ಬಸ್ ನಿಲ್ದಾಣಗಳ ಅವ್ಯವಸ್ಥೆಗೆ ಹನಮಣ್ಣವರ ಗರಂ: ಸೌಲಭ್ಯ ಕಲ್ಪಿಸಲು ಖಡಕ್ ಸೂಚನೆ

ಹಂಚಿಕೊಳ್ಳಿ

ಶಿರಸಿ: ನಗರದ ಗಣೇಶನಗರದ ಹೊಸ ಬಸ್ ನಿಲ್ದಾಣ ಹಾಗೂ ಕೇಂದ್ರೀಯ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಜಿ. ಹನಮಣ್ಣವರ ಅವರ ಗಮನಕ್ಕೆ ತಂದರು.

ಸೋಮವಾರ ನಗರದ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿದ ಸುನೀಲ ಹನಮಣ್ಣವರ, ನಿಲ್ದಾಣಗಳಲ್ಲಿನ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರನ್ನು ನೇರವಾಗಿ ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು.

ಗಣೇಶನಗರದ ಹೊಸ ಬಸ್ ನಿಲ್ದಾಣ ಮೇಲ್ಛಾವಣಿ ಸೋರುತ್ತಿದ್ದು, ಕೇಂದ್ರೀಯ ಬಸ್ ನಿಲ್ದಾಣದ ಸಮರ್ಪಕ ಸ್ವಚ್ಛತೆ ಇಲ್ಲದೆ ದುರ್ನಾತದ ನಡುವೆಯೇ ಪ್ರಯಾಣಿಕರು ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ದೂರಿದರು. ರಾತ್ರಿ ವೇಳೆ ದೂರದ ಊರುಗಳಿಗೆ ಸಮರ್ಪಕವಾಗಿ ಬಸ್‌ಗಳು ಸಂಚರಿಸದಿರುವುದು ಹಾಗೂ ನಿಲ್ದಾಣದಲ್ಲಿ ವಿದ್ಯುತ್ ದೀಪಗಳು ಸರಿಯಾಗಿ ಬೆಳಗದಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದರು.

ಗಣೇಶನಗರದ ಬಳಿಯಿರುವ ಬಸ್ ನಿಲ್ದಾಣ ತೀವ್ರವಾಗಿ ಸೋರುತ್ತಿದ್ದು, ಮಳೆಗಾಲದಲ್ಲಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯಗಳ ಗುತ್ತಿಗೆದಾರರು ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ಮನಬಂದಂತೆ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂತು.

ಶಿರಸಿ ಘಟಕದ ಸುಮಾರು ಶೇ.50ರಷ್ಟು ಬಸ್‌ಗಳು ಈಗಾಗಲೇ 10 ಲಕ್ಷ ಕಿ.ಮೀ.ಗಿಂತಲೂ ಹೆಚ್ಚು ಸಂಚರಿಸಿದ್ದು, ಮಾರ್ಗಮಧ್ಯೆಯೇ ಪದೇಪದೇ ಕೆಟ್ಟು ನಿಲ್ಲುತ್ತಿವೆ. ಇದರಿಂದ ಬಸ್‌ಗಳು ಸಮಯಕ್ಕೆ ಸರಿಯಾಗಿ ಗಮ್ಯಸ್ಥಾನ ತಲುಪದೆ ನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ ಸುನೀಲ ಹನಮಣ್ಣವರ, ನಗರದ ಬಸ್ ನಿಲ್ದಾಣ ಯಾವುದೇ ಕಾರಣಕ್ಕೂ ಮೀನು ಮಾರುಕಟ್ಟೆಯ ಅವ್ಯವಸ್ಥೆಯಂತಾಗಬಾರದು. ನಿಲ್ದಾಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವುದರ ಜೊತೆಗೆ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಹಾಗೂ ಪ್ರಯಾಣಿಕಸ್ನೇಹಿ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಂಸ್ಥೆಯಿಂದ ಈಗಾಗಲೇ ಹೊಸ ಬಸ್‌ಗಳನ್ನು ಖರೀದಿಸಿ ವಿವಿಧ ಘಟಕಗಳಿಗೆ ಒದಗಿಸಲಾಗುತ್ತಿದೆ. ಶಿರಸಿ ಘಟಕಕ್ಕೂ ಅಗತ್ಯವಿರುವ ಹೆಚ್ಚುವರಿ ಬಸ್‌ಗಳನ್ನು ಹಂತಹಂತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕುಡಿಯುವ ನೀರು, ಶೌಚಾಲಯದ ನಿಗದಿತ ದರದ ಕಟ್ಟುನಿಟ್ಟಿನ ಪಾಲನೆ, ಸ್ವಚ್ಛತೆ ಹಾಗೂ ನೈರ್ಮಲ್ಯ ಸುಧಾರಣೆ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ತಕ್ಷಣ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ್ ಹಾಗೂ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಎಸ್.ಕೆ. ಭಾಗವತ್, ಪ್ರದೀಪ್ ಶೆಟ್ಟಿ, ಜಾಫಿ ಪೀಟರ್, ಗಣೇಶ ದಾವಣಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *