ಹಾಸಿಗೆ ಬಿಟ್ಟು ಎದ್ದ ಬಿಜೆಪಿ: ಮಲಗಿಲ್ಲ ಅಂತ ತೋರಿಸೋಕೆ ಪ್ರವಾಸ ಹೊರಟ್ರಾ:  ಲಕ್ಷ್ಮಣ ಸವದಿ ಪ್ರಶ್ನೆ? !!!!!

ಹಂಚಿಕೊಳ್ಳಿ

ಬೆಳಗಾವಿ: ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಸಚಿವ ಲಕ್ಷ್ಮಣ ಸವದಿ  ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಪ್ರಮುಖ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಜೆಪಿ ತೊರೆದ ನಂತರ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನನ್ನು ಭಾರಿ ಅಂತರದಿಂದ ಗೆಲ್ಲಿಸಿದ್ದಾರೆ. ಇದು ಕೇವಲ ಮತವಲ್ಲ, ಜನರ ಆಶೀರ್ವಾದವಾಗಿದೆ. ಯಾವ ಖಾತೆಯನ್ನು ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸಿದರೆ ಅದಕ್ಕೆ ಗೌರವ ಬಂದೇ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಯೊಂದು ಖಾತೆಗೂ ಅದರದ್ದೇ ಆದ ಮಹತ್ವವಿದ್ದು, ಕೆಲಸ ಮಾಡುವ ಛಲ ಮುಖ್ಯ ಎಂದು  ಹೇಳಿದರು.

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯದ ಕುರಿತು ಮಾತನಾಡಿದ ಅವರು, ಮಹಿಳಾ ಸಚಿವರ ನೇಮಕದ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಶೀಘ್ರದಲ್ಲೇ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆಯಾಗುವ ಪ್ರಕ್ರಿಯೆ ನಡೆಯಲಿದೆ ಎಂದು ಸುಳಿವು ನೀಡಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ವೀಕ್ಷಿಸಲು ಬಿಜೆಪಿ ನಾಯಕರು ಪ್ರವಾಸ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ವಿಪಕ್ಷದವರಾಗಿ ಜನರ ಕಷ್ಟಗಳನ್ನು ನೋಡುವುದು ಅವರ ಕರ್ತವ್ಯ. ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲು ಅವರು ವಾಸ್ತವ ಪರಿಸ್ಥಿತಿಯನ್ನು ಅರಿಯಬೇಕು. ವಿರೋಧ ಪಕ್ಷದವರು ಮಲಗಿದ್ದಾರೆ ಎಂದು ಜನರು ಮಾತನಾಡಬಾರದು ಎಂಬ ಕಾರಣಕ್ಕೆ ಅವರು ಈಗ ಹೊರಗೆ ಬಂದಿದ್ದಾರೆ.  ಅವರು ನೀಡುವ ಉತ್ತಮ ಸಲಹೆಗಳನ್ನು ಸರ್ಕಾರ ಖಂಡಿತವಾಗಿ ಸ್ವೀಕರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕಾಂಗ್ರೆಸ್ ಸರ್ಕಾರ ಟೇಕಾಫ್ ಆಗುತ್ತಿಲ್ಲ ಎಂಬ ಬಿಜೆಪಿಯ ಟೀಕೆಗೆ ಕಟುವಾಗಿ ತಿರುಗೇಟು ನೀಡಿದ ಅವರು ಬಿಜೆಪಿಯವರು ಜೀವಂತವಾಗಿ ಇರಬೇಕಾದರೆ ಇಂತಹ ಟೀಕೆಗಳನ್ನು ಮಾಡಲೇಬೇಕು. ಇಲ್ಲದಿದ್ದರೆ ಅವರು ರಾಜಕೀಯವಾಗಿ ಮುಗಿದು ಹೋಗುತ್ತಾರೆ. ಈಗಿರುವ ಸ್ಥಾನಗಳನ್ನಾದರೂ ಉಳಿಸಿಕೊಳ್ಳಲು ಅವರು ಓಡಾಡಬೇಕಾದ ಅನಿವಾರ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ 2028ರ ಚುನಾವಣೆಯಲ್ಲಿ ಅವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಕೂಡ ಅವಕಾಶ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಜನರು ಅವರನ್ನು ತಿರಸ್ಕರಿಸಬಹುದು ಎಂದು ಭವಿಷ್ಯ ನುಡಿದರು.

ಸರ್ಕಾರ ತನ್ನದೇ ಆದ ವೇಗದಲ್ಲಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡ ಸವದಿ, ವಿರೋಧ ಪಕ್ಷದವರು ಕೇವಲ ಟೀಕೆಗಾಗಿ ಟೀಕೆ ಮಾಡುವುದನ್ನು ಬಿಟ್ಟು ರಚನಾತ್ಮಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *