
ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಹೊನ್ನಗದ್ದೆ ಬಳಿ ರಸ್ತೆ ಬದಿಯ ಮಣ್ಣುಹುಗಿದ ಪರಿಣಾಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಸೇರಿದ ಬಸ್ಸೊಂದು ನಿಯಂತ್ರಣ ತಪ್ಪಿ ಗಟಾರಕ್ಕೆ ವಾಲಿದ ಘಟನೆ ಮಂಗಳವಾರ ಮುಂಜಾನೆ ಹೊನ್ನಗದ್ದೆ ಬಳಿ ಸಂಭವಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸದೆ ಭಾರಿ ಅನಾಹುತವೊಂದು ತಪ್ಪಿದೆ.
ಘಟನೆಯ ವಿವರ:
ಬಾಸಲ್ ಗ್ರಾಮದಿಂದ ಯಲ್ಲಾಪುರಕ್ಕೆ ಹೊರಟಿದ್ದ ಸಂಸ್ಥೆಯ ಯಲ್ಲಾಪುರ ಘಟಕಕ್ಕೆ ಸೇರಿದ ಬಸ್ಸು (ನೋಂದಣಿ ಸಂಖ್ಯೆ: KA-31-F-1499), ಎಂದಿನಂತೆ ಮಾರ್ಗಮಧ್ಯೆ ಹೊನ್ನಗದ್ದೆ ಗ್ರಾಮಕ್ಕೆ ತೆರಳಿ ಅಲ್ಲಿಂದ ಯಲ್ಲಾಪುರಕ್ಕೆ ಪ್ರಯಾಣ ಮುಂದುವರಿಸಬೇಕಾಗಿತ್ತು. ಆದರೆ ಹೊನ್ನಗದ್ದೆ ಗ್ರಾಮಕ್ಕೆ ಹೋಗಿ ವಾಪಸ್ ಯಲ್ಲಾಪುರಕ್ಕೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ್ದು ನಿರಂತರ ಮಳೆಯಿಂದಾಗಿ ರಸ್ತೆಯ ಪಕ್ಕದಲ್ಲಿದ್ದ ಮಣ್ಣಿನಲ್ಲಿ ಹುಗಿದು ಚಲಿಸುತ್ತಿದ್ದ ಬಸ್ ಗಟಾರಕ್ಕೆ ವಾಲಿದೆ.
ಘಟನೆ ನಡೆದ ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಆತಂಕದಿಂದ ಕಿರುಚಾಡಿದ್ದಾರೆ. ಮುಂಭಾಗದ ಬಾಗಿಲಿನ ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಜಾನೆ ಸಮಯವಾದ್ದರಿಂದ ಬಸ್ಸಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು. ಹಲವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅವರು ಬೇರೆ ಬೇರೆ ವಾಹನಗಳನ್ನು ಆಶ್ರಯಿಸಿ ಪಟ್ಟಣಕ್ಕೆ ತೆರಳಿದ್ದಾರೆ.
ಗ್ರಾಮಸ್ಥರ ಆಕ್ರೋಶ:
ಗ್ರಾಮೀಣ ಭಾಗದ ರಸ್ತೆಗಳ ಅಂಚು ಸರಿಯಾಗಿ ಇರದೇ ಇರುವುದು, ಅವೈಜ್ಞಾನಿಕ ಕಾಮಗಾರಿ ಹಾಗೂ ಮಣ್ಣು ಸಡಿಲಗೊಂಡಿರುವುದೇ ಈ ಘಟನೆಗೆ ಮುಖ್ಯ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಇಂತಹ ಅಪಾಯ ಎದುರಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ರಸ್ತೆಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹಾಗೂ ಬಸ್ ಚಾಲಕರು ಸಹ ತಾವು ಪ್ರಯಾಣಿಕರನ್ನ ತೆಗೆದುಕೊಂಡು ಹೋಗುತ್ತಿದ್ದೆವೆ ಎಂಬುದನ್ನು ಮನಗಂಡು ವಾಹನ ಚಲಾಯಿಸಬೇಕು ಎಂಬುದೆ ಸಾರ್ವಜನಿಕರ ಆಗ್ರಹವಾಗಿದೆ.














Leave a Reply