ಯಲ್ಲಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲ ಹಾಗೂ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ನಮ್ಮ ಮನೆ-ನಮ್ಮ ಹಕ್ಕು’ ಜನಾಕ್ರೋಶ ಆಂದೋಲನ ಮತ್ತು ಪ್ರತಿಭಟನಾ ಸಭೆಯು ದಿನಾಂಕ 21-09-2026ರ ಸೋಮವಾರ ಮಧ್ಯಾಹ್ನ 12:00 ಗಂಟೆಗೆ ಸರಿಯಾಗಿ ವಜ್ರಳ್ಳಿ ಪಂಚಾಯತ್ ಎದುರು ನಡೆಯಲಿದೆ.
ಸ್ಥಳೀಯ ಆಡಳಿತದ ವೈಫಲ್ಯ ಹಾಗೂ ಸರ್ಕಾರದ ನೀತಿಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಈ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಪ್ರತಿಭಟನೆಯ ಪ್ರಮುಖ ಬೇಡಿಕೆಗಳು ಮತ್ತು ಆಕ್ರೋಶಕ್ಕೆ ಕಾರಣಗಳು:
- ಸರ್ಕಾರಿ ಆದೇಶಕ್ಕೆ ತೀವ್ರ ವಿರೋಧ: ಸರ್ಕಾರಿ ಭೂಮಿಯಲ್ಲಿರುವ ಕಟ್ಟಡಗಳು ಹಾಗೂ ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ಸರ್ಕಾರದ ಅವೈಜ್ಞಾನಿಕ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು.
- ಮನೆ ತೆರಿಗೆ ಆಕರಣೆಯಲ್ಲಿ ತಾರತಮ್ಯ: ಮನೆಗಳ ನೈಜ ಸ್ಥಿತಿಯನ್ನು ಆಧರಿಸಿ ಎಸ್ಆರ್ ರೇಟ್ ಮೂಲಕ ಮನೆಕರ ಆಕರಿಸುವಲ್ಲಿ ಭಾರೀ ವ್ಯತ್ಯಾಸವೆಸಗಲಾಗಿದ್ದು, ಸಾರ್ವಜನಿಕರ ಮೇಲೆ ಅನಗತ್ಯ ಹೊರೆ ಹೊರಿಸಲಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು.
- ಡಿಜಿಟಲೀಕರಣದಲ್ಲಿ ಅಕ್ರಮ: ಬಾಪೂಜಿ ಸೇವಾ ಕೇಂದ್ರದಲ್ಲಿ ಆಸ್ತಿ ನಂಬರ್ (ಮನೆ ನಂಬರ್) ಡಿಜಿಟಲೀಕರಣಗೊಳಿಸುವಾಗಲೂ ನಂಬರ್ ನೀಡದೆ ಬಿಟ್ಟು ಹೋಗಿರುವ ಹಳೆಯ ಆಸ್ತಿ ನಂಬರ್ಗಳನ್ನು ಸೇರಿಸಲು ವಿಳಂಬ ಮಾಡುತ್ತಾ, ಹೊಸದಾಗಿ ಹಲವಾರು ಅಕ್ರಮ ಮನೆ ನಂಬರ್ಗಳನ್ನು ಸೇರಿಸಲಾಗಿದೆ.
- ಇ-ಸ್ವತ್ತು ಪಡೆಯಲು ಸಾರ್ವಜನಿಕರ ಪರದಾಟ: ಇ-ಸ್ವತ್ತು ಅಡಿಯಲ್ಲಿ ಮನೆ ಹಕ್ಕು ಬದಲಾವಣೆ ಹಾಗೂ ಹೊಸದಾಗಿ ಹಕ್ಕು ನೀಡುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ವಿಪರೀತ ತೊಂದರೆ ನೀಡಲಾಗುತ್ತಿದ್ದು, ಈ ಕಠಿಣ ನಿಯಮಗಳನ್ನು ಸರಳಗೊಳಿಸಬೇಕು.
- ಅನುದಾನದ ಕೊರತೆ ಮತ್ತು ದುರುಪಯೋಗ: ಪಂಚಾಯತ್ಗೆ ಬರುತ್ತಿರುವ ಸರ್ಕಾರಿ ಅನುದಾನಗಳು ಗಣನೀಯವಾಗಿ ಕಡಿಮೆಯಾಗಿವೆ. ಬಂದಿರುವ ಅಲ್ಪಸ್ವಲ್ಪ ಅನುದಾನದಲ್ಲೂ ಭ್ರಷ್ಟಾಚಾರ ನಡೆದಿದ್ದು, ಅಭಿವೃದ್ಧಿ ಕೆಲಸಗಳಿಗೆ ಹಣವನ್ನು ಸದ್ವಿನಿಯೋಗ ಮಾಡದೆ ಜಮಾ ಇಟ್ಟುಕೊಳ್ಳಲಾಗಿದೆ.
- ಮೂಲಸೌಕರ್ಯಗಳ ಸಂಪೂರ್ಣ ನಿರ್ಲಕ್ಷ್ಯ: ಗ್ರಾಮೀಣ ಭಾಗದಲ್ಲಿ ಪ್ರತಿವರ್ಷ ನಡೆಯಬೇಕಾದ ರಸ್ತೆ, ನೀರು ಸೇರಿದಂತೆ ಅತ್ಯಗತ್ಯ ಮೂಲಸೌಕರ್ಯಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
- ಆಶ್ರಯ ಯೋಜನೆ ವಿಫಲ: ಬಡವರಿಗಾಗಿ ಇರುವ ಆಶ್ರಯ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಿಂದ ಒಬ್ಬನೇ ಒಬ್ಬ ಫಲಾನುಭವಿಗೆ ಆಶ್ರಯ ಮನೆ ಮಂಜೂರಾಗದೆ ಇರುವುದು ಸರ್ಕಾರದ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ.
ಸಾರ್ವಜನಿಕರಲ್ಲಿ ವಿನಂತಿ:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ನಿರಂತರ ಅನ್ಯಾಯ ಮತ್ತು ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ವಜ್ರಳ್ಳಿ ಭಾಗದ ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜನಾಕ್ರೋಶ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಜಿ. ಆರ್. ಭಾಗ್ವತ್(ಇಡಗುಂದಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರು)ಮಹೇಶ ಗಾಂವ್ಕರ್ (ವಜ್ರಳ್ಳಿ ಶಕ್ತಿ ಕೇಂದ್ರ ಅಧ್ಯಕ್ಷರು)
ಪ್ರಕಟಣೆಯ ಮೂಲಕ ಕರೆ ನೀಡಿದ್ದಾರೆ.















Leave a Reply