
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ವೈಲವಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ಗೇಜೂಗ್ ನಡುಗಡ್ಡೆ ಪ್ರದೇಶದಲ್ಲಿ ಸರ್ಕಾರದ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ, ಸಂಪೂರ್ಣ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಸ್ಥಳೀಯರ ನಿದ್ದೆಗೆಡಿಸಿದೆ. ರಾತ್ರಿ ವೇಳೆ ರಾಜಾರೋಷವಾಗಿ ನುಗ್ಗುವ ಯಾಂತ್ರಿಕ ದೋಣಿಗಳ ಆರ್ಭಟಕ್ಕೆ ನದಿ ತೀರದ ಜನತೆ ನಿದ್ರಾಹೀನತೆಯಿಂದ ಬಳಲುತ್ತಿದ್ದು, ಜಿಲ್ಲಾಡಳಿತ ತಕ್ಷಣ ಈ ಗೂಂಡಾವರ್ತನೆಗೆ ಬ್ರೇಕ್ ಹಾಕದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸರ್ಕಾರದ ಪರವಾನಿಗೆಯೇ ಇಲ್ಲ: ದಂಧೆಕೋರರ ಅಟಾಟೋಪ!
ಉಸುಕು ಮಿಶ್ರಿತ ಮಣ್ಣಿನಿಂದ ಕೂಡಿರುವ ಸೂಕ್ಷ್ಮ ನಡುಗಡ್ಡೆ ಪ್ರದೇಶವಾದ ಖಾರ್ಗೇಜೂಗ್‌ನಲ್ಲಿ ಗಣಿಗಾರಿಕೆ ನಡೆಸಲು ಯಾವುದೇ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಆದರೂ ಕತ್ತಲಾಗುತ್ತಲೇ ಸರ್ಕಾರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಮರಳು ಮಾಫಿಯಾ ಸಕ್ರಿಯವಾಗುತ್ತದೆ. ಯಾವುದೇ ಪರವಾನಿಗೆ ಇಲ್ಲದ ಹಲವು ಯಾಂತ್ರಿಕ ದೋಣಿಗಳನ್ನು ಬಳಸಿಕೊಂಡು ರಾತ್ರೋರಾತ್ರಿ ಟನ್‌ಗಟ್ಟಲೆ ಮರಳನ್ನು ಲೂಟಿ ಮಾಡಲಾಗುತ್ತಿದೆ. ನದಿ ದಂಡೆಯಿಂದ ಕೇವಲ ನೂರು ಮೀಟರ್ ಅಂತರದಲ್ಲಿಯೇ ಗ್ರಾಮಸ್ಥರ ಮನೆಗಳಿರುವುದರಿಂದ, ದೋಣಿಗಳ ಇಂಜಿನ್‌ಗಳ ಕರ್ಕಶ ಶಬ್ದಕ್ಕೆ ವೃದ್ಧರು, ಮಕ್ಕಳು ಹಾಗೂ ರೋಗಿಗಳು ರಾತ್ರಿ ಪೂರ್ತಿ ಕಣ್ಣು ಮುಚ್ಚದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಸ್ತರ ಹೊಟ್ಟೆಗೆ ಹೊಡೆದ ಮಾಫಿಯಾ
ಈ ಭಾಗದ ನೂರಾರು ಕುಟುಂಬಗಳು ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವುದನ್ನೇ ನಂಬಿ ಜೀವನ ಸಾಗಿಸುತ್ತಿವೆ. ಆದರೆ, ಸರ್ಕಾರದ ಅನುಮತಿಯೇ ಇಲ್ಲದೆ ಕಾನೂನು ಬಾಹಿರವಾಗಿ ನಡೆಯುವ ಬೃಹತ್ ದೋಣಿಗಳ ಓಡಾಟ ಮತ್ತು ಮರಳುಗಾರಿಕೆಯಿಂದಾಗಿ ನದಿಯಲ್ಲಿನ ಮೀನುಗಾರಿಕೆ ಚಟುವಟಿಕೆ ಸಂಪೂರ್ಣ ಕಂಗೆಟ್ಟಿದೆ. ಮೀನುಗಳು ಸಿಗದೆ ಮೀನುಗಾರರ ದೈನಂದಿನ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಕರಾವಳಿಯ ಸಾಂಪ್ರದಾಯಿಕ ಬೆಸ್ತರ ಬದುಕು ಈಗ ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಜಿಲ್ಲಾಡಳಿತಕ್ಕೆ ತಲುಪಿದ ದೂರು: ಹೋರಾಟದ ಎಚ್ಚರಿಕೆ
ಪರವಾನಿಗೆ ರಹಿತ ಈ ಅಕ್ರಮ ದಂಧೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಆಗ್ರಹಿಸಿ ಗ್ರಾಮಸ್ಥರು ಈಗಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೂ ರವಾನಿಸಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಲಾಗಿದೆ.
ಸ್ಥಳೀಯ ಪರಿಸರ ಮತ್ತು ಜನರ ಹಿತಾಸಕ್ತಿಯನ್ನು ಕಾಪಾಡಲು ಜಿಲ್ಲಾಡಳಿತ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಒಂದು ವೇಳೆ ಈ ಬೇಜವಾಬ್ದಾರಿ ಮತ್ತು ಕಾನೂನು ಬಾಹಿರ ಮರಳು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಜಂಟಿ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ಆಗುವ ದುಶ್ಪರಿಣಾಮಗಳೇನು???
ಜಲಚರಗಳ ಆವಾಸಸ್ಥಾನ ನಾಶ, ನೀರು ಮಲಿನ
ಮರಳು ನದಿಯ ಜಲಚರಗಳು, ವಿಶೇಷವಾಗಿ ಮೀನುಗಳು ಮತ್ತು ಏಡಿಗಳು ಮೊಟ್ಟೆಯಿಟ್ಟು ವಂಶಾಭಿವೃದ್ಧಿ ಮಾಡುವ ನೈಸರ್ಗಿಕ ತಾಣವಾಗಿದೆ. ಆದರೆ, ಯಾಂತ್ರಿಕ ದೋಣಿಗಳ ಮೂಲಕ ಮರಳು ಉಪಸರಿಸುತ್ತಿರುವುದರಿಂದ ಜಲಚರಗಳ ಆವಾಸ ಸ್ಥಾನ ಸಂಪೂರ್ಣ ನಾಶವಾಗಿ, ಮೀನಿನ ಸಂತತಿ ಕ್ಷೀಣಿಸುತ್ತಿದೆ. ಇದರೊಂದಿಗೆ ದೋಣಿಗಳ ಇಂಜಿನ್‌ನಿಂದ ಸೋರುವ ತೈಲ ಮತ್ತು ಕೆಸರು ಮಿಶ್ರಿತ ನೀರು ಇಡೀ ನದಿಯನ್ನು ಕಲುಷಿತಗೊಳಿಸುತ್ತಿದೆ.
ಅಂತರ್ಜಲ ಮಟ್ಟ ಕುಸಿತ
ನೈಸರ್ಗಿಕವಾಗಿ ಮರಳು ನದಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸ್ಪಂಜಿನಂತೆ ಕೆಲಸ ಮಾಡುತ್ತದೆ ಮತ್ತು ಸುತ್ತಮುತ್ತಲಿನ ಭೂಮಿಯ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಈಗ ಮರಳನ್ನು ಅಕ್ರಮವಾಗಿ ಬಾಚುತ್ತಿರುವುದರಿಂದ, ನದಿ ತೀರದ ಹಳ್ಳಿಗಳ ಬಾವಿ ಹಾಗೂ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ (Water Table) ತೀವ್ರವಾಗಿ ಕುಸಿದಿದ್ದು, ಭವಿಷ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಆತಂಕ ಮೂಡಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (National Green Tribunal) ನಿಯಮಾವಳಿಗಳ ಪ್ರಕಾರ, ದೇಶದ ಯಾವುದೇ ನದಿ ಪಾತ್ರಗಳಲ್ಲಿ ಸೂರ್ಯಾಸ್ತದ ನಂತರ ಅಂದರೆ ರಾತ್ರಿ ವೇಳೆ ಮರಳುಗಾರಿಕೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕೃತ ಪರವಾನಿಗೆ ಹೊಂದಿರುವವರು ಸಹ ರಾತ್ರಿ ವೇಳೆ ಮರಳು ತೆಗೆಯುವಂತಿಲ್ಲ. ಆದರೆ, ಖಾರ್ಗೇಜೂಗ್‌ನಲ್ಲಿ ಕತ್ತಲಾಗುತ್ತಿದ್ದಂತೆ ಮರಳು ಮಾಫಿಯಾ ಸಕ್ರಿಯವಾಗುತ್ತಿದ್ದು, ಎನ್‌ಜಿಟಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.














Leave a Reply