ದೇಶಾದ್ಯಂತ ಭೀಕರ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ತೀವ್ರ ಅಭಾವ, ಕೃಷಿ ವಲಯಕ್ಕೆ Big Shock!

ನೈರುತ್ಯ ಮುಂಗಾರು ವಾಡಿಕೆಗಿಂತ 4 ದಿನ ತಡವಾಗಿ ಎಂಟ್ರಿ ಕೊಟ್ಟಿದ್ದು, ಎಲ್ ನಿನೋ (El Nino) ಪರಿಣಾಮದಿಂದಾಗಿ ದೇಶಾದ್ಯಂತ ಭೀಕರ ಮಳೆಯ ಕೊರತೆ ಎದುರಾಗಿದೆ. ಹವಾಮಾನ ಇಲಾಖೆಯ ಆಘಾತಕಾರಿ ಮಾಹಿತಿಯ ಪ್ರಕಾರ, ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ 65 ರಷ್ಟು ಭಾಗದಲ್ಲಿ, ಅಂದರೆ ಸರಿಸುಮಾರು 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ಈ 15 ದಿನಗಳ ಅವಧಿಯಲ್ಲಿ ಇಡೀ ದೇಶದಲ್ಲಿ ಕೇವಲ 42.4 mm ಮಳೆಯಾಗಿದ್ದು, ಒಟ್ಟಾರೆ 32 ರಷ್ಟು ಮಳೆ ಕೊರತೆ ಉಂಟಾಗಿರುವುದು ಕೃಷಿ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

​ವಿವಿಧ ರಾಜ್ಯಗಳಲ್ಲಿ ಮಳೆಯ ಪ್ರಮಾಣ ತೀವ್ರ ಕುಸಿತ ಕಂಡಿದೆ. ಮಧ್ಯ ಭಾರತದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಒಡಿಸ್ಸಾ ಮತ್ತು ಛತ್ತೀಸ್‌ಗಢದಲ್ಲಿ 57 ರಷ್ಟು ಮಳೆ ಕೊರತೆಯಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ 41 ರಷ್ಟು ಮಳೆ ಕೊರತೆಯಿದ್ದರೆ, ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ 9 ರಷ್ಟು ಕೊರತೆ ದಾಖಲಾಗಿದೆ.

ಅತಿ ಕಡಿಮೆ ಮಳೆಯಾದ ರಾಜ್ಯಗಳ ಪೈಕಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಅಲ್ಲಿ 75 ರಷ್ಟು ಮಳೆ ಅಭಾವವಿದೆ. ವಾಯುವ್ಯ ಭಾರತದ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಾತ್ರ ವಾಡಿಕೆಗಿಂತ ಉತ್ತಮ ಮಳೆಯಾಗಿದೆ.

​ಮಹಾರಾಷ್ಟ್ರದಲ್ಲಿ 69 ರಷ್ಟು ಮಳೆ ಕೊರತೆಯಾಗಿದ್ದು, ಕೊಲ್ಲಾಪುರದಲ್ಲಿ 76, ಸತಾರಾದಲ್ಲಿ 65 ಮತ್ತು ಸಾಂಗ್ಲಿಯಲ್ಲಿ 50 ರಷ್ಟು ಮಳೆ ಮಾಯವಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದರಿಂದ, ಕೊಯ್ನಾ ಅಣೆಕಟ್ಟಿನಿಂದ ಹಿಡಿದು ಕರ್ನಾಟಕ ಗಡಿಯ ರಾಜಾಪುರ ಬ್ಯಾರೇಜ್‌ವರೆಗಿನ ಕೃಷ್ಣಾ ನದಿ ಪಾತ್ರದಲ್ಲಿ ಕೃಷಿಗಾಗಿ ನೀರು ಎತ್ತುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸದ್ಯಕ್ಕೆ ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ.

ಕರ್ನಾಟಕದಲ್ಲೂ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಮಳೆ ಬರುವ ನಂಬಿಕೆಯಲ್ಲಿ ಶುಂಠಿ ನಾಟಿ ಮಾಡಿದ್ದ ರೈತರು, ಬಾವಿ ಮತ್ತು ಬೋರ್‌ವೆಲ್‌ಗಳ ನೀರಿನ ಮಟ್ಟ ಕುಸಿದಿರುವ ಕಾರಣ ತುಂತುರು ಮತ್ತು ಹನಿ ನೀರಾವರಿಯ ಮೊರೆ ಹೋಗಿದ್ದಾರೆ.

​ಬೀದರ್‌ನಲ್ಲಿ ಕೇವಲ 5 ರಷ್ಟು ಮಾತ್ರ ಮಳೆಯಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ದಾವಣಗೆರೆಯಲ್ಲೂ ಮುಂಗಾರು ಚುರುಕು ಪಡೆದಿಲ್ಲ; ಸಾವಿರಾರು ರೂಪಾಯಿ ಸಾಲ ಮಾಡಿ ಬೀಜ, ಗೊಬ್ಬರ ತಂದು ಭೂಮಿ ಹದ ಮಾಡಿದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ತುಂಗಭದ್ರಾ ನದಿಯಲ್ಲೂ ನೀರಿನ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಮಳೆ ಕೊರತೆಯ ಬೆನ್ನಲ್ಲೇ ರೈತರ ಆದಾಯ ಕುಂಠಿತಗೊಳ್ಳುವ ಆತಂಕ ಎದುರಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಬೆಲೆ ಏರಿಕೆಯ ಸವಾಲನ್ನು ಸಹ ರೈತರು ಎದುರಿಸಬೇಕಾಗಿದೆ. ಒಟ್ಟಾರೆಯಾಗಿ ಮುಂಗಾರಿನ ಆರಂಭವು ಕೃಷಿ ವಲಯಕ್ಕೆ ದೊಡ್ಡ ಶಾಕ್ ನೀಡಿದ್ದು, ಮುಂದಿನ ದಿನಗಳಲ್ಲಿ ಮಳೆ ಚೇತರಿಸಿಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *