
ಯಲ್ಲಾಪುರ: “ಮನಸ್ಸಿನ ಭಾವನೆಗಳನ್ನು ಕೆಡಿಸುವ ಹಾಗೂ ಜೀವನದ ಮಧುರ ಕ್ಷಣಗಳನ್ನು ಕುಸಿಯುವಂತೆ ಮಾಡುವ ಮಾದಕ ದ್ರವ್ಯಗಳ ಸೇವನೆಯಿಂದ ಯುವಸಮುದಾಯ ದೂರವಿರಬೇಕು. ಯುವಕರಿಂದ ಮಾತ್ರವೇ ವ್ಯಸನಮುಕ್ತ ಸಮಾಜದ ನಿರ್ಮಾಣ ಸಾಧ್ಯ” ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕ (PSI) ರಾಜಶೇಖರ ವಂದಲಿ ಅಭಿಪ್ರಾಯಪಟ್ಟರು.
ಅವರು ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಯಲ್ಲಾಪುರದ ‘ಜನೋನ್ನತಿ ಟ್ರಸ್ಟ್’ ತನ್ನ ಪ್ರಥಮ ಕಾರ್ಯಕ್ರಮವಾಗಿ ಆಯೋಜಿಸಿದ್ದ ಮಾದಕ ವ್ಯಸನ ಮುಕ್ತ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
“ಒಬ್ಬ ವ್ಯಕ್ತಿಯ ಭವಿಷ್ಯ ರೂಪುಗೊಳ್ಳುವ ಸಂದರ್ಭವನ್ನು ಸ್ವತಃ ಉತ್ತಮಗೊಳಿಸುವಲ್ಲಿ ಯುವಸಮುದಾಯದ ಪಾತ್ರ ಹಿರಿದಾಗಿದೆ. ಹಳ್ಳಿಯ ಮಕ್ಕಳು ಮುಗ್ಧರಾಗಿದ್ದು, ತಮ್ಮ ಹರೆಯದ ಜೀವವನ್ನು ಎಚ್ಚರಿಕೆಯಿಂದ ಕಾಯ್ದುಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾಹಿತಿ ವನರಾಗ ಶರ್ಮಾ ಮಾತನಾಡಿ, “ಸುಸಂಸ್ಕೃತ ಸಮಾಜ ನಿರ್ಮಿಸಲು ಯುವಕರು ಮುಂದಾಗಬೇಕು. ಸಮಾಜ ಜಾಗೃತವಾದರೆ ಮಾತ್ರ ಸುಖ, ಶಾಂತಿ ನೆಲೆಸಲು ಸಾಧ್ಯ. ನಮ್ಮ ಚಿಂತನೆಗಳು ಸದಾ ಸಕಾರಾತ್ಮಕ ಅಂಶಗಳ ಕಡೆಗೆ ಇರಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವೋದಯ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ ಹಾಗೂ ಶಾಲೆಯ ಮುಖ್ಯಾಧ್ಯಾಪಕ ಎಂ. ಕೆ. ಭಟ್ಟ ಅವರು ಪ್ರಸ್ತುತ ದಿನಗಳಲ್ಲಿ ಇಂತಹ ಜಾಗೃತಿ ಅಭಿಯಾನಗಳ ಅಗತ್ಯತೆಯ ಕುರಿತು ಮಾತನಾಡಿದರು.
ವಿವಿಧ ಸ್ಪರ್ಧೆಗಳ ಆಯೋಜನೆ:
ಇದೇ ಸಂದರ್ಭದಲ್ಲಿ ಜನೋನ್ನತಿ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ವ್ಯಸನಮುಕ್ತ ಸಮಾಜ’ ಎಂಬ ವಿಷಯದ ಕುರಿತು ಚಿತ್ರಕಲೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜನೋನ್ನತಿ ಟ್ರಸ್ಟ್‌ನ ಖಜಾಂಚಿ ಸುಜನ್ ಮಳಿಕ್ ಸ್ವಾಗತಿಸಿದರು. ಟ್ರಸ್ಟ್‌ನ ಸಂಚಾಲಕ ಸಂಜಯ ಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ಹಮ್ಮಿಕೊಳ್ಳಲಿರುವ ಸಾಮಾಜಿಕ ಅಭಿಯಾನಗಳ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಕಾರ್ಯದರ್ಶಿ ದರ್ಶನ್ ಮರಾಠಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ವಿನಯ್ ಗೌಡ ವಂದಿಸಿದರು.













Leave a Reply