಹಾರ ಸರಬರಾಜು ಮತ್ತು ನಾಗರಿಕ ಸೇವಾ ಇಲಾಖೆಯ ಕವಿತಾ ಮಾತನಾಡಿ, ಈ ಬಾರಿ ಜಿಲ್ಲೆಗೆ 49,380 ಲೀಟರ್ ಸೀಮೆಎಣ್ಣೆ ಬಂದಿದ್ದು, ಗ್ರಾಮೀಣ ಭಾಗದಲ್ಲಿ ಪ್ರತಿ ಪಡಿತರ ಚೀಟಿಗೆ ಎರಡು ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮಿತಿ ಸದಸ್ಯರು, ಕೆಲವು ಕಡೆಗಳಲ್ಲಿ ಕೇವಲ ಒಂದು ಲೀಟರ್ ಸೀಮೆಎಣ್ಣೆ ಮಾತ್ರ ವಿತರಿಸಲಾಗುತ್ತಿದೆ. ಇನ್ನು ಕೆಲವು ಭಾಗಗಳಲ್ಲಿ ಸೀಮೆಎಣ್ಣೆ ಸರಬರಾಜೇ ಆಗಿಲ್ಲ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ. ಹೀಗಿರುವಾಗ ವಿತರಣೆಯ ಕುರಿತು ಸರಿಯಾದ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು.
ತಾಲೂಕು ಸಮಿತಿ ಅಧ್ಯಕ್ಷೆ ಸುಮಾ ಉಗ್ರಾಣಕರ ಮಾತನಾಡಿ, ರಾಯರಪೇಟೆ ನ್ಯಾಯಬೆಲೆ ಅಂಗಡಿಯನ್ನು ಬೆಳಿಗ್ಗೆ 10.30ಕ್ಕೆ ತೆರೆಯಲಾಗುತ್ತಿದೆ. ಇದರಿಂದ ಬಡ ಕೂಲಿಕಾರ್ಮಿಕರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ನಂತರ ಸರ್ವರ್‌ ಸಮಸ್ಯೆಯ ನೆಪವೊಡ್ಡಿ ಫಲಾನುಭವಿಗಳಿಗೆ ‘ನಾಳೆ ಬನ್ನಿ’ ಎಂದು ಹೇಳಿ ವಾಪಸ್‌ ಕಳುಹಿಸಲಾಗುತ್ತಿದೆ. ಇದರಿಂದ ಕೂಲಿಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.


ಅಕ್ರಮ ಅಕ್ಕಿ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ರಾಜೇಂದ್ರ ಭಟ್ಟ, ರವೀಂದ್ರ ಭಟ್ಟ, ಶಂಭುಲಿಂಗ ಹಾಗೂ ನಿಸ್ಸಾರ್ ಅಹಮ್ಮದ್ ಎಂಬುವರ ವಿರುದ್ಧ ಶಿರಸಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರು ಹಾಗೂ ಅಕ್ರಮಕ್ಕೆ ಅವಕಾಶ ಕಲ್ಪಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಹಾರ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಪ್ರತಿ ಪಡಿತರ ಚೀಟಿಗೆ ಎರಡು ಲೀಟರ್ ಸೀಮೆಎಣ್ಣೆ ವಿತರಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ನ್ಯಾಯಬೆಲೆ ಅಂಗಡಿಗಳ ಬಾಗಿಲು ತೆರೆಯುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ನಂದಕುಮಾರ ಮಾತನಾಡಿ, ಜೂನ್ ತಿಂಗಳವರೆಗೆ 38,359 ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಎಸ್‌ಐಆರ್‌ ನಡೆಯುತ್ತಿರುವುದರಿಂದ ಪ್ರಮುಖವಾಗಿ ಅಂಗನವಾಡಿ ಕಾರ್ಯಕರ್ತೆಯರು ಇದರಲ್ಲಿ ಭಾಗವಹಿಸಿದ್ದಾರೆ. ಮುಂದಿನ ತಿಂಗಳಿನಿಂದ ಮನೆಮನೆಗೆ ತೆರಳಿ ಗೃಹಲಕ್ಷ್ಮೀ ಫಲಾನುಭವಿಗಳ ಪರಿಷ್ಕರಣೆ ನಡೆಸಲಾಗುವುದು. ಮರಣ ಹೊಂದಿದ ಫಲಾನುಭವಿಗಳ ಮಾಹಿತಿಯನ್ನು ನೀಡುವಂತೆ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಹೆಸ್ಕಾಂ ಗ್ರಾಮೀಣ ಶಾಖೆಯ ಸಹಾಯಕ ಅಭಿಯಂತರ ಮಂಜುನಾಥ ಮಾತನಾಡಿ, ಗೃಹಜ್ಯೋತಿ ಯೋಜನೆಗೆ 54,361 ನೋಂದಣಿಯಾಗಿದ್ದು, 4,612 ನೋಂದಣಿಗಳು ಬಾಕಿ ಇವೆ. ಹೊಸ ಅರ್ಜಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಪರಿಶೀಲನಾ ಕಾರ್ಯ ಶೇ.91.21ರಷ್ಟು ಪೂರ್ಣಗೊಂಡಿದೆ. ಡೋರ್‌ ಲಾಕ್‌ ಸೇರಿದಂತೆ ವಿವಿಧ ಕಾರಣಗಳಿಂದ 4,756 ಸ್ಥಾವರಗಳ ಪರಿಶೀಲನೆ ಬಾಕಿ ಇದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ ಮುರ್ಡೇಶ್ವರ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ ಮತ್ತಿತರರು ಉಪಸ್ಥಿತರಿದ್ದರು.


ಗ್ಯಾರೆಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಪ್ಪಿದರೆ ಸಹಿಸಲು ಸಾಧ್ಯವಿಲ್ಲ. ಯುವನಿಧಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಎರಡು ವರ್ಷ ಮಾತ್ರ ಹಣ ದೊರೆಯುತ್ತದೆ. ಬಳಿಕ ಪುನಃ ಯೋಜನೆಯಡಿ ಹಣ ಸಿಗುವುದಿಲ್ಲ. ಹೊಸಬರು ಅರ್ಜಿ ಸಲ್ಲಿಸಬೇಕು.
– ಸತೀಶ ನಾಯ್ಕ, ಗ್ಯಾರೆಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ

Leave a Reply

Your email address will not be published. Required fields are marked *