ಸಮುದ್ರದ ಪ್ರತಿಕೂಲ ಹವಾಮಾನ ಹಾಗೂ ಭಾರಿ ಅಲೆಗಳ ಕಾರಣ ಆಂಧ್ರಪ್ರದೇಶದ ನೆಲ್ಲೂರು ಕರಾವಳಿಯಿಂದ ಸುಮಾರು 150 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಬಂಗಾಳಕೊಲ್ಲಿಯಲ್ಲಿ ಕೊಚ್ಚಿಹೋಗಿದ್ದ ಎಂಒಇಎಸ್-ಎನ್‌ಐಒಟಿ (MOES-NIOT) ವೈಜ್ಞಾನಿಕ ದತ್ತಾಂಶ ಬಾಯ್ (Scientific Data Buoy) ಅನ್ನು ಭಾರತೀಯ ಕೋಸ್ಟ್ ಗಾರ್ಡ್ (ICG) ಯಶಸ್ವಿಯಾಗಿ ಪತ್ತೆಹಚ್ಚಿ ರಕ್ಷಿಸಿದೆ. ಐಸಿಜಿ ಹಡಗು ‘ರಾಣಿ ಗೈಡಿನ್ಲಿಯು’ ಈ ಸಾಹಸಮಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಹವಾಮಾನ ಮತ್ತು ಸಾಗರ ಸಂಶೋಧನೆಗೆ ಪ್ರಮುಖ ಸಾಧನ
ಸಮುದ್ರದ ಹವಾಮಾನ, ಪ್ರವಾಹಗಳು ಮತ್ತು ಸಾಗರದೊಳಗಿನ ಪರಿಸ್ಥಿತಿಗಳ ಬಗ್ಗೆ ನಿಖರವಾದ ಸಂಶೋಧನೆ ಮತ್ತು ಮುನ್ಸೂಚನೆ ನೀಡಲು ಈ ದತ್ತಾಂಶ ಉಪಕರಣವು ಅತ್ಯಂತ ಪ್ರಮುಖವಾಗಿದೆ. ವೈಜ್ಞಾನಿಕ ಉಪಕರಣಗಳನ್ನು ರಕ್ಷಿಸುವುದು ಮತ್ತು ದೇಶದ ಸಂಶೋಧನಾ ಪ್ರಯತ್ನಗಳಿಗೆ ಬೆಂಬಲ ನೀಡುವುದು ಭಾರತೀಯ ಕೋಸ್ಟ್ ಗಾರ್ಡ್‌ನ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದ್ದು, ದತ್ತಾಂಶ ಬಾಯ್ ಮರಳಿ ತರುವ ಮೂಲಕ ಐಸಿಜಿ ತನ್ನ ಈ ಆದ್ಯತೆಯನ್ನು ಎತ್ತಿಹಿಡಿದಿದೆ.
ಅಲೆಗಳ ಅಬ್ಬರದ ನಡುವೆ ರಕ್ಷಣೆ
ಭಾರಿ ಅಲೆಗಳ ಅಬ್ಬರದ ನಡುವೆಯೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿರುವ ರೋಚಕ ವಿಡಿಯೋ ಮತ್ತು ಫೋಟೋಗಳು ಲಭ್ಯವಾಗಿವೆ. ಕಿತ್ತಳೆ ಬಣ್ಣದ ಎನ್‌ಐಒಟಿ ಬಾಯ್ ಸಮುದ್ರದ ಅಲೆಗಳಿಗೆ ಸಿಲುಕಿ ತೇಲುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ತಕ್ಷಣವೇ ಕಾರ್ಯಪ್ರವೃತ್ತರಾದ ಐಸಿಜಿ ಸಿಬ್ಬಂದಿ, ಇನ್‌ಫ್ಲೇಟಬಲ್ ಬೋಟ್ (ಗಾಳಿ ತುಂಬಿದ ರಕ್ಷಣಾ ದೋಣಿ) ಮೂಲಕ ಉಪಕರಣದ ಬಳಿ ತೆರಳಿ ಅದನ್ನು ಅತ್ಯಂತ ಜಾಗರೂಕತೆಯಿಂದ ಸುರಕ್ಷಿತವಾಗಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯ ವೇಳೆ ರಕ್ಷಣಾ ದೋಣಿಯ ಸಮೀಪದಲ್ಲೇ ‘ರಾಣಿ ಗೈಡಿನ್ಲಿಯು’ ಹಡಗು ನಿಂತಿರುವುದನ್ನು ಸಹ ದೃಶ್ಯಗಳಲ್ಲಿ ಗಮನಿಸಬಹುದಾಗಿದೆ.

Leave a Reply