ಲೇಖಕರು
ಅಪರ್ಣಾ ಹೆಗಡೆ
ಹಗಲು ಅರ್ಧವಾಗಿ ರಾತ್ರಿ ದೀರ್ಘವಾಗೊ ಈ ಶರತ್ಕಾಲದಲ್ಲಿ ಆಕಾಶ ಎಷ್ಟು ಸ್ವಚ್ಛವಾಗಿರತ್ತೆ ಗೊತ್ತೇನೋ! …ನನಗಿಂತ ಚೆನ್ನಾಗೆ ನಿನಗೆ ಗೊತ್ತಿರತ್ತೆ ಬಿಡು. ಶಿಕಾರಿಗೆ ಹೋಗೊ ನಿನಗೆ ಆಕಾಶ ಏನು ಕಾಡು ,ನದಿ, ಪ್ರಾಣಿ ಬಗ್ಗೆನೂ ಗೊತ್ತಿರತ್ತೆ.
ಒಂದ್ ಸರತಿ ಮಿಕವನ್ನ ಹೊಡ್ದು ತರೋವಾಗ ಒಂದು ಹಳದಿ ಹೂವನ್ನ ತಂದಿದ್ದೇ ನೋಡು ಎಷ್ಟು ಚಂದ ಇತ್ತು. ಅದರ ಪರಿಮಳ ಇಡೀ ಮನೆ ತುಂಬೋಗಿತ್ತು. ದಪ್ಪ ಎಸಳು,ಒಳಗೆ ಕುಸುಮದ ಹತ್ರ ಬಿಳಿ ಆದರೆ ತೊಟ್ಟು ಮಾತ್ರ ಸಪೂರ. ಇನ್ನೊಂದ್ ಸರತಿ ಅಂತದ್ದು ಸಿಕ್ಕದ್ರೆ ತಗೋ ಬಾರೋ.
ಇನ್ನೂ ಚುಮುಚುಮು ಅನ್ನೋ ಕಪ್ಪುಕಪ್ಪು ಕತ್ಲೆ ತುಂಬ್ಕೊಡಿರೋವಾಗಲೆ ಜಾವದ ಸೂರ್ಯ ಕಣ್ಣುಜ್ಜೋಕೆ ಶುರು ಮಾಡ್ಬಿಡತಾನೆ. ಮಾಗಿಯ ಘಮಘಮದ ಬೆಳಗಿನ ಮಂದ ಪರಿಮಳ ಮೂಗಿಗೆ ಸೋಕಿ ಮೂಗಿನ ಒಳಗೆಲ್ಲಾ ಅಡರಿ ಒಂಚೂರು ಉರಿಉರಿಯಾಗಿ ಒಂದು ಆ ..ಕ್ಷೀ ಹೊದಕಲಿನ ಒಳಗಿಂದಲೆ ಬಂದು ಮತ್ಚೂರು ಗಟ್ಟಿ ಸುತ್ಕೊಂಡು ಮಲಗಿದ್ರೆ ಅರ್ಧ ಆಗಿರೋ ಕನಸು ಪೂರ್ಣ ಆಗೋ ಅವಸರ.
ಎಂತ ಕನಸು ಅಂತಿಯಾ? .
ಆ ಬೆಳ್ಬೆಗೆನೆ ಲೈಟ್ ಪಿಂಕ್ ಕಲರ್ದು ಅದ್ರ ಮೇಲೆ ಪರ್ಪಲ್ ಕಸೂತಿ ಡಿಸೈನ್ ಇರೊ ಮಿಡಿ, ಪರ್ಪಲ್ ಕಲರ್ದು ಊದ್ದ ಸ್ಲೀವಿನ ಟಾಪ್ ಹಾಕ್ಕೊಂಡು ಖಾಲಿ ಚಬ್ಬೆ ಹಿಡಕೊಂಡು ಇಬ್ಬನಿಲಿ ಒದ್ದೆಯಾಗ್ತಾ ಹಿತ್ಲಲ್ಲಿ ಓಲಾಡ್ತಿದ್ದ ನನಗೆ ಆಗಾಗ ತೆಳ್ಳಗೊಂದು ವಿಸಲ್ ಸೌಂಡ್ ಟಚ್ ಆಗತ್ತಲ್ಲ ಒದ್ದೆ ಎಲ್ಲ ಆರಿಸ್ಬಿಡತ್ತೆ ಕಣೋ! Hawayein ಫೀಲ್ಮಿಂದು ಶಾರೂಖಾನ್ದು ಅದೆ ಟ್ರೈನಲ್ಲಿ …
चेहरा क्यूँ मिलता तेरा यूँ ख़्वाबों से मेरे
ये क्या राज़ है
कल भी मेरी ना थी तू ना होगी तू कल
मेरी आज है
हवाएं हवाएं
ओ ओ ओ ओ ओ ओ ओ ओ ओ ओ
ನೀನು ವಿಸಲ್ದಲ್ ಆ ಹಾಡು ಹೇಳತಿದ್ರೆ ಮಿಡಿ ಹಿಡಕೊಂಡು ಹಂಗೆ ಆಚಿಚೆ ಖಾಲಿ ಚಬ್ಬೆ ಹಿಡಕೊಂಡು ಆ ಗಿಡ ಈ ಗಿಡ ಸುತ್ತುಹಾಕ್ತಾ ತುದಿ ಕಣ್ಣಲ್ಲಿ ಬಾಲ್ಕನಿಲಿ ಸಾಂಡು ಬನಿಯನ್ ಹಾಕಿ ಇಷ್ಟೆ ಇಷ್ಟು ತೊಡೆ ಮೇಲಿನ ಕೂದುಲು ಕಾಣೋತರದ್ದು ಚಡ್ಡಿ ಹಾಕ್ಕೊಂಡು ನನ್ನ ನೋಡತಿದ್ದ ನಿನ್ನ ನೋಡ್ತಾ ಇದ್ನಾ ಅಜ್ಜಿ ಕೂಗೋದು ಕೇಳ್ಬಿಡ್ತು ಕಣೋ ” ಈ ಹೂವಿನ ಚಬ್ಬೆ ಎಲ್ಲೆ ದಾಕ್ಷಾಯ್ಣಿ , ಸೂರ್ಯ ಬಂದು ಮೂರ್ತಾಸಾದರೂ ಮಲಗಿದಾಳೆ ರಂಗೋಲಿ ಹಾಕ್ಲಿಕ್ಕಾದರೂ ಎಬ್ಸೆ ನಿನ್ನ ಮಗಳನ್ನಾ”
ಎಚ್ರ ಆಗ್ಬಿಡ್ತು ಕಣೋ …
ಕವುಚಿ ಮನಗಿದ್ನಾ ಎದೆ ಅಡಿಗಡೆ ನಿನ್ನ ಫೋಟೊ ಇಟ್ಕೊಂಡಿದ್ನಲ್ವಾ ಅದಕೊಂದು ಪಪ್ಪಿ ಕೊಟ್ಟು ಎದ್ಬಿಟ್ಟೆ. ಹೂಂ. ನೀನು ಕುತ್ಗಿಗೆ ಟೈ ಬಿಗ್ದು ಎ.ಸಿ ಆನಾಗಿರೋ ಆಫಿಸ್ ರೂಂನಲ್ಲಿ ಲ್ಯಾಪ್ಟಾಪ್ ಕುಟ್ತಾ ಇರ್ತಿಯಾ. ಹಾಬಿಗೆ ಆಗಾಗ ಶಿಕಾರಿ ಮಾಡತಿಯಾ.ನಾನು ಸೀರೆ ಉಟ್ಕೊಂಡು ಚಾಕ್ ಫೀಸ್ ಹಿಡ್ಕೊಂಡು ಪಾಠ ಮಾಡತಾ ಇರ್ತಿನಿ.
ಪಸ್ಟ್ ಟೈಂ ಮುತ್ಕೊಟ್ಟಿದ್ದು ಚಳಿಗಾಲದ ಸೇವಂತ್ಗೆ ಗಿಡಕ್ಕೆ ನೀರು ಸಿಕ್ಕಿದಷ್ಟು ತಂಪಾಗಿತ್ತು. ಸುಮ್ ಸುಮಾರು ಆರು ಗಂಟೆ ಹೊತ್ತಿಗೆ ತೇರಿನ ಜನರ ಮಧ್ಯ ಬಂದು ಮಸಾಲೆ ಮಂಡಕ್ಕಿ ತಿಂತಾ ನಿಂತಿದ್ದ ನನ್ನ ಕೈ ಹಿಡಕೊಂಡು ಆ ಗಣಪತಿ ಕುಂಡ್ರಿಸ್ತಾರಲ್ಲೋ ಅದ್ರ ಹಿಂದೆ ಎಳ್ಕೊಂಡು ಹೋದೆ ನನ್ನ ಕೈಲಿದ್ದ ಮಂಡಕ್ಕಿ ಎಲ್ಲ ಅರ್ಧಕ್ಕರ್ಧ ಚೆಲ್ಲೋಗಿತ್ತೊ. ಗಣಪತಿ ಕುಂಡ್ರೋ ಮಂಟಪ ಆಚೆಕಡೆ ಬಳೆ ಅಂಗಡಿ ಸಾಲು ಮಧ್ಯ ಇಷ್ಟೆ ಇಷ್ಟು ಜಾಗ ಯಪ್ಪಾ ಒತ್ಕೊಂಡು ನಿಂತ್ಕೊಂಡು ಒಂದು ಮುತ್ಕೊಟ್ಟೆ ನೋಡು ಬಿದ್ದೋಗಂಗಾಗಿತ್ತು ಕಣೋ. ಬೆಂಡು ಬತ್ತಾಸ್ಗಿಂತ ಸ್ವೀಟಿತ್ತು.
ಲೈಫ್ ಹೀಗೆ ಅಲ್ವೇನೋ. ಕನಸೆನೋ ದೊಡ್ದಿರತ್ತೆ ಆದ್ರೆ ಮಿಡಿ ತರಾ ಚಿಕ್ಕದಾಗಿ ನನಸಾಗೋದು ಕಷ್ಟ. ಮಾಗಿ ಕಾಲದ ಮರ ಎಲೆ ಉದ್ರಿಸಿ ಬೋಳು ಬೋಳಾದ ತರಾ ಕನಸಿನ ದೆರಗು ಒಬ್ಬಳಿಸ್ಕೊಳ್ಳೋದು.
ಸರಿ ಕಣೋ ಬೈ .ಅರ್ಧ ಆಗಿರೋ ಕನಸು ಇವತ್ ಪೂರ್ತಿ ಆಗತ್ತಾ ನೋಡತೀನಿ.






Leave a Reply