ಯಲ್ಲಾಪುರ: ಪ್ರಾಣ ಪಣಕ್ಕಿಟ್ಟು ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳ ಪ್ರಯಾಣ; ಬಸ್ ವ್ಯವಸ್ಥೆ ಸರಿಪಡಿಸಲು ಪ್ರಸಾದ್ ಹೆಗಡೆ ಆಗ್ರಹ… ಅಪಾಯಕಾರಿ ಪ್ರಯಾಣದ ವೀಡಿಯೊ ನೋಡಿ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಕಿರವತ್ತಿ ಸೇರಿದಂತೆ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಳ ಬಾಗಿಲಲ್ಲಿ ನೇತಾಡುತ್ತಾ, ಪ್ರಾಣವನ್ನು ಪಣಕ್ಕಿಟ್ಟು ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಪ್ರಸಾದ್ ಹೆಗಡೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ಥಳೀಯ ಪಾಲಕರು ಹಾಗೂ ಯುವಮೋರ್ಚಾ ಪದಾಧಿಕಾರಿಗಳು ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣದ ವೀಡಿಯೋ ಸಹಿತ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಭವಿಷ್ಯದ ದೀಪವಾಗಬೇಕಾದ ಮಕ್ಕಳು ಈ ರೀತಿ ಜೀವ ಕೈಯಲ್ಲಿ ಹಿಡಿದು ಶಾಲೆಗೆ ತೆರಳುವ ಪರಿಸ್ಥಿತಿ ಮುಂದುವರಿದರೆ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಣ್ಣೀರು ಹಾಕಿದ ವಿದ್ಯಾರ್ಥಿನಿ: ತಡವಾಗಿ ಬರುವ ಬಸ್‌ಗಳು
ಇತ್ತೀಚೆಗೆ ತಾಲೂಕಿನ ಡೊಮಗೇರಿ ಭಾಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ಭೇಟಿಯಾಗಿ ಬಸ್ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿದ್ದಾರೆ. ಈ ವೇಳೆ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ಕಷ್ಟಪಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕಿದ್ದಾಳೆ. ಸಂಜೆ 5 ಗಂಟೆಗೆ ಯಲ್ಲಾಪುರದಿಂದ ಡೊಮಗೇರಿಗೆ ಬರಬೇಕಾದ ಬಸ್, ರಾತ್ರಿ 6:30 ಕ್ಕೆ ತಡವಾಗಿ ಬರುತ್ತಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಇದು ಯಲ್ಲಾಪುರದ ಇಡೀ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾರ್ವತ್ರಿಕ ಸಮಸ್ಯೆಯಾಗಿದೆ.

ಶಾಲೆಗಳಿಗೆ ಬೀಗ ಬೀಳುವ ಆತಂಕ
ರಾಜ್ಯದ ಕಾಂಗ್ರೆಸ್ ಸರ್ಕಾರದ “ಭಾಗ್ಯ”ಗಳ ಅಬ್ಬರದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ, ಭವಿಷ್ಯದಲ್ಲಿ ಹಳ್ಳಿಗಳ ಶಾಲೆಗಳಿಗೆ ಸಂಪೂರ್ಣ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೆಗಡೆ ಎಚ್ಚರಿಸಿದ್ದಾರೆ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ಬೆಂಬಲಿತ ಶಾಸಕರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಯಲ್ಲಾಪುರದ ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಹಾಗೂ ಸುರಕ್ಷಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಅವರು ವಿನಯಪೂರ್ವಕವಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *