Horrible Accident | ಧರ್ಮಸ್ಥಳಕ್ಕೆ ಹೊರಟಿದ್ದವರಿಗೆ ಎದುರಾದ ಜವರಾಯ: ಭೀಕರ ಅಪಘಾತದಲ್ಲಿ 6 ಜನರ ದುರ್ಮರಣ!

ಹಂಚಿಕೊಳ್ಳಿ

ಯಲ್ಲಾಪುರ(ಉತ್ತರಕನ್ನಡ): ತಾಲೂಕಿನ ಅರಬೈಲ್ ಘಟ್ಟದ ಬಳಗಾರ್ ಸಮೀಪ ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಕರಳು ಹಿಂಡುವ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ವಾಹನ ಹಾಗೂ ಲಾರಿಯ ನಡುವೆ ನಡೆದ ಈ ಭೀಕರ ಡಿಕ್ಕಿಯಲ್ಲಿ ಆರು ಜನ ಸ್ಥಳದಲ್ಲೇ ದಾರುಣವಾಗಿ ಸಾ*ವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ತೂಫಾನ್ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇನ್ನು ಮೂವರು ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃ*ತರೆಲ್ಲರೂ ಧಾರವಾಡ ಮೂಲದ ‘ಸ್ವಿಗ್ಗಿ’ ಸಿಬ್ಬಂದಿ

​ದುರಂತಕ್ಕೀಡಾದ ತೂಫಾನ್ ವಾಹನದಲ್ಲಿ (KA-19-AA-5920) ಚಾಲಕ ಸೇರಿ ಒಟ್ಟು ಒಂಬತ್ತು ಜನರಿದ್ದರು. ಮೃ*ತಪಟ್ಟವರೆಲ್ಲರೂ ಧಾರವಾಡ ಮೂಲದವರಾಗಿದ್ದು, ಅಲ್ಲಿ ಸ್ವಿಗ್ಗಿ (Swiggy) ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಎಲ್ಲ ಗೆಳೆಯರು ಸೇರಿ ನಿನ್ನೆ ರಾತ್ರಿ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಅರಬೈಲ್ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ (KA-22-AA-1008) ಇವರ ವಾಹನಕ್ಕೆ ದಾರುಣವಾಗಿ ಡಿಕ್ಕಿ ಹೊಡೆದಿದೆ.

ಮೃ*ತರ ವಿವರ: ​ಈ ಭೀಕರ ಅಪಘಾತದಲ್ಲಿ ವಾಹನದ ಚಾಲಕ 33 ವರ್ಷದ ಸಂಜೀವ್ (ಸಂಜಯ) ಅಂಗಡಿ, 48 ವರ್ಷದ ಬಸವರಾಜ್, 28 ವರ್ಷದ ಅಭಿಷೇಕ್ ಈಶ್ವರ್, 26 ವರ್ಷದ ಅಕ್ಷಯ್, 26 ವರ್ಷದ ಅಭಿಷೇಕ್ ಹಾಗೂ 32 ವರ್ಷದ ಮಂಜುನಾಥ ಚುಲಕಿ ಎಂಬ ಆರು ಮಂದಿ ದುರ್ದೈವಿಗಳು ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.

ಗಾಯಾಳುಗಳ ಸ್ಥಿತಿ ಗಂಭೀರ

​ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ 22 ವರ್ಷದ ಶಿವರಾಜ್ ದುರ್ಗಪ್ಪ ಮಡಿವಾಳ್, 28 ವರ್ಷದ ಚೆನ್ನಬಸಯ್ಯ ಬಸಲಿಂಗಯ್ಯ ಸಂಪಗಾವ ಹಾಗೂ ಸಚಿನ್ ಎಂಬ ಮೂವರನ್ನು ರಕ್ಷಿಸಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆಯ ಪೊಲೀಸರು ಹಾಗೂ ಹೆದ್ದಾರಿ ಗಸ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಜ್ಜುಗುಜ್ಜಾಗಿದ್ದ ವಾಹನದಿಂದ ಶ*ವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds