ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು 2 ವರ್ಷದ ಮಗು ಸಾ*ವು!

ಮಂಡ್ಯ: ಮನೆಯ ಮುಂದೆ ಆಟವಾಡುತ್ತಿದ್ದ ಕೇವಲ ಎರಡು ವರ್ಷದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಜಾಗದಲ್ಲೇ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೀಸಾಗರ ಗ್ರಾಮದ ನಿವಾಸಿಗಳಾದ ಹರೀಶ್ ಮತ್ತು ಸುಷ್ಮಾ ದಂಪತಿಯ ಮುದ್ದಿನ ಪುತ್ರ ವಿನು (2 ವರ್ಷ) ಮೃತಪಟ್ಟ ದುರ್ದೈವಿ ಬಾಲಕ. ಮಗು ಎಂದಿನಂತೆ ಶನಿವಾರ ಮನೆಯ ಮುಂಭಾಗದಲ್ಲಿ ತಾನೇ ತಾನಾಗಿ ಆಟವಾಡುತ್ತಿತ್ತು. ಈ ವೇಳೆ ಸಂಪ್‌ನ ಮುಚ್ಚಳ ಸರಿಯಾಗಿ ಇಲ್ಲದ ಕಾರಣ ಅಥವಾ ಆಕಸ್ಮಿಕವಾಗಿ ಆಯತಪ್ಪಿ ಮಗು ನೀರಿನ ಸಂಪ್‌ನೊಳಗೆ ಬಿದ್ದಿದೆ ಎನ್ನಲಾಗಿದೆ. ಮಗು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಾಡಿದಾಗ ಸಂಪ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಕಣ್ಣಿನ ಮಣಿಯಂತಿದ್ದ ಕಂದಮ್ಮನನ್ನು ಕಳೆದುಕೊಂಡ ಹೆತ್ತ ಕರಳು ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *