ಮುಂಬೈ: ಶಾಲ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ಒಂದರ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ, ಹತ್ತು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆ ಮುಂಬೈನ ಚೆಂಬೂರ್ (Chembur) ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಮಕ್ಕಳನ್ನು ತಕ್ಷಣವೇ ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಓರ್ವ ಬಾಲಕ ಇನ್ನೂ ಬಸ್ಸಿನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಚೆಂಬೂರಿನ 11ನೇ ನಂಬರ್ ರಸ್ತೆಯಲ್ಲಿ ಶಾಲಾ ಬಸ್ ಎಂದಿನಂತೆ ವಿದ್ಯಾರ್ಥಿಗಳನ್ನು ತುಂಬಿಕೊಂಡು ಚಲಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆ ಬದಿಯಲ್ಲಿದ್ದ ಹಳೆಯ ಬೃಹತ್ ಮರವೊಂದು ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಸ್‌ನ ಮೇಲೆಯೇ ಮುರಿದು ಬಿದ್ದಿದೆ. ಮರದ ಭಾರಕ್ಕೆ ಬಸ್‌ನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಒಳಗಿದ್ದ ಸುಮಾರು 10 ಮಕ್ಕಳಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಧಾವಿಸಿ ಮಕ್ಕಳನ್ನು ಹೊರತೆಗೆಯಲು ನೆರವಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಂಬೈ ಪೊಲೀಸರು ಮತ್ತು ರಕ್ಷಣಾ ತಂಡಗಳು ಅತ್ಯಾಧುನಿಕ ಉಪಕರಣಗಳೊಂದಿಗೆ ಸ್ಥಳಕ್ಕೆ ಧಾವಿಸಿವೆ. ಬಸ್‌ನೊಳಗೆ ಸಿಲುಕಿರುವ ಕೊನೆಯ ಬಾಲಕನನ್ನು ಸುರಕ್ಷಿತವಾಗಿ ಹೊರತರಲು ಮರದ ರೆಂಬೆಗಳನ್ನು ಕತ್ತರಿಸುವ ಕಾರ್ಯ ಭರದಿಂದ ಸಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿರುವ ಗಾಯಾಳು ಮಕ್ಕಳಿಗೆ ತಜ್ಞ ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪೋಷಕರು ಆಸ್ಪತ್ರೆಯತ್ತ ದೌಡಾಯಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ.

Leave a Reply