ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್ 12ರ ಶುಕ್ರವಾರದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಹೈಪ್ರೊಫೈಲ್ ವಿವಿಐಪಿ (VVIP) ಭೇಟಿಯ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ದೇವಿಯ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ಆಡಳಿತ ಪ್ರಕಟಿಸಿದೆ.
ತಮಿಳುನಾಡು ಸಿಎಂ ವಿಜಯ್ ಅವರ ಭೇಟಿಯ ಕಾರಣದಿಂದಾಗಿ ದೇವಸ್ಥಾನದ ಸುತ್ತಮುತ್ತ ಹಾಗೂ ಅವರು ಸಂಚರಿಸುವ ಹೆದ್ದಾರಿಯ ಪ್ರಮುಖ ಮಾರ್ಗಗಳಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಭಾರಿ ಬಂದೋಬಸ್ತು ಕಲ್ಪಿಸಿದೆ. ಸಿಎಂ ಸಂಚರಿಸುವ ಕಾನ್ವಾಯ್ ಹಾದಿ, ದೇವಸ್ಥಾನದ ಪ್ರವೇಶ ದ್ವಾರ ಅಥವಾ ಆವರಣದ ಒಳಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಮತ್ತು ಅಭಿಮಾನಿಗಳು ಗುಂಪು ಸೇರಬಾರದು ಹಾಗೂ ಜನಸಂದಣಿ ಮಾಡಬಾರದು ಎಂದು ಪೊಲೀಸರು ಕಟ್ಟುನಿಟ್ಟಿನ ಆಜ್ಞೆ ಹೊರಡಿಸಿದ್ದಾರೆ.
ಸಾರ್ವಜನಿಕ ಭೇಟಿ ಇಲ್ಲ – ಕೇವಲ ದೇವಿಯ ದರ್ಶನ:
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೇವಲ ಮೂಕಾಂಬಿಕಾ ದೇವಿಯ ದರ್ಶನ ಮತ್ತು ಧಾರ್ಮಿಕ ವಿಧಿವಿಧಾನ ಮುಗಿಸಿದ ತಕ್ಷಣವೇ ನೇರವಾಗಿ ತಮಿಳುನಾಡಿಗೆ ಹಿಂತಿರುಗಲಿದ್ದಾರೆ. ಈ ಪ್ರವಾಸದಲ್ಲಿ ಅವರು ಯಾವುದೇ ರಾಜಕೀಯ ಅಥವಾ ಸಾರ್ವಜನಿಕ ಭೇಟಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿಶೇಷ ಬಂದೋಬಸ್ತು ಮತ್ತು ವಿವಿಐಪಿ ಶಿಷ್ಟಾಚಾರ ಜಾರಿಯಲ್ಲಿರುವುದರಿಂದ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕೊಲ್ಲೂರಿಗೆ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ಮಧ್ಯಾಹ್ನ 12ರಿಂದ ಸಂಜೆ 5ರವರೆಗಿನ ಅವಧಿಯಲ್ಲಿ ದೇವಸ್ಥಾನಕ್ಕೆ ಬರುವುದನ್ನು ತಪ್ಪಿಸುವುದು ಸೂಕ್ತ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

Leave a Reply