ಯಾವುದೇ ಮೇಲು-ಕೀಳು ನೋಡದೆ ಜನಸೇವೆ ಮಾಡಿದ ದೀಪಾ ಹೆಗಡೆ: ಡೋಂಗ್ರಿ ಗ್ರಾಮಸ್ಥರಿಂದ ಸನ್ಮಾನ

ಹಂಚಿಕೊಳ್ಳಿ

ಅಂಕೋಲಾ – ಯಲ್ಲಾಪುರ: ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ, ಪ್ರಸ್ತುತ ಯಲ್ಲಾಪುರಕ್ಕೆ ವರ್ಗಾವಣೆಗೊಳ್ಳುತ್ತಿರುವ ಹಿರಿಯ ಆರೋಗ್ಯ ಇಲಾಖಾ ಸಿಬ್ಬಂದಿ ದೀಪಾ ಹೆಗಡೆ ಅವರಿಗೆ ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ತ ನಾಗರಿಕರು ಆತ್ಮೀಯ ಗೌರವ ಬಿಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ರವಿವಾರ ಹಮ್ಮಿಕೊಂಡಿದ್ದರು. ಇಲ್ಲಿನ ಶ್ರೀದೇವಿ ಮತ್ತು ಗೋಪಾಲಕೃಷ್ಣ ದೇವಸ್ಥಾನ ಕಲ್ಲೇಶ್ವರ ಸಭಾಂಗಣದಲ್ಲಿ  ಈ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಮಾಜಿಕ ಮುಖಂಡರಾದ ಜಿ. ವಿ. ಹೆಗಡೆ ಕಲ್ಲೇಶ್ವರ ಅವರು ಮಾತನಾಡಿ, ದೀಪಾ ಹೆಗಡೆಯವರು ತಮ್ಮ ಸೇವಾ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಹೊಂದಿದ್ದ ನಿಕಟ ಬಾಂಧವ್ಯ ಹಾಗೂ ಅವರ ನಿಷ್ಕಲ್ಮಶ ಸೇವೆಯನ್ನು ಮುಕ್ತಕಂಠದಿಂದ ಸ್ಮರಿಸಿದರು. ಇದೇ ಸಂದರ್ಭದಲ್ಲಿ ದೀಪಾ ಹೆಗಡೆ ಹಾಗೂ  ಪ್ರಕಾಶ್ ಹೆಗಡೆ ದಂಪತಿಯನ್ನು ಗ್ರಾಮಸ್ಥರ ಪರವಾಗಿ  ಸನ್ಮಾನಿಸಿ, ಗೌರವಿಸಲಾಯಿತು.

ಜನರ ಧೈರ್ಯ ತುಂಬುತ್ತಿದ್ದ ನಗುವ ಮುಖ:
ಉತ್ತರ ಕನ್ನಡ ಜಿಲ್ಲಾ ಪಿಡಿಒ ಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗಿರೀಶ ನಾಯಕ ಮಾತನಾಡಿ, “ನಾನು ಇಲ್ಲಿ ಪಿಡಿಒ ಆಗಿದ್ದ ಅವಧಿಯಲ್ಲಿ ದೀಪಾ ಹೆಗಡೆಯವರ ಜೊತೆ ಕಾರ್ಯನಿರ್ವಹಿಸಿದ್ದೇನೆ. ಅವರ ಸದಾ ನಗುವ ಮುಖವೇ ಚಿಕಿತ್ಸೆಗೆ ಬರುವ ಜನರಿಗೆ ಧೈರ್ಯ ಮತ್ತು ಸ್ಥೈರ್ಯ ನೀಡುತ್ತಿತ್ತು” ಎಂದು ನೆನಪಿಸಿಕೊಂಡರು.

ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಭಟ್ಟ ಮಾತನಾಡಿ, ದೀಪಾ ಹೆಗಡೆಯವರು ವರ್ಗಾವಣೆಯಾಗಿ ಹೋಗುತ್ತಿದ್ದರೂ, ಆದಷ್ಟು ಬೇಗನೆ ಮತ್ತೆ ನಮ್ಮ ಭಾಗಕ್ಕೆ ಸೇವೆ ಸಲ್ಲಿಸಲು ಬರಲಿ ಎಂದು ಆಶಿಸಿದರು. ಹೆಗ್ಗಾರ ಕಲ್ಪತರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವರಾಮ ಭಟ್ಟ ಗುಡ್ಡೆ ಮಾತನಾಡಿ, ದೀಪಾ ಹೆಗಡೆಯವರು ಯಾವುದೇ ಮೇಲು-ಕೀಳು ನೋಡದೆ ನಿಷ್ಠೆಯಿಂದ ಜನಸೇವೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ವಿಶ್ವದರ್ಶನ ಇಡಗುಂದಿ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಹೆಗಡೆ ಅವರು ಅಭಿನಂದನಾ ನುಡಿಗಳನ್ನಾಡಿ, ಅವರ ಸೇವಾ ಮನೋಭಾವ ಹಾಗೂ ಸದ್ಗುಣಗಳನ್ನು ಕೊಂಡಾಡಿದರು.


ಸನ್ಮಾನ ಸ್ವೀಕರಿಸಿ ಭಾವನಾತ್ಮಕವಾಗಿ ಮಾತನಾಡಿದ ದೀಪಾ ಹೆಗಡೆ ಅವರು, ಕುಂದಗೋಳದಿಂದ ರಾಮನಗುಳಿಗೆ ಬಂದ ದಿನಗಳ ನೆನಪುಗಳನ್ನು ಹಂಚಿಕೊಂಡರು. “ರಾಮನಗುಳಿ ಭಾಗದ ಸಾರ್ವಜನಿಕರು ತೋರಿದ ಅಪಾರ ಪ್ರೀತಿ ಹಾಗೂ ಕಾಳಜಿಯೇ ನನಗೆ ಇಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಲು ನಿರಂತರ ಪ್ರೋತ್ಸಾಹ ನೀಡಿತು” ಎಂದು ತಮಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಕಾಶ ಹೆಗಡೆ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೂ ಹಾಗೂ ಸಂಘಟಕರಿಗೂ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಗಿರೀಶ್ ಭಟ್ಟ, ಶಿವರಾಮ ಗಾಂವ್ಕರ, ಸುಧಾಕರ ಭಟ್ಟ, ಸುಬ್ರಾಯ ಹೆಗಡೆ, ಶೇಖರ ಗಾಂವ್ಕರ್ ಹಾಗೂ ಸುಮಾ ಹೆಗಡೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮೋಹನ ಪಟಗಾರ ಅವರು ಸನ್ಮಾನ ಪತ್ರ ವಾಚಿಸಿದರು.

ಅಕ್ಷತಾ ಕಿರಣ್ ಭಟ್ಟ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣಪತಿ ಭಟ್ಟ ಕಲ್ಲೇಶ್ವರ ಸ್ವಾಗತಿಸಿದರು, ರಮೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು ಮತ್ತು ಶಿವಪ್ರಸಾದ ಭಟ್ಟ ವಂದಿಸಿದರು. ಸಮಾರಂಭದಲ್ಲಿ ಶ್ರೀದೇವಿ ಮತ್ತು ಗೋಪಾಲಕೃಷ್ಣ ದೇವಸ್ಥಾನ ಕಮಿಟಿ, ಗೋಪಾಲಕೃಷ್ಣ ಯುವಕ ಮಂಡಲ, ಶಾರದಾಂಬಾ ಯುವತಿ ಮಂಡಲ, ದೀಪಾ ಹೆಗಡೆ ಅಭಿಮಾನಿ ಬಳಗ, ಸಂಘಟಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *