ಭಾರತದಲ್ಲಿ Polymer ಕರೆನ್ಸಿ ನೋಟುಗಳ ಬಿಡುಗಡೆ? RBI ಗವರ್ನರ್ ಸಂಜಯ್ ಮಲ್ಹೋತ್ರಾ ಏನಂದ್ರು?

ಹಂಚಿಕೊಳ್ಳಿ

ಮುಂಬಯಿ: ದೇಶದಲ್ಲಿ ಕಾಗದದ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸುವ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿದೆ. ಆದರೆ ಈ ಪ್ರಸ್ತಾವವು ಇನ್ನೂ ಶೈಶವಾವಸ್ಥೆಯಲ್ಲಿದೆ (ಆರಂಭಿಕ ಹಂತದಲ್ಲಿದೆ) ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದಾರೆ.

ಆರ್‌ಬಿಐನ ವಿತ್ತ ನೀತಿ ಪರಾಮರ್ಶೆ ಸಮಿತಿ (MPC) ಸಭೆಯು ಕೈಗೊಂಡ ನಿರ್ಧಾರಗಳ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಕೇಳಲಾದ ಪ್ರಮುಖ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಪಾಲಿಮರ್ ನೋಟುಗಳ ಬಿಡುಗಡೆಗೆ ಸಂಬಂಧಿಸಿದಂತೆ ಆರ್‌ಬಿಐ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತುತ ಈ ನೋಟುಗಳ ಬಳಕೆಯ ಕಾರ್ಯಸಾಧ್ಯತೆ ಹಾಗೂ ತಾಂತ್ರಿಕ ಆಯಾಮಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದು ಹೊಸ ಪ್ರಸ್ತಾವನೆಯಲ್ಲ: 2007 ರಿಂದಲೇ ಇದೆ ಚರ್ಚೆ

ಪ್ಲಾಸ್ಟಿಕ್ ನೋಟುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಈ ಪ್ರಸ್ತಾವನೆ ತೀರಾ ಹೊಸದೇನಲ್ಲ. ಬರೊಬ್ಬರಿ 19 ವರ್ಷಗಳ ಹಿಂದೆ, ಅಂದರೆ 2007 ರಲ್ಲೇ ಈ ವಿಷಯವು ಆರ್‌ಬಿಐ ಮುಂದೆ ಚರ್ಚೆಗೆ ಬಂದಿತ್ತು. ಆಗಿನ ಯೋಜನೆಯ ಪ್ರಕಾರ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 10 ರೂಪಾಯಿ ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಕರ್ನಾಟಕದ ಮೈಸೂರು ಸೇರಿದಂತೆ ಜೈಪುರ, ಶಿಮ್ಲಾ, ಭುವನೇಶ್ವರ ಹಾಗೂ ಕೊಚ್ಚಿ ನಗರಗಳಲ್ಲಿ ಚಲಾವಣೆಗೆ ತರಲು ನಿರ್ಧರಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಜಾರಿಯಾಗಲಿಲ್ಲ.

ಇದಾದ ನಂತರ, 2016 ರಲ್ಲಿ ಕೇಂದ್ರ ಸರ್ಕಾರವು ಪಾಲಿಮರ್ ನೋಟುಗಳನ್ನು ದೇಶೀಯವಾಗಿ ತಯಾರಿಸುವ ನಿಟ್ಟಿನಲ್ಲಿ ಅಗತ್ಯ ಹೆಜ್ಜೆಗಳನ್ನು ಇಟ್ಟಿರುವುದಾಗಿ ಸಂಸತ್ತಿಗೆ ಅಧಿಕೃತವಾಗಿ ತಿಳಿಸಿತ್ತು. ಆದರೆ ಆ ಯೋಜನೆಯೂ ಸಹ ನನೆಗುದಿಗೆ ಬಿದ್ದಿತ್ತು. ಇತ್ತೀಚಿನ ದಿನಗಳಲ್ಲಿ ಆರ್‌ಬಿಐ, ಸದ್ಯ ಚಲಾವಣೆಯಲ್ಲಿರುವ ಕಾಗದದ ನೋಟುಗಳ ಮೇಲೆಯೇ ಪಾಲಿಮರ್ ರಾಸಾಯನಿಕದ ತೆಳು ಲೇಪನವನ್ನು (varnishing) ಮಾಡುವ ಮೂಲಕ, ನೋಟುಗಳ ದೀರ್ಘಕಾಲದ ಬಾಳಿಕೆ ಮತ್ತು ಸುರಕ್ಷತೆಯನ್ನು ಪರೀಕ್ಷಿಸುವ ಮಹತ್ವದ ಪ್ರಯೋಗಗಳನ್ನು ಕೈಗೊಂಡಿದೆ.

Leave a Reply

Your email address will not be published. Required fields are marked *

Advertisement


This will close in 3 seconds