StateNews Exclusive: ಮೋದಿ ಸಂಪುಟಕ್ಕೆ ಮೇಜರ್‌ ಸರ್ಜರಿ, ಶಿಕ್ಷಣ ಸಚಿವರಾಗ್ತಾರಾ ನಿರ್ಮಲಾ ಸೀತಾರಾಮನ್?

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರದಲ್ಲಿ ಮಹತ್ತರ ರಾಜಕೀಯ ಸ್ಥಿತ್ಯಂತರಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಶೀಘ್ರದಲ್ಲೇ ಭಾರಿ ಮಟ್ಟದ ಸಂಪುಟ ಪುನಾರಚನೆ (Cabinet Reshuffle) ನಡೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದ್ದರಿಂದ, ಸರ್ಕಾರ ನಿಂತಿರುವುದೇ ಪ್ರಾದೇಶಿಕ ಪಕ್ಷಗಳ ಬೆಂಬಲದ ಮೇಲೆ. ಎನ್‌ಡಿಎ ಕೂಟಕ್ಕೆ 6 ಸಂಸದರನ್ನು ತಂದುಕೊಟ್ಟ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಹೆಚ್ಚಿನ ರಾಜಕೀಯ ಪ್ರತಿಫಲ ನೀಡುವುದು ಅನಿವಾರ್ಯವಾಗಿದೆ. ಮುಂಬರುವ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದಲೂ ಇದು ಮುಖ್ಯವಾಗಿದ್ದು, ಶಿವಸೇನೆಯ ಸಂಸದ ಶ್ರೀಕಾಂತ್ ಏಕನಾಥ್ ಶಿಂಧೆ ಅವರಿಗೆ ಸಂಪುಟ ದರ್ಜೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

ಅಲ್ಲದೇ, ನಿತೀಶ್ ಕುಮಾರ್ ಅವರ ಜೆಡಿಯು (JD-U) ಪಕ್ಷವನ್ನು ತೃಪ್ತಿಯಾಗಿಡುವುದು ಸರ್ಕಾರದ ಉಳಿವೆಗೆ ಅಗತ್ಯವಾಗಿರುವುದರಿಂದ, ಈ ಮೈತ್ರಿ ಪಕ್ಷದ ಮಿತ್ರರಿಗೆ ಅವಕಾಶ ನೀಡಲು ಸಂಪುಟ ಪುನಾರಚನೆಯಾಗುತ್ತಿದೆ ಎನ್ನಲಾಗುತ್ತಿದೆ. ಇದರೊಂದಿಗೆ ಹಿರಿಯ ನಾಯಕ ಅನುರಾಗ್ ಸಿಂಗ್ ಠಾಕೂರ್ ಅವರು ಮತ್ತೆ ಸಂಪುಟ ದರ್ಜೆಯೊಂದಿಗೆ ಮರಳುವ ಸಾಧ್ಯತೆಯಿದ್ದು, ಮೇರುತ್ ಸಂಸದ ಅರುಣ್ ಗೋವಿಲ್, ಬಿಹಾರದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಹಾಗೂ ಖಜುರಾಹೊ ಸಂಸದ ವಿಷ್ಣು ದತ್ ಶರ್ಮಾ ಸಂಪುಟ ಸೇರುವ ರೇಸ್‌ನಲ್ಲಿದ್ದಾರೆ. ಪಂಜಾಬ್ ವಲಯದಿಂದ ರಾಜಘವ್ ಚಡ್ಡಾ ಅಥವಾ ಅಶೋಕ್ ಕುಮಾರ್ ಮಿತ್ತಲ್ ಅವರಿಗೂ ಸ್ಥಾನ ಸಿಗುವ ಸಾಧ್ಯತೆಯಿದೆ.

ಪ್ರಸ್ತುತ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಶಿಕ್ಷಣ/ಮಾನವ ಸಂಪನ್ಮೂಲ ಸಚಿವಾಲಯಕ್ಕೆ (HRD) ವರ್ಗಾಯಿಸಿ, ಆರ್‌ಬಿಐ (RBI) ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ನೇರವಾಗಿ ಸಂಪುಟ ದರ್ಜೆಯೊಂದಿಗೆ ಹಣಕಾಸು ಸಚಿವ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ದೇಶದ ಆರ್ಥಿಕತೆಗೆ ಹೊಸ ವೇಗ ನೀಡಲು ಮತ್ತು ಜಾಗತಿಕ ಆರ್ಥಿಕ ಸವಾಲುಗಳನ್ನು ಎದುರಿಸಲು ತಾಂತ್ರಿಕವಾಗಿ ಪರಿಣತರಾದ (Technocrat) ವ್ಯಕ್ತಿಯ ಅಗತ್ಯ ಸರ್ಕಾರಕ್ಕಿದೆ. ಶಕ್ತಿಕಾಂತ ದಾಸ್ ಅವರು ಆರ್‌ಬಿಐ ಗವರ್ನರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವುದರಿಂದ, ಅವರನ್ನು ಹಣಕಾಸು ಸಚಿವರನ್ನಾಗಿ ತರುವ ಮೂಲಕ ಮಾರುಕಟ್ಟೆ ಮತ್ತು ಹೂಡಿಕೆದಾರರಲ್ಲಿ ನಂಬಿಕೆ ಹೆಚ್ಚಿಸುವುದು ಮೋದಿ ಅವರ ತಂತ್ರವಾಗಿದೆ.

ಇದೇ ವೇಳೆ ಇಂಧನ ಸಚಿವ ಮನೋಹರ್ ಲಾಲ್ ಕಟ್ಟರ್ ತಮ್ಮ ಖಾತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಪ್ರತಾಪರಾವ್ ಜಾಧವ್ ಆರೋಗ್ಯ ಖಾತೆಯನ್ನು ಕಳೆದುಕೊಂಡರೂ ಆಯುಷ್ ಸಚಿವಾಲಯವನ್ನು ಉಳಿಸಿಕೊಳ್ಳಬಹುದು ಮತ್ತು ಸಂಜಯ್ ದಿನಾ ಪಾಟೀಲ್ ಅವರು ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗುವ ಸಾಧ್ಯತೆಯಿದೆ. ಸಾರ್ವಜನಿಕರಲ್ಲಿ ಸರ್ಕಾರದ ಮೇಲಿರುವ ಸಣ್ಣಪುಟ್ಟ ಅಸಮಾಧಾನಗಳನ್ನು ಹೋಗಲಾಡಿಸಲು, ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದ ಸಚಿವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಜವಾಬ್ದಾರಿ ನೀಡುವುದು ಬಿಜೆಪಿಯ ಹಳೇ ತಂತ್ರವಾಗಿದೆ.

ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಹರ್ದೀಪ್ ಸಿಂಗ್ ಪುರಿ, ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಹಾಗೂ ರವನೀತ್ ಸಿಂಗ್ ಬಿಟ್ಟು ಸೇರಿದಂತೆ ಸುಮಾರು ಅರ್ಧ ಡಜನ್ ರಾಜ್ಯ ಸಚಿವರನ್ನು ಸಂಪುಟದಿಂದ ಕೈಬಿಡುವ ಮುನ್ಸೂಚನೆ ಇದೆ. ಇವರಲ್ಲಿ ರವನೀತ್ ಸಿಂಗ್ ಬಿಟ್ಟು ಅವರ ಬದಲಿಗೆ ತರುಣ್ ಚುಗ್ ಅವರು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ.

Leave a Reply

Your email address will not be published. Required fields are marked *