ಪಂಜಾಬ್ನಲ್ಲಿ ಗಡಿಯಾಚೆಗಿನ ಅಕ್ರಮ ಶಸ್ತ್ರಾಸ್ತ್ರ, ಮಾದಕವಸ್ತು ಮತ್ತು ಹವಾಲಾ ಜಾಲವನ್ನು ಬೇಧಿಸಲಾಗಿದ್ದು, 4 ಆರೋಪಿಗಳು ಹಾಗೂ 2 ಬಾಲಾಪರಾಧಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಅಫ್ಘಾನಿಸ್ತಾನದ ಪ್ರಜೆಯೊಬ್ಬರೂ ಸೇರಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದು, ಅಮೃತಸರ ಕಮಿಷನರೇಟ್ ಪೊಲೀಸರು ಕಾರ್ಯಾಚರಣೆ ನಡೆಸಿ 1.035 ಕೆಜಿ ಹೆರಾಯಿನ್, 5 ಅತ್ಯಾಧುನಿಕ ಪಿಸ್ತೂಲ್ಗಳು, 2 ಸಜೀವ ಗುಂಡುಗಳು ಮತ್ತು 5 ಲಕ್ಷ ರೂಪಾಯಿ ಡ್ರಗ್ಸ್ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ವಿದೇಶದಲ್ಲಿರುವ ತಮ್ಮ ಸಹಚರರೊಂದಿಗೆ ಸೇರಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ತರಿಸಿಕೊಳ್ಳುತ್ತಿದ್ದರು. ವಿದೇಶದಲ್ಲಿ ಕುಳಿತಿರುವ ತಮ್ಮ ಹ್ಯಾಂಡ್ಲರ್ಗಳ ನಿರ್ದೇಶನದಂತೆ ಅವುಗಳನ್ನು ಸ್ಥಳೀಯವಾಗಿ ವಿತರಿಸುತ್ತಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಬಂಧಿತನಾಗಿರುವ ಆರೋಪಿಗಳಲ್ಲಿ 1 ಅಫ್ಘಾನಿಸ್ತಾನದ ಪ್ರಜೆಯಾಗಿದ್ದಾನೆ ಎಂದು ಡಿಜಿಪಿ ಗೌರವ್ ಯಾದವ್ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದ್ದು, ಜಾಲದ ಹಿಂದಿರುವ ಹಾಗೂ ಮುಂದಿರುವ ಸಂಪರ್ಕಗಳನ್ನು ಪತ್ತೆಹಚ್ಚಲು, ಜಾಲದಲ್ಲಿ ಭಾಗಿಯಾಗಿರುವ ಇತರ ಸಹಚರರನ್ನು ಗುರುತಿಸಲು ಮತ್ತು ಹೆಚ್ಚಿನ ವಸ್ತುಗಳನ್ನು ವಶಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ ಎಂದು ಅವರು ವಿವರಿಸಿದ್ದಾರೆ. ಮಾದಕವಸ್ತುಗಳು, ಅಕ್ರಮ ಶಸ್ತ್ರಾಸ್ತ್ರಗಳು, ಹವಾಲಾ ಕಾರ್ಯಾಚರಣೆಗಳು ಮತ್ತು ಸಂಘಟಿತ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ (ಜೀರೋ ಟಾಲರೆನ್ಸ್) ನೀತಿಗೆ ಪಂಜಾಬ್ ಪೊಲೀಸರು ದೃಢವಾಗಿ ಬದ್ಧರಾಗಿದ್ದಾರೆ ಎಂದು ಡಿಜಿಪಿ ಗೌರವ್ ಯಾದವ್ ಭರವಸೆ ನೀಡಿದ್ದಾರೆ.

Leave a Reply