ಯಲ್ಲಾಪುರ: ಮುಂಚಕೇರಿ ಹಾಗೂ ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಅಹಿಂದ ವೇದಿಕೆಯ ಯಲ್ಲಾಪುರ ತಾಲೂಕಿನ ಚಂದಗುಳಿ ಘಟಕದ ಪದಾಧಿಕಾರಿಗಳು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಲ್ಲಾಪುರ ಘಟಕ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು.
ಸಮಯಕ್ಕೆ ಸಿಗದ ಬಸ್; ವಿದ್ಯಾರ್ಥಿಗಳ ಪರದಾಟ:
ಯಲ್ಲಾಪುರ ತಾಲೂಕಿನ ಮುಂಚಕೇರಿಯಿಂದ ಯಲ್ಲಾಪುರ ಮಾರ್ಗ ಮಧ್ಯೆ ಸಿಗುವ ತೂಕದಬೈಲ್, ಹೊಂಡಗದ್ದೆ, ಮಳಗಾಂವ, ಜಂಬೇಸಾಲ್, ಉಪಳೇಶ್ವರ, ಹುತ್ಕಂಡ, ಸವಣಗೇರಿ ಮುಂತಾದ ಗ್ರಾಮಗಳಿಂದ ಪ್ರತಿದಿನ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಲ್ಲಾಪುರ ಪಟ್ಟಣದ ವಿವಿಧ ಶಾಲೆ ಹಾಗೂ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಆದರೆ, ಈ ಭಾಗದಲ್ಲಿ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸದ್ಯ ಶಿರಸಿ ಕಡೆಯಿಂದ ಬರುವ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದರಿಂದ, ಈ ಮಾರ್ಗದ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಜಾಗ ಸಿಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಬೆಳಗ್ಗೆ ಮತ್ತು ಸಂಜೆ ವಿಶೇಷ ಬಸ್‌ಗೆ ಬೇಡಿಕೆ:
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮುಂಚಕೇರಿಯಿಂದ ಬೆಳಗ್ಗೆ 8:30 ಗಂಟೆಗೆ ಯಲ್ಲಾಪುರಕ್ಕೆ ಹೊಸ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ, ಸಂಜೆ ಶಾಲಾ-ಕಾಲೇಜು ಮುಗಿದ ನಂತರ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆಗೆ ಮರಳಲು ಅನುಕೂಲವಾಗುವಂತೆ ಯಲ್ಲಾಪುರದಿಂದ ಸಂಜೆ 4:45 ಕ್ಕೆ ಮುಂಚಕೇರಿ ಮಾರ್ಗವಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಬೇಕು. ಈ ಬಸ್‌ಗೆ ತೂಕದಬೈಲ್, ಹೊಂಡಗದ್ದೆ, ಮಳಗಾಂವ, ಜಂಬೇಸಾಲ್, ಉಪಳೇಶ್ವರ, ಹುತ್ಕಂಡ ಮತ್ತು ಸವಣಗೇರಿ ಗ್ರಾಮಗಳಲ್ಲಿ ಕಡ್ಡಾಯ ನಿಲುಗಡೆ (ಸ್ಟಾಪೇಜ್) ನೀಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಉಗ್ರ ಪ್ರತಿಭಟನೆಯ ಎಚ್ಚರಿಕೆ:
ವಿದ್ಯಾರ್ಥಿಗಳ ಈ ಪ್ರಮುಖ ಸಮಸ್ಯೆಯನ್ನು ಸಾರಿಗೆ ಸಂಸ್ಥೆಯು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬಸ್ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ಸಂಘಟನೆಯ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ವೇದಿಕೆಯ ಚಂದಗುಳಿ ಘಟಕದ ಅಧ್ಯಕ್ಷ ಈಶ್ವರ ಪಟಗಾರ ಮತ್ತು ಉಪಾಧ್ಯಕ್ಷ ಸಂತೋಷ ಹೆಗಡೆ ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂಧರ್ಭದಲ್ಲಿ ಅಹಿಂದ ವೇದಿಕೆಯ ಜಿಲ್ಲಾಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್, ಚಂದಗುಳಿ ಘಟಕದ ಉಪಾಧ್ಯಕ್ಷರುಗಳಾದ ನರಸಿಂಹ ಸಿದ್ದಿ, ಈರಪ್ಪ ಬೋವಿವಡ್ಡರ್, ಕಾರ್ಯದರ್ಶಿ ಯೋಗೇಶ್ ನಾಯ್ಕ,ತಾಲೂಕಾ ಅಹಿಂದ ಮುಖಂಡರಾದ ಕೃಷ್ಣ ನಾಯ್ಕ ಮುಂತಾದವರಿದ್ದರು.














Leave a Reply