ರಸ್ತೆಯಲ್ಲಿ ಗುಂಡಿಗಳಿಲ್ಲ, ಗುಂಡಿಗಳಲ್ಲೇ ರಸ್ತೆ ಇದೆ! ಆನಗೋಡ ಪಂಚಾಯತ್ ವ್ಯಾಪ್ತಿಯಲ್ಲಿ ‘ವಿಶೇಷ’ ಸಾಧನೆ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಆನಗೋಡ ಪಂಚಾಯತ ವ್ಯಾಪ್ತಿಯ
ದೇಹಳ್ಳಿ ಕ್ರಾಸ್‌ನಿಂದ ಬಿಸಗೋಡಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿಲೋಮೀಟರ್ ಉದ್ದದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. 6 ರಿಂದ 7 ಹಳ್ಳಿಗಳನ್ನು ಜೋಡಿಸುವ ಈ ಪ್ರಮುಖ ರಸ್ತೆಯ ದುರಸ್ತಿಗೆ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ಎಲ್ಲ ಸ್ತರದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಪ್ಪದ ಸಂಕಷ್ಟ
ಈ ರಸ್ತೆಯ ಮಾರ್ಗದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿದ್ದು, ನೂರಾರು ವಿದ್ಯಾರ್ಥಿಗಳು ದಿನನಿತ್ಯ ಇದೇ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ರಸ್ತೆ ಸಂಪೂರ್ಣವಾಗಿ ಗುಂಡಿಬಿದ್ದು, ಹಾಳಾಗಿರುವುದರಿಂದ ಈ ಭಾಗಕ್ಕೆ ಬರುತ್ತಿದ್ದ ಬಸ್ ವ್ಯವಸ್ಥೆಯೂ ಸ್ಥಗಿತಗೊಂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೂಕ್ತ ಸಾರಿಗೆ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.


ಸಿಮೆಂಟ್ ಅಥವಾ ಡಾಂಬರ್ ರಸ್ತೆಗೆ ಆಗ್ರಹ
“ನಾವು ತೆರಿಗೆ ಕಟ್ಟಿದರೂ ನಮಗೆ ಕನಿಷ್ಠ ರಸ್ತೆ ಸೌಲಭ್ಯ ಸಿಗುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾರೂ ಮುತುವರ್ಜಿ ವಹಿಸುತ್ತಿಲ್ಲ” ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ವಿಶೇಷ ಆಸಕ್ತಿ ವಹಿಸಿ ಈ ರಸ್ತೆಯನ್ನು ಶಾಶ್ವತವಾಗಿ ಸಿಮೆಂಟ್ ರಸ್ತೆ (CC Road) ಅಥವಾ ಡಾಂಬರ್ ರಸ್ತೆಯನ್ನಾಗಿ ಪರಿವರ್ತಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.


ಜನಪ್ರತಿನಿಧಿಗಳ ನಿರ್ಲಕ್ಷ್ಯ – ಸಾರ್ವಜನಿಕರ ‘ಜೋಳಿಗೆ ಅಭಿಯಾನ’
ವಾರ್ಡ್ ಸಭೆ, ಗ್ರಾಮ ಸಭೆ, ಜನಸಂಪರ್ಕ ಸಭೆಗಳು ಸೇರಿದಂತೆ ಹತ್ತಾರು ವೇದಿಕೆಗಳಲ್ಲಿ ಸಾರ್ವಜನಿಕರು ಈ ರಸ್ತೆಯ ಸಮಸ್ಯೆಯನ್ನು ಆಡಳಿತ ವ್ಯವಸ್ಥೆಯ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದಕ್ಕೆ ಸ್ಪಂದಿಸಿಲ್ಲ. ಕಳೆದ ವರ್ಷ ಆಡಳಿತದ ಬೇಜವಾಬ್ದಾರಿತನದಿಂದ ಬೇಸತ್ತ ಸಾರ್ವಜನಿಕರೇ ಸ್ವತಃ ‘ಜೋಳಿಗೆ ಅಭಿಯಾನ’ ನಡೆಸಿ, ಹಣ ಸಂಗ್ರಹಿಸಿದ್ದರು. ಆ ಹಣದಿಂದ ಸ್ವಲ್ಪ ಮಟ್ಟಿಗೆ ಮೋರಂ ಮಣ್ಣು ಹಾಕಿಸಿ, ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದರು. ಆದರೆ ಪ್ರಸ್ತುತ ರಸ್ತೆ ಮತ್ತೆ ಯಥಾವತ್ ದುರವಸ್ಥೆಗೆ ತಲುಪಿದೆ.

ನಾವು 21 ನೇ ಶತಮಾನದಲ್ಲಿದ್ದೆವೆ. ಆದರೆ ಗ್ರಾಮಗಳಿಗೆ ಸಮರ್ಪಕ ರಸ್ತೆ ಸೌಲಭ್ಯಗಳಿಲ್ಲ. ಸುತ್ತಲೂ 7-8 ಗ್ರಾಮಗಳು 500-600 ಜನಸಂಖ್ಯೆ ಇದೆ. ಆದರೆ ಈ ರಾಡಿ ತುಂಬಿದ ರಸ್ತೆಯಲ್ಲೆ ಓಡಾಡಬೇಕು.
ಕೆ .ಟಿ . ಹೆಗಡೆ ( ಮುಖಂಡರು)

Leave a Reply

Your email address will not be published. Required fields are marked *