
*ಯಲ್ಲಾಪುರ: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪುಣೆ ಮೂಲದ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 52ರ ಅರಬೈಲ್ ಘಟ್ಟದ ಹತ್ತಿರ ಭಾನುವಾರ ರಾತ್ರಿ ನಡೆದಿದೆ.
ಮೃತರ ವಿವರ: ಮಹಾರಾಷ್ಟ್ರದ ಪುಣೆ ಸಮೀಪದ ನಿವಾಸಿಗಳಾದ ಶರ್ಮಿಳಾ ರಾಜನ್ ಕುಲ್ತೆ (59) ಹಾಗೂ ಅವರ ಮಗಳು ಮೃಣ್ಮಯಿ ರಾಜನ್ ಕುಲ್ತೆ (32) ಮೃತಪಟ್ಟ ದುರ್ದೈವಿಗಳು. ಗಾಯಗೊಂಡ ಕಾರು ಚಾಲಕನನ್ನು ಹೊಸಪೇಟೆ ಸಮೀಪದ ಮುರುಗೋಡ ನಿವಾಸಿ ಆಲಂಬಾಷಾ ವಲಿಸಾಬ್ ಶೇಖ್ (55) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಮೃತ ಮಹಿಳೆಯರು ಚಾಲಕ ಆಲಂಬಾಷಾ ಅವರ ಕಾರಿನಲ್ಲಿ ಪುಣೆಯಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಸೆಪ್ಟೆಂಬರ್ 6ರ ಭಾನುವಾರ ರಾತ್ರಿ 7:00 ರಿಂದ 7:30 ರ ಸುಮಾರಿಗೆ ಕಾರು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ ಚಲಿಸುತ್ತಿತ್ತು. ಈ ವೇಳೆ ಯಲ್ಲಾಪುರ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಲಾರಿಯೊಂದು ಕಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸ್ಥಳದಲ್ಲೇ ಸಾವು: ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಶರ್ಮಿಳಾ ಮತ್ತು ಮೃಣ್ಮಯಿ ಅವರಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಚಾಲಕ ಆಲಂಬಾಷಾ ಅವರನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಲಾರಿ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
- ವಿಷಯ ತಿಳಿಯುತ್ತಿದ್ದಂತೆ ಯಲ್ಲಾಪುರ ಪೊಲೀಸ್ ನಿರೀಕ್ಷಕರಾದ ಸುರೇಶ ಬಿ. ಕುಂಬಾರ, ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಚಾಲಕನಿಗಾಗಿ ಹುಡುಕಾಟ ಮುಂದುವರಿದಿದೆ.
















Leave a Reply