ಅರುಣಾಚಲ ಪ್ರದೇಶದ ಲೋಯರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೀಕರ ಗುಡ್ಡ ಕುಸಿತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ರಸ್ತೆ ದಾಟುತ್ತಿದ್ದ ಬೈಕ್ ಸವಾರನೊಬ್ಬ ಗುಡ್ಡ ಕುಸಿತದ ಭರಕ್ಕೆ ಕೊಚ್ಚಿಕೊಂಡು ಹೋಗಿ ಸಿಜಿ ನದಿಗೆ ಬಿದ್ದರೂ ಪವಾಡಸದೃಶ ರೀತಿಯಲ್ಲಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ(ಜೂನ್ 28) ನಡೆದ ಈ ಘಟನೆಯ ದೃಶ್ಯಗಳನ್ನು ಮಾರಿಯೋ ನೌಫಾಲ್ ಎಂಬುವವರು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸವಾರನ ಅದೃಷ್ಟವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಈ ಬೃಹತ್ ಗುಡ್ಡ ಕುಸಿತದಿಂದಾಗಿ ಅಪಾರ ಪ್ರಮಾಣದ ಮಣ್ಣು ಮತ್ತು ಕಲ್ಲುಬಂಡೆಗಳು ನದಿಗೆ ಬಿದ್ದ ಪರಿಣಾಮ ಸಿಜಿ ನದಿಯ (ಅಸ್ಸಾಂನಲ್ಲಿ ಗೈ ನದಿ ಎಂದು ಕರೆಯಲ್ಪಡುವ) ಹರಿವು ಸಂಪೂರ್ಣವಾಗಿ ಬಂದ್ ಆಗಿದ್ದು, ಮಣ್ಣಿನ ತಾತ್ಕಾಲಿಕ ನೈಸರ್ಗಿಕ ಅಣೆಕಟ್ಟಿನಂತೆ ಮಾರ್ಪಟ್ಟಿದೆ. ಇದರಿಂದಾಗಿ ನದಿಯ ಮೇಲ್ಭಾಗದಲ್ಲಿ ಬೃಹತ್ ಪ್ರಮಾಣದ ನೀರು ಸಂಗ್ರಹವಾಗಿದ್ದು, ಏಕಾಏಕಿ ಈ ತಡೆಗೋಡೆ ಒಡೆದರೆ ಕೆಳಭಾಗದಲ್ಲಿ ಭೀಕರ ಹಠಾತ್ ಪ್ರವಾಹ (Flash flood) ಉಂಟಾಗುವ ಆತಂಕವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಸಾಂನ ಕೆಲವು ಭಾಗಗಳು ಸೇರಿದಂತೆ ನದಿಯ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು, ತಕ್ಷಣವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಿದೆ.
ಮುಂಗಾರು ಹಂಗಾಮಿನಲ್ಲಿ ಹಿಮಾಲಯನ್ ಭೂಪ್ರದೇಶವನ್ನು ಹೊಂದಿರುವ ಅರುಣಾಚಲ ಪ್ರದೇಶವು ಗುಡ್ಡ ಕುಸಿತಗಳಿಗೆ ಅತಿ ಹೆಚ್ಚು ತುತ್ತಾಗುವ ಪ್ರದೇಶವಾಗಿದೆ. ಕಳೆದ ಕೆಲವು ದಿನಗಳಿಂದ ಈಶಾನ್ಯ ಭಾರತದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅನೇಕ ಜಿಲ್ಲೆಗಳಲ್ಲಿ ಸಾವು-ನೋವುಗಳು ಸಂಭವಿಸಿವೆ, ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಮತ್ತು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಸ್ತುತ ನದಿಯ ಹರಿವು ತಡೆಯಾಗಿರುವ ಸ್ಥಳದಲ್ಲಿನ ಬೆಳವಣಿಗೆಗಳನ್ನು ವಿಪತ್ತು ನಿರ್ವಹಣಾ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಅಪಾಯಕಾರಿ ರಸ್ತೆಗಳು ಮತ್ತು ನದಿತೀರಗಳಿಗೆ ತೆರಳದಂತೆ ಸ್ಥಳೀಯ ನಿವಾಸಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Leave a Reply