ಜೋಯಿಡಾ: ತಾಲೂಕಿನ ಕುಂಬಾರವಾಡ (ಕಾತೇಲಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಕೊಂದರದ ಮುಖ್ಯ ಶಿಕ್ಷಕ ಈರಣ್ಣ ಶಿವಪುತ್ರಪ್ಪ ಪಗಡಿ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಳಿಯಾಳ ತಾಲೂಕಿನ ಮದನಳ್ಳಿ ಗ್ರಾಮದವರಾದ ಈರಣ್ಣ ಪಗಡಿ ಅವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದು, 1999ರ ಫೆಬ್ರುವರಿ 23ರಂದು ಹಳಿಯಾಳ ತಾಲೂಕಿನ ಮೊದಲಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಬಳಿಕ 2003ರ ನವೆಂಬರ್ 28ರಂದು ಜೋಯಿಡಾ ತಾಲೂಕಿನ ಗುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ, ಅಲ್ಲಿ 13 ವರ್ಷಗಳ ಕಾಲ ಜನಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
2016ರ ಆಗಸ್ಟ್ 2ರಿಂದ ಕೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಒಟ್ಟು 27 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆ ಸಲ್ಲಿಸಿದ್ದಾರೆ.
ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ, ದಟ್ಟ ಅರಣ್ಯದ ಪ್ರಕೃತಿ ಮಡಿಲಿನಲ್ಲಿರುವ ಕೊಂದರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಎಸ್ಡಿಎಂಸಿ, ಗ್ರಾಮಸ್ಥರು, ದಾನಿಗಳು, ಗಣ್ಯರು ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಕಾರ್ಯನಿರ್ವಹಿಸಿದ್ದಾರೆ.
ಮಕ್ಕಳನ್ನು ಪ್ರತಿಭಾ ಕಾರಂಜಿ, ಇಕೋ ಕ್ಲಬ್, ಪ್ರೇರಣಾ ಕ್ಲಬ್ ಸೇರಿದಂತೆ ವಿವಿಧ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಕೊಂದರ ಶಾಲೆಯಲ್ಲಿ ಮಕ್ಕಳಿಂದಲೇ ಕೈತೋಟ ನಿರ್ಮಿಸಿ ವಿವಿಧ ತರಕಾರಿಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಿದ್ದಾರೆ. ಶಾಲೆಯಲ್ಲಿ ಬೆಳೆದ ತಾಜಾ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ವ್ಯವಸ್ಥೆ ಮಾಡುವ ಮೂಲಕ ಮಕ್ಕಳಲ್ಲಿ ಕೃಷಿ ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ.
ಅವರ ಸೇವೆಗೆ ಈಗಾಗಲೇ ಹಲವು ಪ್ರಶಸ್ತಿಗಳು ಲಭಿಸಿವೆ. 2019-20ನೇ ಸಾಲಿನಲ್ಲಿ ನಲಿ-ಕಲಿ ಬೋಧನಾ ವ್ಯವಸ್ಥೆಯಲ್ಲಿ ಉತ್ತಮ ಸಾಧನೆಗಾಗಿ ‘ಉತ್ತಮ ನಲಿ-ಕಲಿ ಶಾಲೆ’ ಪ್ರಶಸ್ತಿ ಹಾಗೂ 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು, ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ವತಿಯಿಂದ ಡಾ. ಎಸ್. ರಾಧಾಕೃಷ್ಣನ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಇದಲ್ಲದೇ, ಕೊಂದರ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ಕುಮಾರ ಪ್ರದೀಪ ಶಂಕರ ಖೋಲಕರ ಅವರನ್ನು ಶಿಕ್ಷಣಕ್ಕಾಗಿ ದತ್ತು ಪಡೆದುಕೊಂಡಿದ್ದು, ಪ್ರಸ್ತುತ ಅವರು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ 5ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವ ಅವರು, ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳ ನೋಟಬುಕ್ ಹಾಗೂ ಲೇಖನ ಸಾಮಗ್ರಿಗಳ ವೆಚ್ಚವನ್ನೂ ಸ್ವತಃ ಭರಿಸುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸುದೀರ್ಘ ಹಾಗೂ ಗಮನಾರ್ಹ ಸೇವೆಯನ್ನು ಗುರುತಿಸಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿರುವ ಈರಣ್ಣ ಪಗಡಿ ಅವರಿಗೆ ತಾಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕ ವೃಂದ, ಗಣ್ಯರು, ಹಳೆಯ ವಿದ್ಯಾರ್ಥಿಗಳು, ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.














Leave a Reply