ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯ ಬಳಿಕ ಪೆಟ್ರೋಲ್, ಡೀಸೆಲ್ ಸೇರಿದಂತೆ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳಲ್ಲಿ ಸತತವಾಗಿ ಏರಿಕೆ ಕಂಡುಬಂದು ಜನಸಾಮಾನ್ಯರು ತತ್ತರಿಸಿದ್ದರು. ಆದರೆ, ಇಂದಿನಿಂದ (ಜುಲೈ 01) ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದ್ದು, ಆರ್ಥಿಕ ಹೊರೆಯಿಂದ ಕಂಗೆಟ್ಟಿದ್ದ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಭಾರಿ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಇಂಧನ ಬಿಕ್ಕಟ್ಟು ಮತ್ತು ಪ್ರಸ್ತುತ ದರ
ಈ ವರ್ಷದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ದಾಳಿಯ ನಂತರ, ಇರಾನ್ ತನ್ನ ನಿಯಂತ್ರಣದಲ್ಲಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯ ಮೂಲಕ ಕಚ್ಚಾ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿತ್ತು.
ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದವು. ಇದೀಗ ಹೋಟೆಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಜೂನ್ ತಿಂಗಳಲ್ಲಿ ಬರೋಬ್ಬರಿ 3,198 ರೂಪಾಯಿ ತಲುಪಿದ್ದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ದರವು, ದರ ಕಡಿತದ ಬಳಿಕ ಸದ್ಯ 3,021 ರೂಪಾಯಿಗೆ ಇಳಿಕೆಯಾಗಿದೆ.
ಸತತ ನಾಲ್ಕು ಬಾರಿ ಏರಿಕೆಯಾಗಿದ್ದ ವಾಣಿಜ್ಯ ಸಿಲಿಂಡರ್ ದರ
ಹಾರ್ಮುಜ್ ಜಲಸಂಧಿಯ ಇಂಧನ ಪೂರೈಕೆ ಅಡಚಣೆಯ ನಂತರ ಭಾರತದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಒಟ್ಟು ನಾಲ್ಕು ಬಾರಿ ಹೆಚ್ಚಿಸಿದ್ದವು. ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಮಾರ್ಚ್ನಲ್ಲಿ 144 ರೂಪಾಯಿ, ಏಪ್ರಿಲ್ನಲ್ಲಿ 195.50 ರೂಪಾಯಿ ಮತ್ತು ಮೇ ತಿಂಗಳಲ್ಲಿ ಬರೋಬ್ಬರಿ 993 ರೂಪಾಯಿಯಷ್ಟು ದರ ಏರಿಕೆ ಮಾಡಿದ್ದವು. ತದನಂತರ, ಜೂನ್ನಲ್ಲಿ ಮತ್ತೊಮ್ಮೆ 42 ರೂಪಾಯಿ ಹೆಚ್ಚಿಸಲಾಗಿತ್ತು. ಹೀಗೆ ಒಟ್ಟು ನಾಲ್ಕು ಕಂತುಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 1,374.50 ರೂಪಾಯಿಯಷ್ಟು ಹೆಚ್ಚಿಸಲಾಗಿತ್ತು.
ಅದೇ ರೀತಿ, ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕೂಡ ತೈಲ ಕಂಪನಿಗಳು ಎರಡು ಕಂತುಗಳಲ್ಲಿ ಒಟ್ಟು 89 ರೂಪಾಯಿಯಷ್ಟು ಹೆಚ್ಚಿಸಿದ್ದವು. ಮೊದಲು ಮಾರ್ಚ್ನಲ್ಲಿ 60 ರೂಪಾಯಿ ಮತ್ತು ನಂತರ ಜೂನ್ನಲ್ಲಿ 29 ರೂಪಾಯಿಯಷ್ಟು ದರವನ್ನು ಏರಿಸಲಾಗಿತ್ತು.

Leave a Reply