ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಜೋಯಿಡಾದಲ್ಲಿ ಭಾರಿ ಪ್ರತಿಭಟನೆ: ಅಧಿಸೂಚನೆ ರದ್ದತಿಗೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ

ಹಂಚಿಕೊಳ್ಳಿ

ವರದಿ: ಅನಂತ ದೇಸಾಯಿ

ಜೋಯಿಡಾ: ಕಸ್ತೂರಿರಂಗನ್ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ (ESA) ಕರಡು ಅಧಿಸೂಚನೆ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಇಎಸ್‌ಝಡ್ (ESZ) ಕರಡು ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ಜೋಯಿಡಾದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಜನಜೀವನ, ಕೃಷಿ ಹಾಗೂ ಸ್ಥಳೀಯರ ಹಕ್ಕುಗಳ ರಕ್ಷಣೆಗಾಗಿ ಸಾವಿರಾರು ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರಮುಖ ವಾಣಿಜ್ಯ ಕೇಂದ್ರವಾದ ಶಿವಾಜಿ ಸರ್ಕಲ್‌ನಲ್ಲಿ ಶನಿವಾರ ಬೆಳಿಗ್ಗೆ ಜಮಾಯಿಸಿದ ಪ್ರತಿಭಟನಾಕಾರರು, ನಂತರ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ಥಳೀಯ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದರು.

ಜನರ ಸಮ್ಮತಿ ಇಲ್ಲದೆ ಅಧಿಸೂಚನೆ ಬೇಡ:
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ, ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಗಳ ಸ್ವರೂಪ ಮತ್ತು ಅದರಿಂದ ಸ್ಥಳೀಯರಿಗೆ ಎದುರಾಗಲಿರುವ ಕಾನೂನಾತ್ಮಕ ಸಮಸ್ಯೆಗಳ ಕುರಿತು ವಿವರಣೆ ನೀಡಿದರು. ಜೋಯಿಡಾ ತಾಲೂಕಿನ ಭೌಗೋಳಿಕ ವಾಸ್ತವವನ್ನು ಅರಿಯದೆ ಇಂತಹ ಕಠಿಣ ನಿಯಮಗಳನ್ನು ಹೇರಬಾರದು ಎಂದು ಒತ್ತಾಯಿಸಿದರು.

ಕಾಳಿ ಬ್ರಿಗೇಡ್‌ನ ಮಾಜಿ ಮುಖ್ಯ ಸಂಚಾಲಕ ರವಿ ರೇಡಕರ್ ಮಾತನಾಡಿ, ಅರಣ್ಯ ಇಲಾಖೆಯ ಹಿಂದಿನ ಯೋಜನೆಗಳು ಸ್ಥಳೀಯರ ಜೀವನದ ಮೇಲೆ ಬೀರಿದ ದುಷ್ಪರಿಣಾಮಗಳನ್ನು ಪ್ರಸ್ತಾಪಿಸಿದರು. ಯಾವುದೇ ಹೊಸ ನಿಯಮ ಜಾರಿಗೆ ತರುವ ಮುನ್ನ ಕಡ್ಡಾಯವಾಗಿ ಗ್ರಾಮಸಭೆಗಳನ್ನು ನಡೆಸಿ ಜನಾಭಿಪ್ರಾಯ ಪಡೆಯಬೇಕು. ಇಂಗ್ಲಿಷ್‌ನಲ್ಲಿರುವ ಕರಡು ಅಧಿಸೂಚನೆಯನ್ನು ಸ್ಥಳೀಯರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಪ್ರಕಟಿಸಿ ಹಂಚಬೇಕು ಎಂದು ಆಗ್ರಹಿಸಿದರು.

ಸಮತೋಲನದ ಅಗತ್ಯವಿದೆ:
ಹೋರಾಟದಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಮುಖಂಡರು ಮತ್ತು ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಜೋಯಿಡಾದ ಜನರ ಉದ್ಯೋಗ, ಮೂಲಸೌಕರ್ಯ ಮತ್ತು ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಅರಣ್ಯವನ್ನೇ ಅವಲಂಬಿಸಿವೆ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸ್ಥಳೀಯರ ಬದುಕನ್ನು ಕಸಿದುಕೊಳ್ಳಬಾರದು, ಪರಿಸರ ಮತ್ತು ಜನಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಧುರೀಣರಾದ ಅಜೀತ್ ಥೋರವಥ, ಅರುಣ ಕಾಮರೇಕರ, ವಿನಯ ದೇಸಾಯಿ, ವರ್ತಕರ ಸಂಘದ ಪದಾಧಿಕಾರಿಗಳಾದ ಸುಧಾಕರ್ ದೇಸಾಯಿ, ರಫೀಕ್ ಖಾಜಿ, ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ್, ವಿವಿಧ ಸಂಘಟನೆಗಳ ಪ್ರಮುಖರಾದ ಸತೀಶ ನಾಯ್ಕ್, ಕೃಷ್ಣಾ ದೇಸಾಯಿ ಸೇರಿದಂತೆ ಸಾವಿರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಉಮೇಶ್ ವೇಳಿಪ್ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆಯ ಬಳಿಕ ಕೇಂದ್ರ ಸರ್ಕಾರಕ್ಕೆ ಬರೆದ ಸವಿಸ್ತಾರ ಮನವಿಯನ್ನು ತಹಶೀಲ್ದಾರ್ ಅವರ ಮೂಲಕ ಸಲ್ಲಿಸಲಾಯಿತು. ಸ್ಥಳೀಯರ ಹಿತಾಸಕ್ತಿ ಕಾಯುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಪ್ರಮುಖರು ಎಚ್ಚರಿಸಿದರು.

Leave a Reply

Your email address will not be published. Required fields are marked *