ಬೆಳ್ಳಂಬೆಳಗ್ಗೆ ದೇಶದ ಜನರಿಗೆ ಕೇಂದ್ರದ ಶಾಕ್: ವಾಣಿಜ್ಯ ಬಳಕೆಯ LPG ಸಿಲಿಂಡರ್ ದರ ಮತ್ತೆ ಭಾರೀ ಏರಿಕೆ

ಬೆಂಗಳೂರು: ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ (CNG) ದರ ಏರಿಕೆಯಿಂದ ಹೈರಾಣಾಗಿರುವ ದೇಶದ ಜನಸಾಮಾನ್ಯರಿಗೆ ಹಾಗೂ ವಾಣಿಜ್ಯೋದ್ಯಮಿಗಳಿಗೆ ಕೇಂದ್ರ ಸರ್ಕಾರ ಬೆಳ್ಳಂಬೆಳಗ್ಗೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (Commercial LPG cylinders) ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ ಎಂದು ತೈಲ ಕಂಪನಿಗಳು ಪ್ರಕಟಿಸಿವೆ.

ಬೆಂಗಳೂರು, ದೆಹಲಿ, ಕೋಲ್ಕತ್ತಾದಲ್ಲಿ ಹೊಸ ದರಗಳ ಪಟ್ಟಿ:

ಹೊಸ ಪರಿಷ್ಕರಣೆಯ ನಂತರ ದೇಶದ ಪ್ರಮುಖ ನಗರಗಳಲ್ಲಿ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಈ ಕೆಳಗಿನಂತೆ ಏರಿಕೆಯಾಗಿದೆ

  • ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ಸಿಲಿಂಡರ್ ದರ 46 ರೂ. ಹೆಚ್ಚಳವಾಗಿದ್ದು, ಹೊಸ ದರ 3,198 ರೂ. ತಲುಪಿದೆ.

  • ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ 42 ರೂ. ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 3,113.5 ರೂ. ತಲುಪಿದೆ.

  • ಕೋಲ್ಕತ್ತಾ: ಇಲ್ಲಿ ಅತಿ ಹೆಚ್ಚು ಅಂದರೆ 53.5 ರೂ. ಹೆಚ್ಚಳವಾಗಿದ್ದು, ಒಂದು ಸಿಲಿಂಡರ್ ಬೆಲೆ 3,255.5 ರೂ. ಗೆ ಏರಿಕೆಯಾಗಿದೆ.

ಇದರೊಂದಿಗೆ ಸಣ್ಣ ವ್ಯಾಪಾರಿಗಳು ಬಳಸುವ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ (FTL) ಸಿಲಿಂಡರ್‌ಗಳ ಬೆಲೆಯಲ್ಲೂ 11 ರೂ. ಹೆಚ್ಚಿಸಲಾಗಿದ್ದು, ಇದರ ಬೆಲೆ 821.5 ರೂ. ತಲುಪಿದೆ. ಆದರೆ, ಸಾರ್ವಜನಿಕರಿಗೆ ಸಮಾಧಾನದ ಸಂಗತಿಯೆಂದರೆ ಮನೆಗಳಲ್ಲಿ ಬಳಸುವ ಗೃಹ ಬಳಕೆಯ ಎಲ್‌ಪಿಜಿ (Domestic LPG) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೇವಲ ಒಂದು ತಿಂಗಳಲ್ಲಿ 2ನೇ ಬಾರಿಗೆ ದರ ಏರಿಕೆ!

ಮೇ 1 ರ ನಂತರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಮಾಡಲಾದ ಎರಡನೇ ಭಾರಿ ದರ ಏರಿಕೆ ಇದಾಗಿದೆ. ಐದು ರಾಜ್ಯಗಳ ಪ್ರಮುಖ ಚುನಾವಣೆಗಳು ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ಮೇ 1 ರಂದು ಏಕಾಏಕಿ ಪ್ರತಿ ವಾಣಿಜ್ಯ ಸಿಲಿಂಡರ್ ಮೇಲಿನ ಬೆಲೆಯನ್ನು ಭರ್ಜರಿ 993 ರೂ. ಗಳಷ್ಟು ಹೆಚ್ಚಳ ಮಾಡಿತ್ತು. ಸದ್ಯ ತೈಲ ಮಾರುಕಟ್ಟೆ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಈ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

30 ದಿನಗಳ ಎಲ್‌ಪಿಜಿ ನಿಕ್ಷೇಪ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ:

ಇತ್ತೀಚೆಗೆ ನಡೆದ ಅಂತರ ಸಚಿವಾಲಯದ ಜಂಟಿ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ದೇಶದ ಇಂಧನ ಭದ್ರತೆಯ ಕುರಿತು ಪ್ರಮುಖ ಮಾಹಿತಿ ಹಂಚಿಕೊಂಡಿದ್ದಾರೆ. “ಕೇಂದ್ರ ಸರ್ಕಾರವು ದೇಶದಲ್ಲಿ ಭವಿಷ್ಯದ ಅಗತ್ಯಗಳಿಗಾಗಿ ಕಾರ್ಯತಂತ್ರದ ತೈಲ ಮತ್ತು ಗ್ಯಾಸ್ ನಿಕ್ಷೇಪಗಳನ್ನು ನಿರ್ಮಿಸಲು ಆದ್ಯತೆ ನೀಡುತ್ತಿದೆ. ಇದರ ಭಾಗವಾಗಿ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಬಳಿ ಕನಿಷ್ಠ 30 ದಿನಗಳಿಗೆ ಆಗುವಷ್ಟು ಎಲ್‌ಪಿಜಿ ನಿಕ್ಷೇಪವನ್ನು (LPG reserves) ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು” ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *