ಬಂಕ್‌ಗಳಲ್ಲಿ Diesel ಮಾರಾಟಕ್ಕೆ ಕೇಂದ್ರದ ಕಡಿವಾಣ: ಗ್ರಾಹಕರಿಗೆ ದಿನಕ್ಕೆ ಗರಿಷ್ಠ 200 ಲೀಟರ್ ಮಾತ್ರ!

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪೆಟ್ರೋಲ್ ಬಂಕ್‌ಗಳಲ್ಲಿ (ಚಿಲ್ಲರೆ ಮಾರಾಟ ಮಳಿಗೆಗಳು) ಹೈ ಸ್ಪೀಡ್ ಡೀಸೆಲ್ (HSD) ಮಾರಾಟದ ಮೇಲೆ ಮಹತ್ವದ ನಿರ್ಬಂಧ ವಿಧಿಸಿ ಹೊಸ ಆದೇಶ ಹೊರಡಿಸಿದೆ. ಜೂನ್ 11, 2026 ರಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾಗಿರುವ ನೂತನ ‘ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಚಿಲ್ಲರೆ ಮಳಿಗೆಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇಶ, 2026’ ರ ಅನ್ವಯ, ಇನ್ನು ಮುಂದೆ ಯಾವುದೇ ಗ್ರಾಹಕರಿಗೆ ಅಥವಾ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬಹುದಾಗಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಆರಂಭಿಕವಾಗಿ 90 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ.

ನಿರ್ಬಂಧ ಹೇರಲು ಪ್ರಮುಖ ಕಾರಣವೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ಚಿಲ್ಲರೆ ಮತ್ತು ಸಗಟು (Bulk) ಡೀಸೆಲ್ ಬೆಲೆಗಳ ನಡುವಿನ ವ್ಯತ್ಯಾಸದ ಲಾಭ ಪಡೆಯಲು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಸಗಟು ಖರೀದಿಯ ಬದಲು ಪೆಟ್ರೋಲ್ ಬಂಕ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಡೀಸೆಲ್ ಮಾರಾಟವು ಭಾರಿ ಏರಿಕೆ ಕಂಡಿದ್ದರೆ, ಕೈಗಾರಿಕೆಗಳ ಸಗಟು ಮಾರಾಟದಲ್ಲಿ ಕುಸಿತವಾಗಿದೆ. ಈ ಅಕ್ರಮ ದಾಸ್ತಾನು ಮತ್ತು ಲಾಭಕೋರತನದಿಂದಾಗಿ ಸಾಮಾನ್ಯ ಗ್ರಾಹಕರು, ರೈತರು ಮತ್ತು ತುರ್ತು ಸೇವೆಗಳಿಗೆ ಡೀಸೆಲ್ ಕೊರತೆಯಾಗುತ್ತಿರುವುದು ಹಲವು ರಾಜ್ಯ ಸರ್ಕಾರಗಳ ಗಮನಕ್ಕೆ ಬಂದಿದೆ. ಈ ಕೃತಕ ಅಭಾವವನ್ನು ತಪ್ಪಿಸಲು ಮತ್ತು ಕೃಷಿ ಹಾಗೂ ಅಗತ್ಯ ಸೇವೆಗಳಿಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ತಡೆಯಲು ಕೇಂದ್ರ ಸರ್ಕಾರ ಈ ತಾತ್ಕಾಲಿಕ ನಿಯಂತ್ರಣ ಕ್ರಮವನ್ನು ಜಾರಿಗೆ ತಂದಿದೆ.

ಕೈಗಾರಿಕೆಗಳಿಗೆ ನಿಷೇಧ ಮತ್ತು ಕಟ್ಟುನಿಟ್ಟಿನ ನಿಯಮಗಳು

ಹೊಸ ನಿಯಮಗಳ ಪ್ರಕಾರ, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸುವಂತಿಲ್ಲ. ಅವರು ತಮ್ಮ ಸ್ವಂತ ಬಳಕೆದಾರರ ಪಂಪ್‌ಗಳಿಂದಲೇ ಇಂಧನ ಪಡೆಯುವುದು ಕಡ್ಡಾಯವಾಗಿದೆ. ಪೆಟ್ರೋಲ್ ಬಂಕ್ ಮಾಲೀಕರು ಡೀಸೆಲ್ ಅನ್ನು ಕೇವಲ ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ‘ಪೆಸೊ’ (PESO) ಅನುಮೋದಿತ ಕಂಟೇನರ್‌ಗಳಲ್ಲಿ ಮಾತ್ರ ತುಂಬಬೇಕು. ಯಾವುದೇ ಕಾರಣಕ್ಕೂ ದಿನಕ್ಕೆ 200 ಲೀಟರ್ ಮಿತಿಯನ್ನು ಮೀರುವಂತಿಲ್ಲ ಹಾಗೂ ಖರೀದಿಸಿದ ಡೀಸೆಲ್ ಅನ್ನು ಮರುಮಾರಾಟ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ

ಈ ಆದೇಶವನ್ನು ಉಲ್ಲಂಘಿಸಿ ಕಾಳಸಂತೆ, ಅಕ್ರಮ ದಾಸ್ತಾನು ಅಥವಾ ದುರ್ಬಳಕೆ ಮಾಡಿಕೊಂಡರೆ, ಅತ್ಯಾವಶ್ಯಕ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಶೋಧನೆ ಮತ್ತು ಜಪ್ತಿ ಮಾಡುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗೆಜೆಟೆಡ್ ಅಧಿಕಾರಿಗಳು, ಹಾಗೂ ಡಿವೈಎಸ್‌ಪಿ (DySP) ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ. ಅಕ್ರಮಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ.

https://x.com/ANI/status/2065275631664087419

Leave a Reply

Your email address will not be published. Required fields are marked *