ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ …..

ಹಂಚಿಕೊಳ್ಳಿ

ಬರಹ: ಅಪರ್ಣಾ ಹೆಗಡೆ ಶಿರಸಿ

ಪುರಂದರ ದಾಸರು ತಮ್ಮ ಅನುಭವದ ಸಾರದಿಂದ ಒಂದು ಸ್ತುತಿಯನ್ನು ಬರೆಯುತ್ತಾರೆ “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು. ಮುಕ್ತಿ ಸಿಗಬೇಕು ಎಂದರೆ ಗುರುವಿಗೆ ಶರಾಣಗತನಾಗ ಬೇಕು..ಗುಲಾಮನಾಗಬೇಕು ಎಂದು. ಮುಕ್ತಿ ಎಂದರೆ ಏನು? ಬಿಡುಗಡೆ, ಅರಿವಿನ ಕದ ತೆರೆದು ಬೆಳಕಾಗುವ ಸ್ಥಿತಿಯೇ ಮುಕ್ತಿ. ಎಲ್ಲ ಮೋಹ-ಬಂಧಗಳ ಕಳಚಿಕೊಳ್ಳುವ ಹಂತ. ಅದು ಸಾಧ್ಯವಾಗುವುದು ಗುರುವೆಂಬ ಅರಿವಿನಿಂದ ಮಾತ್ರ.
ನಿಜ ಹರ ಮುನಿದರೂ ಗುರುಕಾಯ್ವ ಎನ್ನುವ ಮಾತೊಂದಿದೆ. ಶಿವನ ಕೋಪದ ತಾಪವನ್ನು ಗುರುವೆಂಬ ಅರಿವಿನಿಂದ ಸಹಿಸಲು ಸಾಧ್ಯ ಅಥವಾ ಕೋಪವನ್ನು ಶಮನ ಮಾಡಲಿಕ್ಕೆ ಸಾಧ್ಯ. ಕುವೆಂಪುರವರು ನಮ್ಮ ಆತ್ಮವೇ ನಮಗೆ ಗುರುವೆಂದು ಹೇಳುತ್ತಾರೆ.
“ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅಂತರಾತ್ಮ”
ಸತ್ಯವೆ ಹೌದಲ್ಲ! ನಮ್ಮ ಆತ್ಮಕ್ಕೆ ಗೊತ್ತಿರದ ಯಾವ ವಿಷಯ ತಾನೆ ಇದೆ?.
ಯಾರನ್ನೊ ನಿಂದಿಸಿದ್ದು, ಇನ್ಯಾರನ್ನೋ ತೇಜೊವಧೆ ಮಾಡಿದ್ದು, ಮತ್ತಾರಿಗೊ ಮೋಸ ಮಾಡಿದ್ದು , ಅದರೊಂದಿಗೆ ಯಾರಿಗೊ ನಮ್ಮಿಂದ ಅಲ್ಪ ಸಹಕಾರ, ಪ್ರೀತಿ, ಮಮಕಾರ, ಹಸಿದವರಿಗೊಂದಷ್ಟು ಊಟ, ಆಶ್ರಯ ಇಂತಹ ಎಲ್ಲ ಗುಣ-ಅವಗುಣವಷ್ಟೂ ಸಹ ಆತ್ಮವೆನ್ನುವ ಗುರುವಿಗೆ ಗೊತ್ತಿರದದ್ದೆ!?.

ತನ್ನ ತಾನರಿತರೆ ತನ್ನರಿವೆ ತನಗೆ ಗುರು ಎನ್ನುವ ಗಾದೆ ಕೂಡ ಕುವೆಂಪುರವರ ಕವಿತೆಯ ಒಳ ಅರ್ಥವನ್ನೇ ಹೇಳುವಂತದ್ದು. ಗುರುವೆಂದರೆ ಕೇವಲ ಶಾಲೆಗಳಲ್ಲಿ ಪಾಠ ಭೋದಿಸುವ ಭೋದಕ ವರ್ಗ ಮಾತ್ರವಲ್ಲ , ಗುರುವೆಂದರೆ ನಮ್ಮೊಳಗಿನ ಜ್ಞಾನದ ಬೆಳಕು ಹೊತ್ತಿಕೊಳ್ಳುವಂತೆ ಮಾಡುವ ಎಲ್ಲ ವಿಷಯ-ಎಲ್ಲ ಜನರು -ಎಲ್ಲ ಸಂಗತಿಗಳೂ ಕೂಡ ನಮಗೆ ಗುರುವಾಗಿ ಮುಚ್ಚಿಕೊಂಡ ದಾರಿಯ ತಿರುವನ್ನು, ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಕೈನೀಡಿ ಉದ್ಧರಿಸಿ ಗುರುವಾಗುತ್ತವೆ. ಯಾರು ಸರಿಯಾದ ಮಾರ್ಗವನ್ನು ತೋರಿಸುತ್ತಾರೆ, ಯಾರು ಸತ್ಯ ದರ್ಶನದಿಂದ ನಮಗೆ ಅರಿವಾಗುವಂತೆ ಕಲಿಸುತ್ತಾರೊ ಅವರೆಲ್ಲರೂ ಕೂಡ ಬದುಕಿಗೆ ಗುರುವೆ.

ಜಗತ್ತಿಗೆ ಗುರುವಾಗಿದ್ದು ಶ್ರೀಕೃಷ್ಣ. ತನ್ನ ಭಗವದ್ಗೀತೆ ಎನ್ನುವ ಮಹಾನ್ ತತ್ತ್ವ ಸಾರದಿಂದ ಜಗದ ಮೋಕ್ಷದ ಪಥವನ್ನು ತಿಳಿಸಿದವನು.

ದಾಸರಪದ ಇನ್ನೊಂದರಲ್ಲಿ
“ಬರ್ತಿರಾ ಇಲ್ಲೆ ಇರ್ತಿರಾ
ಧರೆಯ ಭೋಗವ ಬಿಟ್ಟು
ವರಮೋಕ್ಷ ಪದವಿಯೆಡೆಗೆ ಬರ್ತಿರಾ? ಇಲ್ಲೆ ಇರ್ತಿರಾ!”
ಎಂದು ಕೇಳುತ್ತಾರೆ ಗುರುವು..
ಈ ಜಗದ ಕೊಳಕು-ಹುಳುಕನ್ನು ಬಿಟ್ಟು ನಾನು ನಿಮ್ಮ ಹೊಸ ಲೋಕಕ್ಕೆ ಹೊಸ ವಿಚಾರಕ್ಕೆ ಕರೆದುಕೊಂಡು ಹೋಗ್ತೆನೆ ಬರ್ತಿರಾ ಅಥವಾ ಈ ಜಂಜಾಟದಲ್ಲಿಯೇ ಇದ್ದು ಒದ್ದಾಡತಿರೊ ಎಂದು ತನ್ನ ಸಹಚರರಿಗೆ ಕೇಳುತ್ತಾರೆ.
“ಅಕ್ಕರೆಯ ಸತಿಸುತರ ಅಣ್ಣ ತಮ್ಮರ ಬಿಟ್ಟು
ಸಕ್ಕರೆ ಬೆರೆಸಿದ ಸವಿಯೂಟಗಳ ಬಿಟ್ಟು
ತೆಕ್ಕೆಗಾದಿಯ ಬಿಟ್ಟು ಸೊಕ್ಕು-ಸಡಗರ ಬಿಟ್ಟು
ರೊಕ್ಕದ ತೀಜೊರಿ ಕೀಲಿಕೈಯ್ಯನು ಬಿಟ್ಟು
ಬರ್ತಿರಾ ಇಲ್ಲೆ ಇರ್ತಿರಾ!?.”
ಎಂದಾಗ ನಮ್ಮದು ತಮ್ಮದು ಎನ್ನುವ ಎಲ್ಲ ಮೋಹ ಕಳಚಿಕೊಂಡಾಗಲಷ್ಟೆ ಅರಿವಿನ ಕದ ತೆರೆದುಕೊಂಡು ಜ್ಞಾನದ ಗುರು ನಮಗೆ ಕಾಣಿಸುವುದು. ಅದರಲ್ಲೂ ಕಾಡು ಕರೆಯುವ ವಯಸ್ಸಿನಲ್ಲಿಯೂ ಸೊಂಟಕ್ಕೆ ಕೀಲಿಕೈ ನೇತಾಡಿಸಿಕೊಂಡು ಯಜಮಾನಿಕೆಯ ದರ್ಪದ ಭ್ರಮೆಯಲ್ಲಿಯೇ ಇರುವ ಹಾಳು ಹಣದ ಮೋಹದಿಂದ ಯಾರು ಮುಕ್ತರಾಗುತ್ತಾರೊ ಅವರು ನಿಜವಾಗಿ ಜ್ಞಾನಿಗಳು ಎಂದು ಹೇಳುತ್ತಾರೆ.

ಇಲ್ಲಿ ಎಲ್ಲ ಮೋಹವನ್ನೂ ಬಿಡುವುದು ಎಂದರೆ ಇತಿಮಿತಿಯಲ್ಲಿ ಇರುವುದು ಎಂದರ್ಥ. ತಮಗೆ ಸಿಗಬೇಕಾದ್ದು ಸಿಕ್ಕಾಗಲೂ ಸಹ ಮತ್ತಷ್ಟರ ಮೋಹಕ್ಕೆ ಬೀಳುವುದು ಆಸೆ. ಈ ಆಸೆಯನ್ನು ತೊರೆದು ಬದುಕಿನ ಗಟ್ಟಿಯಾದ ಗುರಿಯೆಡೆಗೆ ನಡೆಯುವುದಕ್ಕೆ ಯಾರೆಲ್ಲ ಸರಿಯಾದ ದಾರಿಯನ್ನು ತೋರಿಸುತ್ತಾರೊ ಅವರೆಲ್ಲರೂ ಸಹ ಗುರುವೇ.

ಕೆಲವೊಮ್ಮೆ ಪುಟ್ಟ ಮಕ್ಕಳು, ನಮ್ಮ ಸ್ನೇಹಿತರು ಕೂಡ ಗುರುವಿನ ರೂಪದಲ್ಲಿ ನಮ್ಮ ಯಾವುದೊ ಸಂಕಟದಲ್ಲಿ ದಾರಿ ತೋರಬಹುದು. ಸೂಕ್ತ ಮಾರ್ಗದರ್ಶಕರಾಗಬಹುದು.
ಜೀವನದ ಎಲ್ಲ ಘಟ್ಟದಲ್ಲೂ ,ಎಲ್ಲ ಒಳಿತನ್ನು ಕಲಿಸಿ ಕೆಡುಕನ್ನು ಅಳಿಸುವ ಪ್ರತಿಯೊಂದು ಘಟನೆಯು-ವ್ಯಕ್ತಿಯೂ-ಸನ್ನಿವೇಶವೂ ಸಹ ಗುರುವೆ ಆಗಿರುತ್ತದೆ. ಅರಿತು ಸರಿ ದಾಳಿಯಲ್ಲಿ ನಡೆಯುವುದು ಮಾತ್ರ ನಮ್ಮ ನಮ್ಮ ಬುದ್ಧಿಗೆ ಬಿಟ್ಟ ವಿಚಾರ.
ಗುಲಾಮರಾಗದೆ ಆತ್ಮವಿಶ್ವಾಸದಿಂದ ಬದುಕುವುದನ್ನು, ಯುವಜನತೆ ಉತ್ತಮರಾಗಿ ಈ ದೇಶದ ಆಸ್ತಿ ಎಂದು, ನಮ್ಮ ಬದುಕಿನ ಶಿಲ್ಪಿಗಳು ನಾವೆ ಎಂದು ಹೇಳಿದ ವಿವೇಕಾನಂದರು ಯುವಕರ ಬಾಳಿಗೆ ಗುರು.
ಸರ್ಪಲ್ಲಿ ರಾಧಾಕೃಷ್ಣರು ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಮಹಾನ್ ತತ್ವಜ್ಞಾನಿ ಹಾಗೂ ಆದರ್ಶ ಶಿಕ್ಷಕರಾಗಿದ್ದರು. ಸೆಪ್ಟೆಂಬರ್ 5, 1888.ಸ್ಥಳ: ತಿರುಟ್ಟಣಿ, ತಮಿಳುನಾಡಿನಲ್ಲಿ ಜನಿಸಿದ ಇವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಾರೆ. ಶಿಕ್ಷಣ ಮತ್ತು ಶಿಕ್ಷಕರಿಗೆ ಅವರು ಹೆಚ್ಚಿನ ಗೌರವ ನೀಡುತ್ತಿದ್ದರು.

ಶಿಕ್ಷಣ ಎಂದರೆ ಸರ್ಟಿಫಿಕೇಟಿನಲ್ಲಿರಲಿಕ್ಕಷ್ಟೆ ಅಲ್ಲ ನಮ್ಮ ಬದುಕನ್ನು ರೂಪಿಸಲಿಕ್ಕೆ ಇರುವುದು ಎಂದು ಅರ್ಥ ಮಾಡಿಸುವವರು ಶಿಕ್ಷಕರು ಹಾಗೂ ಅವರು ತೋರಿಸಿದ್ದನ್ನು ಅರಿತು ಕಲಿತು ಅಳವಡಿಸಿಕೊಳ್ಳುವವರೆ ವಿದ್ಯಾರ್ಥಿಗಳು. ಜೀವನದ ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಯಾಗಿ ಬದುಕೋಣ ಕಿರಿಯರಿಗೆ ಮಾರ್ಗದರ್ಶಕರಾಗೋಣ.
ಮೊದಲು ಶ್ರದ್ಧೆಯಿಂದ ಕೇಳುಗರಾಗಿ ನಂತರ ಕೇಳುವವರಾಗಿ ಆ ನಂತರ ಭೋದಿಸುವರಾಗೋಣ.

Leave a Reply

Your email address will not be published. Required fields are marked *