
ಲೇಖಕರು: ಅಪರ್ಣಾ ಹೆಗಡೆ ಶಿರಸಿ
“ಬಯಲಾಯಿತದೋ ಬಾನು
ಹೊಗಿ ಎದ್ದ ಗುಡ್ಡ ರಸವರ್ಣ
ಹದ ಲಯದ ಗುಂಗಿಡಿವ ಮಳಿಯ
ಚಳಿ ಹೊದ್ದ ಬಂದ ಪವನ
ಶ್ರಾವಣ ರಸಕಾವ್ಯದಾಭರಣ”
ಇನ್ನೇನೂ ಆಷಾಢ ಮುಗಿದು ಶ್ರಾವಣದ ಬಾಗಿಲು ತೆರೆಯುವ ಸಮಯ. ರಸಿಕರು ಶೃಂಗಾರ ಪುಟಗಳಲ್ಲಿ ಕಾವ್ಯವನ್ನು ಬರೆಯುವ ಕಾಲ. ಹದವಾಗಿ ಬೀಳುವ ಮಳೆ, ಹೊಗೆಯಿಂದ ಮುಸುಕಿದ ಬೆಟ್ಟ-ಗುಡ್ಡ, ಚಳಿಯ ಅನುಭವ, ಸುತ್ತ ಕಣ್ಣುಹಾಯಿಸಿದಷ್ಟು ದೂರ ಹಸಿರೊ ಹಸಿರು..ಇದಿಷ್ಟು ಪ್ರಕೃತಿಯಲ್ಲಾದರೆ ..ಮೆಲುನಾದದ ಕೈಬಳೆಯ ಸದ್ದಿನೊಂದಿಗೆ ಎಚ್ಚರವಾಗುವ ಬೆಳಗು ,ನಸುಗಂಪಿನ ದುಂಡು ಮಲ್ಲಿಗೆ,ಸೂಜಿಮಲ್ಲೆಯರ ಕಂಪು , ಅಚ್ಚಕೆಂಡಸಂಪಿಗೆಯ ಚೆಲುವು..ಬುಟ್ಟಿಯ ತುಂಬ ನಗುವ ಡೇರೆ-ನಾಗದಾಳಿಯರ ಅಧರ ಆಹಾ…ಈ ಶ್ರಾವಣ ಅದೆಷ್ಟು ಸೊಗಸು! ಕವಿಮನಸುಗಳ ಕದ ಬಡಿದು ಬಲಗಾಲಿಟ್ಟು ಒಳಗಡಿಯಿಟ್ಟರೆ ಮನದ ತುಂಬ ಬೆಳಕು…ಜೊಂಪೆಜೊಂಪೆ ಪದಗಳ ರಾಶಿ. ಹದಪಾಕದ ಬೆಲ್ಲದ ಉಂಡೆಯಷ್ಟೆ ಸವಿ. ಹಳ್ಳಿಗಳಲ್ಲಿ ಶ್ರಾವಣದ ಮಳೆಗೆ ಸೂರಂಚಿನ ಮಾಡಿನ ಒಳಗೆ ಪುಟ್ಟ ಪುಟ್ಟ ಹೊಡಸಲಿನ ಕಾವು…ಇಂತಹ ಬೆಚ್ಚಗಿನ ಶ್ರಾವಣದಲ್ಲಿ ಸುಖ-ದುಃಖ,ವಿರಹ-ಶೃಂಗಾರ,ನೋವು-ನಲಿವು ಎಲ್ಲವನ್ನೂ ಭಾವದ ಜಲಪಾತದಲ್ಲಿ ಹರಿಯಬಿಟ್ಟು ಪ್ರವಾಹ ಉಕ್ಕಿಸುವವರು ಕವಿಗಳು.
ಕವಿ ಹೇಗೆಂದರೆ ಹೆಪ್ಪುಗಟ್ಟಿದ ನೋವಿನಲ್ಲೂ ಬೆಚ್ಚಗಿನ ಕವಿತೆಯನ್ನು ರಚಿಸುತ್ತಾನೆ. ಹಸಿರು ಎಲೆಗಳ ಮೇಲೆ ಬಿದ್ದ ಮಳೆಯ ಹನಿ ಭೂಮಿಗೆ ತಾಕುವ ಸೂಕ್ಷ್ಮ ಸ್ಪರ್ಶವನ್ನು ಅನುಭವಿಸಬಲ್ಲ, ಆ ಹನಿಯ ನೋವನ್ನೂ ನಲಿವನ್ನೂ ಕಾಣಬಲ್ಲ ಕೇಳಬಲ್ಲ ಇಂತಹ ಸಾಮರ್ಥ್ಯದ ಕವಿಗಳು ಶ್ರಾವಣವನ್ನು ಬಿಟ್ಟಾರೆಯೇ!
“ಹರೆಯ ಕರೆಯುವ ನಸುಕಿನಲ್ಲಿ
ಮುಗುಳು ತೆರೆಯುವ ಹೂವಿನಲ್ಲಿ
ಹೊಸಿಲಿನಂಚಲಿ ಸುಳಿದ ನೆರಳು
ಕನ್ನಡಿಗೆ ತಾಕಿರುವ ನೀರು
ನಿನ್ನ ನೆನಪನು ತಂದಿದೆ
ಮರಳಿ ಶ್ರಾವಣ ಬಂದಿದೆ “
ಎಂದು ರಸಿಕರ ಮನದಲ್ಲೊಂದು ಬೆಚ್ಚಗಿನ ಭಾವವನ್ನು ಚಿಮ್ಮಿಸುತ್ತಾರೆ. ಒಮ್ಮೆ ಈ ಮಳೆಯಲ್ಲಿ ನೆನೆಯಬೇಕು ಎನ್ನುವ ಉತ್ಕಟತೆ ಓದುಗರಲ್ಲಿ ಮಿಂಚಿನಂತೆ ಸುಳಿಯುವಹಾಗೆ ಕವಿಗಳು ಈ ಶ್ರಾವಣ, ಮಳೆಯ ಕವಿತೆಗಳಲ್ಲಿ ಬರೆಯುತ್ತಾರೆ. ಮುನಿಸಿಕೊಂಡ ದಾಂಪತ್ಯ, ಮುಗಿಯಲು ಬಂದ ಪ್ರೇಮ ಮತ್ತೆ ಚಿಗುರುವುದು ಈ ಶ್ರಾವಣದಲ್ಲೆ ಇರಬೇಕು!?. ನಮ್ಮ ಕವಿಗಳಿಗೆ ಇಂತಹ ಹುಸಿಮುನಿಸಿನ ಪ್ರೀತಿ ಸಿಕ್ಕರೆ ಬಿಡುವ ಮಾತೆಲ್ಲಿ!
“ಮನ್ಮಥ ರೇಖೆಯಿರುವ ಹುಡುಗ
ಆಷಾಢವನ್ನೂ ಶ್ರಾವಣ ಮಾಡುವ ಕಲೆ ನಿನಗಷ್ಟೆ ಗೊತ್ತು
ಹೊಸ ಹಾಳೆಯ ಮೇಲೆ
ಕೊರೆದ ರೇಖೆಗೆ ಉಸಿರ ಕಾಮನಬಿಲ್ಲು
ಆಸಾರನಷ್ಟೇ ವೇಗ ಆವರಿಸುವ ಆವೇಗ”
ಎಂದು ಆಷಾಢದ ಬೇಸರವನ್ನು ಶ್ರಾವಣವಾಗಿಸಿಬಿಡುತ್ತಾರೆ…ರಸಿಕ ಓದುಗರ ಎದೆಗೆ ನೇರವಾಗಿ ಪಂಜು ಹಚ್ಚುತ್ತಾರೆ.
ಬೇಂದ್ರೆಯವರು ಈ ಶ್ರಾವಣದ ಕುರಿತಾಗಿ ,ಈ ಶ್ರಾವಣದಲ್ಲಿಯೇ ಒಂಬತ್ತಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದವರು. ಇವರ ಆಪ್ತರೊಬ್ಬರು ಬರೆದುಕೊಂಡಂತೆ ಬೇಂದ್ರೆಯವರು ಆರೋಗ್ಯ ಹದಗೆಟ್ಟಾಗ ಮುಂಬೈಗೆ ಹೋಗುತ್ತಿದ್ದರಂತೆ ಹಾಗೆ ಹೋಗುವಾಗ ಶ್ರಾವಣದ ಸಮಯ ಒಮ್ಮೆ ಖಂಡಾಳ ಘಟ್ಟದಲ್ಲಿ ತಬ್ಬಿದ ಮಳೆ, ಹೊಗೆ , “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ….” ರಚನೆಗೆ ಸ್ಪೂರ್ತಿಯಂತೆ.
ನಿಜ! ಈ ಶ್ರಾವಣ ಕವಿಗಳಿಗೆ ಸ್ಪೂರ್ತಿ. ಶ್ರುತಿಹಿಡಿದು ಸುರಿಯುವ ಮಳೆಯ ಧಾರೆ, ದುಃಖವ ಮರೆಯಿಸಿ ನವಿಲು ಗರಿಬಿಚ್ಚಿದಂತಾಗಿಸುತ್ತದೆ . ಕಾವ್ಯ ಎಂಬುದು ಕವಿಯ ಬುದ್ಧಿ-ಕನಸು-ಕಲ್ಪನೆಗಳ ಏಕತ್ರಭಾವ.
“ಹದಗೊಯ್ಲಿನ ಜಡಿಮಳೆಗೆ
ಪದ ಚಿಗುರಿತು ಸೂರಡಿಗೆ
ಉಪ್ಪುಸೇರಿದಂತ ಗಂಜಿ
ಕವಿ ಹಸಿವಿಗೆ ಕಾವ್ಯವೇ” … ಅಂದರೇ ಈ ಕವಿಗಳಿಗೆ ಹಸಿವು ನೀರಡಿಕೆಗೆ ಒಂದು ಕಾವ್ಯ ಜನಿಸಿದರೆ ಸಾಕು. ಸೂಕ್ಷ್ಮ ಸಂವೇದನೆಯ ಕವಿ ಜಯಂತ್ ಕಾಯ್ಕಿಣಿಯವರು ತಮ್ಮ ಒಂದು ಕವಿತೆಯಲ್ಲಿ ಶ್ರಾವಣದ ಮಧ್ಯಾಹ್ನ ನೀಲಿ ಮಳೆ ಎಂದು ಬರೆಯುತ್ತಾರೆ. ಬರೆಯುತ್ತಿರುವ ಪೆನ್ನಿನ ಶಾಯಿ ಖಾಲಿಯಾಗುತ್ತಾ ಬಂದಾಗ ಪೆನ್ನನ್ನು ಕೊಡವುತ್ತಾರೆ ಕವಿ, ಆಗ ಹಾಳೆಯ ಮೇಲೆ ತುಂತುರು ತುಂತುರಾಗಿ ಬೀಳುವ ಹನಿಗಳು ನೀಲಿಮಳೆಯಾಗಿ ಕವಿಗೆ ಗೋಚರವಾಗುತ್ತದೆ. ಈ ಶ್ರಾವಣದ ಮಳೆಯ ಶ್ರುತಿಹಿಡಿದ ಹಾಡನ್ನು ಶ್ರವಣ ತೆರೆದು ಕೇಳಿದರಷ್ಟೇ ಸಾಲದು ಮನವನ್ನೂ ತೆರೆದು ಆಲಿಸಿದಾಗಲಷ್ಟೆ ಆ ನಾದವನ್ನು ಸವಿಯಲು ಸಾಧ್ಯ.
ಬೆಟ್ಟ – ಗುಡ್ಡಗಳಲ್ಲಿ ಚಿಗುರುವ ಹಸಿರು, ಅರಳುವ ಬಿಳಿಯ ಹೂವು ಕಿರಿದಾಗಿ ಹರಿಯುವ ಜಲಧಾರೆ ರಸಿಕರಮನವನ್ನು ಸೆಳೆದು ಹೊಸ ಕಾವ್ಯಕ್ಕೆ ಸ್ಪೂರ್ತಿಯಾಗುತ್ತದೆ.
“ಊರ ಕೊನೆಯ ಮಹಡಿ ಮನೆಯ ಹುಡುಗ
ಕಣ್ಣಲ್ಲೆ ಬರೆಯುತಿಹ ಶ್ರಾವಣದ ಒಲವ
ಆಷಾಢದ ಗಡಿಯಲ್ಲಿ ಯುದ್ಧವಾಗುತಿಹುದಂತೆ
ಶ್ರಾವಣದಲ್ಲೊಂದು ಕದನವಿರಾಮ ಘೋಷಣೆಯಂತೆ”
ಈ ಶ್ರಾವಣದ ನಂತರ ಯುದ್ಧವೋ ಜಿದ್ದಿಯೋ ಇರಲಿ ಶ್ರಾವಣ ಹಸಿರಾಗಿ ನಸುನಗಲಿ ಎಂಬುದಷ್ಟೆ ಆಶಯ. ತುಂಟ ಕನ್ಯೆಯ ಭಾವ, ಕಾಡುವ ಹುಡುಗ, ಹೊಸ ವಧು, ತಾರುಣ್ಯ ಎಲ್ಲವನ್ನೂ ಈ ಶ್ರಾವಣ ತನ್ನ ಹಸಿರ ಸೆರಗಿನಲ್ಲಿ ಕಟ್ಟಿಕೊಂಡು ಸೇರೊದ್ದು ಬಂದಾಗ ಚುಕ್ಕಿ ಇರದ, ಚಂದ್ರ ಕಾಣದ ಹುಣ್ಣಿಮೆಯಾದರೂ ಅಂತಃಪುರ ಪ್ರೀತಿಯ ಬೆಳಕಿನಲ್ಲಿ ತುಂಬಿರುತ್ತದೆ. ಅಂತಹ ಒಂದು ನವಿರು ಭಾವ ಕವಿಯ ಲೇಖನಿಯಲ್ಲಿ ಜಿನುಗುವುದು ಹೀಗೆ…ಆಷಾಢದ ಹಾಸುಬೀಸಿನ ಮಳೆ, ಕೈ ತುಂಬ ಕೆಲಸ ಒಂದಿನಿತೂ ಸಂಗಾತಿಯ ನೋಡಲಾಗದ ,ಮಾತಿಗೆ ಸಿಗಲಾರದ ಸಮಯ ಹುಡುಗನಾದರೂ ವಿರಹವನ್ನು ಹೇಗೆ ತಡೆದಾನು! ಯುದ್ಧವೇ ಸಿದ್ಧ. ಇನ್ನೇನು ಅವನು ತಾಳ್ಮೆಗೆಡಬೇಕು ಆಗ ನೋಡಿ ಶ್ರಾವಣ ಬಂದೆಬಿಟ್ಟಿತು, ಕಣ್ಣಲ್ಲೆ ಬರೆದ ಪ್ರೇಮ ಪತ್ರವನ್ನು ಸಖಿಗೆ ತಿಳಿಸಿದ ಆಷಾಢ ತನ್ನನ್ನು ಕಾಪಾಡಲಿಕ್ಕೆ ,ಹುಡುಗನ ಉರಿಗಣ್ಣಿನ ಅಗ್ನಿಯಾಸ್ತ್ರದಿಂದ ತನ್ನ ರಕ್ಷಿಸಲಿಕ್ಕೆ ಶ್ರಾವಣವನ್ನು ಕಳಿಸಿಯೇ ಬಿಟ್ಟಿತು. ಅದೆನು ಸೊಬಗು-ಬೆಡಗು-ಬಿನ್ನಾಣ ಈ ಶ್ರಾವಣ ಬರುವಾಗ..ಕಣ್ಣಿನ ಕಾಡಿಗೆ, ಕೈ ತುಂಬ ಬಳೆಯ ನಾದ,ನೆರಿಗೆಯಂಚಿನ ಸರಪರದ ಸದ್ದು, ಮುಡಿಯ ತುಂಬ ಘಮ್ಮೆನುವ ಮಲ್ಲಿಗೆಯ ಕಂಪು, ನೋಡಿದರೆ ಮತ್ತೂ ನೋಡಬೇಕೆಂಬ ಸೊಬಗಿನ ಶ್ರಾವಣ ಹುಡುಗನ ಯುದ್ಧವನ್ನೆ ನಿಲ್ಲಿಸಿತು.
“ಒಲವೆ ನಿನ್ನಯ ಸನಿಹ ತಂಗಾಳಿ ಸುಳಿದಂತೆ
ಶ್ರಾವಣದ ಹದಮಳೆಯು ಬೇಕಾಗಿದೆ
ಅಂತಃಪುರದಾ ಒಳಗೆ ಹೊಂಗೆಮರ ಹೂ ಬಿಡಲು
ಪಲ್ಲಂಗದಂಚಿಗೆ ಚಂದ್ರ ಬರಬೇಕಿದೆ”.. ಬಂದ ಶ್ರಾವಣದಿಂದ ತಂಪಾದ ಹುಡುಗ ಅಂತಃಪುರದಲ್ಲಿ ಕವಿಯಾಗುತ್ತಾನೆ.
“ಹೊಳಿ ಹೊಕ್ಕಿತೊ ಇವಳೊಲವ ತೆರೆಗೆ
ನೆಲ ನೆಕ್ಕಿತೊ ಮಳಿ ಮುಗಿಲ ನಾಲಿಗೆ,
ಮಾಳಿಗಿ ಮನಿಯ ಒಳಮನೆಯ ತುಂಬ
ಹೋಳಿಗಿಯ ಘಮವೊ
ಶ್ರಾವಣ ಬರೆದಿಟ್ಟ ಚಿತ್ರಪಟವೊ”
ಎಂದು ಕಾಮನಬಿಲ್ಲಿನಲ್ಲಿ ಕುಂಚವನ್ನು ಅದ್ದಿ ಬಣ್ಣದ ಚಿತ್ತವನ್ನು ಬಿಡಿಸುವ ಕಲಾವಿದನಾಗುತ್ತಾನೆ.
ಭುವಿಯಲ್ಲಿ ಪ್ರತಿ ಜೀವಿಗಳ ಮಿಲನೋತ್ಸವದ ಶ್ರಾವಣ ಬರಿ ಶೃಂಗಾರವಷ್ಟೆ ಅಲ್ಲ ವೃತ-ಕತೆಗಳ ಅಧ್ಯಾತ್ಮದ ಆರಂಭಕೂಡ ಹೌದು. ಸಾಲು ಸಾಲು ಹಬ್ಬಗಳ ಕರೆತರುವ ಶ್ರಾವಣ ಹೆಂಗಳೆಯರ ಸಡಕರದ ಮಾಸ. ಪಂಚಮಿ , ವರಮಹಾಲಕ್ಷ್ಮೀ,ಮಂಗಳಗೌರಿ, ಎನ್ನುತ್ತಾ ತವರಿನ ಬಾಂಧವ್ಯ ಗಟ್ಟಿಯಾಗಿಸುವ ಭಾವನಾತ್ಮಕ ಮಾಸ ಈ ಶ್ರಾವಣ. ಸಹೋದರ ಸಹೋದರಿಯರ ಸಂಬಂಧ ಚಂದವಾಗಿರಿಸುವ ರಕ್ಷಾಬಂಧನ, ಪುಟ್ಟ ಪುಟ್ಟ ಮಕ್ಕಳನ್ನ ಮುದ್ದುಕೃಷ್ಣ ರಾಧೆಯರಾಗಿಸಿ ನಲಿಯುವ ಕೃಷ್ಣಜನ್ಮಾಷ್ಟಮಿ ಎಲ್ಲವೂ ಕೂಡ ಹೆಣ್ಣುಮಕ್ಕಳಿಗೆ ಸಂಭ್ರಮ. ಅಡುಗೆಯ ಮನೆಯಲ್ಲಿ ತಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದ ಹಾಗೆ ಸಿದ್ಧಗೊಳ್ಳುವ ಕಡುಬು ಕಜ್ಜಾಯದ ಘಮ ಮನೆಯೆಲ್ಲ ತುಂಬಿಕೊಂಡು ಒಂದು ಚಂದದ ವಾತಾವರಣ ಈ ಶ್ರಾವಣದಲ್ಲಿ ಅನುಭವಿಸಲು ಸಿಗುತ್ತದೆ.
ಬಂಧು ಬಾಂಧವರ ಆಗಮನ ಆದರಾತಿಥ್ಯ, ರೈತರಿಗೆ ಕೈ ತುಂಬ ಕೆಲಸದ ಈ ಮಾಸ ವೈಶಿಷ್ಟ್ಯವಾದದ್ದು. ಮಠಮಂದಿರಗಳಲ್ಲಿ ಪುರಾಣ-ಪ್ರವಚನದಿಂದ ಭಕ್ತಿಯ ಭಾವವನ್ನೂ ಬಿತ್ತುವುದು ಈ ಶ್ರಾವಣವೇ. ಆಷಾಢದ ಆಸಾರನಿಂದ ಬೇಸರಗೊಂಡ ಹೆಣ್ಣುಮಕ್ಕಳು ಶ್ರಾವಣದಲ್ಲಿ ಅಕ್ಕಪಕ್ಕದವರಲ್ಲಿ,ತವರು ಎಂದು ಅರಿಶಿಣ ಕುಂಕುಮದ ನೆಪದಲ್ಲಿ ಓಡಾಡುತ್ತಾರೆ. ಆ ಕೆಲಸ ಕಜ್ಜಾಯ ಎಂದು ಚುರುಕಾಗುತ್ತಾರೆ. ಅಲ್ಲಲ್ಲಿ ನೃತ್ಯ ಸಂಗೀತದಂತಹ ಮನೋಲ್ಲಾಸದ ಕಾರ್ಯಕ್ರಮದಿಂದ ರಸಿಕರ ಸಂಜೆಗಳು ರಂಗೇರಿ ಆಹ್ಲಾದಪೂರ್ಣವಾಗಿರುವ ಕಾಲ ಶ್ರಾವಣ. ಹಾಗೆಂದು ಈ ಶ್ರಾವಣ ಕವಿಯ ಕಣ್ಣಿಗೆ ರಾವಣನಂತೆಯು ಕಾಣುತ್ತಾನೆ…ಕಡಲಿಗೆ ಬಂತು ಶ್ರಾವಣ ಕುಣಿದ್ಹಾಂಗ ರಾವಣ ಎಂದು ಬೇಂದ್ರೆಯವರು ಹೇಳುತ್ತಾರೆ. ಗಾಳಿಯ ಹಾಸುವಿಕೆ ಭೈರವನ ರೂಪದಂತೆ ಕಾಣುತ್ತದೆ. ಕಗ್ಗಲ್ಲಿನ ಕಾಡಿನ ಕರಿಗಪ್ಪಾಗಿಸುವ ಶ್ರಾವಣದ ಮಳೆ ಈ ಕವಿಗಳ ಎದೆಯೊಳಗೆ ಸುರಿಯುತ್ತಲೆ ಇರುತ್ತದೆ. ಕವಿಗಳು ಬಿಡಿ ಅವರಿಗೆ ಕಾಲದ ಹಂಗಿಲ್ಲದ ನಿತ್ಯ ಶ್ರಾವಣವನ್ನು ಅನುಭವಿಸುವವರು. ಇರಲಿ..
ಈ ಶ್ರಾವಣದ ಮಂಗಳಗೌರಿ ವೃತ ಹೊಸ ವಧುವಿಗೆ ತವರಿನ ಬಾಂಧವ್ಯ ನಿರಂತರವಾಗಿಸುವ ಪ್ರತಿವಾರದ ಹಬ್ಬ. ಗೆಜ್ಜೆವಸ್ತ್ರಗಳಿಂದ ಅಲಂಕೃತವಾದ ಮಂಗಳಗೌರಿ ಐದು ಜನ ಮುತ್ತೈದೆಯರಿಗೆ ಬಾಗಿನವನ್ನು ದಾನಮಾಡುವ ಸಡಗರಕ್ಕೆ ಹೆತ್ತಮ್ಮ ಬರಲೆ ಬೇಕು. ತಾಯಿಯ ಮಡಿಲಿನ ಸುಖ ಈ ವೃತದಿಂದ ಪ್ರತಿವಾರವೂ ಕೂಡ ನವವಧುವಿಗೆ ನೀಡುವಂತಹ ,ಮನೆಮನಗಳ ನೆಮ್ಮದಿಗೆ, ದಾಂಪತ್ಯ ಮುತ್ತೈದೆಯ ಭಾಗ್ಯಕ್ಕಾಗಿ ಇರುವ ಭಾವನಾತ್ಮಕ ಹಬ್ಬ ಈ ವೃತ. ನಿಜವಾಗಿ ಹಬ್ಬಗಳು ಸಂಬಂಧಗಳನ್ನು ಮತ್ತಷ್ಟು ಹತ್ತಿರವಾಗಿಸುವಂತಹದ್ದು ಹಾಗಾಗಿಯೇ ಈ ವೃತಗಳು ಹಬ್ಬಗಳು.
ಆದರೆ ಈ ವರ್ಷ ಶ್ರಾವಣ ಬಿರುಸಿನ ಮಳೆಯಾಗದೆ ಹೂಬಿಸಿಲಿನ ಬೇಸಗೆಯಾಗುತ್ತದೆಯೇನೊ ಎನ್ನಿಸುತ್ತದೆ…ಅದೇನೆ ಇರಲಿ ಪ್ರಕೃತಿ ತನ್ನ ಬದಲಾವಣೆಯನ್ನು ಮಾಡಿಕೊಂಡು ನಮಗೂ ಕೂಡ ಸುಖ ಆಹ್ಲಾದ ನೀಡಿಯೇ ನೀಡುತ್ತದೆ.
“ನಾರಿ ನಡುವಿನ ಕೊಡಪಾನ ಭಾರದ ಮಳೆಗೆ
ತರಗುಟ್ಟಿ ಚಳಿಯಂಗಿ ತೊಟ್ಟಿರುವ ಇಳೆಯು
ರವಿಯೆ ನಿಧಾನಿಸು ಸ್ವಲ್ಪ ರಮಣಿ ನಿದ್ರಿಸುತಿಹಳು
ತೋಳ ಮಾಲೆಯು ಕೊರಳಿಗಂಟಿಕೊಂಡಿಹುದು” ಇಂತಹ ಹಬ್ಬದ ಅಧ್ಯಾತ್ಮದಲ್ಲಿಯೂ ಕೂಡ…ಮೂಡುವ ಸೂರ್ಯನಿಗೆ ಒಂದು ಮನವಿ ಪತ್ರವನ್ನು ಈ ರಸಿಕರು ಕಳಿಸದೆಯೆ ಬಿಟ್ಟಾರೆಯೇ! ದಪ್ಪ ದಪ್ಪ ಭಾರವಾದ ಹನಿಗಳ ಮಳೆಯಲ್ಲಿ ,ಚಳಿಯ ನಡುಕದಲ್ಲಿ ಸಂಗಾತಿಯ ತೋಳ ತೆಕ್ಕಯಲ್ಲಿದ್ದೇನೆ ಸೂರ್ಯ ದೇವ ಸ್ವಲ್ಪ ತಡವಾಗಿ ಬಾರೊ ಎಂದು ಪ್ರತಿ ಹಗಲಲ್ಲೂ ಒಂದು ಪ್ರಾರ್ಥನೆ ಮಾಡಿಸುವ ಈ ಶ್ರಾವಣ ಒಂದು ಅಚ್ಚುಮೆಚ್ಚು ಮಾಸ. ಆದಷ್ಟು ಹೂವರಳಿದಂತೆ ಮನಸ್ಸನ್ನು ಅರಳಿಸಿಕೊಂಡು ಬರುವ ಶ್ರಾವಣವನ್ನು ಸ್ವಾಗತಿಸಿ ನಾವು ಒಂದಷ್ಟು ರಸಿಕ ಕವಿತೆಗಳ ಬರೆದು ಧನ್ಯರಾಗೋಣ…





Leave a Reply