ನವದೆಹಲಿ: ದಕ್ಷಿಣ ಭಾರತದ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ಹಾಗೂ ಹೈ-ಪ್ರೊಫೈಲ್ ನಾಯಕರಾಗಿ ಗುರುತಿಸಿಕೊಂಡಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K. Annamalai) ಅವರು ಬಿಜೆಪಿಗೆ ದಿಢೀರ್ ಗುಡ್‌ಬೈ ಹೇಳಿದ್ದಾರೆ. ಈ ಮೂಲಕ ಕಮಲ ಪಾಳೆಯದೊಂದಿಗಿನ ತಮ್ಮ 6 ವರ್ಷಗಳ ಸುದೀರ್ಘ ರಾಜಕೀಯ ಒಡನಾಟವನ್ನು ಅಧಿಕೃತವಾಗಿ ಕೊನೆಗೊಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಅವರನ್ನು ಖುದ್ದಾಗಿ ಭೇಟಿಯಾಗಿರುವ ಅಣ್ಣಾಮಲೈ, ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಉಸ್ತುವಾರಿ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದ ಅವರು, ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಇತಿಶ್ರೀ ಹಾಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ಕಳೆದ ಕೆಲವು ಸಮಯದಿಂದ ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಅಸಮಾಧಾನ ಕುದಿಯುತ್ತಿತ್ತು. ಪ್ರಮುಖವಾಗಿ ಎಐಎಡಿಎಂಕೆ (AIADMK) ಪಕ್ಷವನ್ನು ಮರಳಿ ಎನ್‌ಡಿಎ (NDA) ಒಕ್ಕೂಟಕ್ಕೆ ಸೇರಿಸಿಕೊಂಡ ನಂತರ, ಪಕ್ಷದ ಉನ್ನತ ನಾಯಕತ್ವವು ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ವಿಧಾನಸಭಾ ಚುನಾವಣಾ ಪ್ರಚಾರದಲ್ಲೂ ಅವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ. ಸ್ವಪಕ್ಷದ ಈ ನಿರ್ಧಾರಗಳಿಂದ ತೀವ್ರ ಅಸಮಾಧಾನಗೊಂಡಿದ್ದ ಅವರು ಸತತವಾಗಿ ಎರಡು ಬಿಜೆಪಿ ರಾಜ್ಯ ಕಾರ್ಯಕಾರಿ ಸಭೆಗಳಿಗೂ ಗೈರಾಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.
ತ್ರಿಭಾಷಾ ನೀತಿಗೆ ಬಹಿರಂಗ ವಿರೋಧ:
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತ್ರಿಭಾಷಾ ನೀತಿಯನ್ನು (Three-language formula) ಅಣ್ಣಾಮಲೈ ಬಹಿರಂಗವಾಗಿ ವಿರೋಧಿಸಿದ್ದರು. 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರ ತಮಿಳುನಾಡಿನ ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ತರಲಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಭಾಷಾ ವಿವಾದದ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕತ್ವ ಹಾಗೂ ಅಣ್ಣಾಮಲೈ ನಡುವಿನ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದವು.
ಬಿಜೆಪಿಯಿಂದ ಹೊರಬಂದಿರುವ ಅಣ್ಣಾಮಲೈ ಮುಂದಿನ ರಾಜಕೀಯ ಹೆಜ್ಜೆ ಏನು ಎಂಬುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ, ಅವರು ತಮಿಳುನಾಡಿನಲ್ಲಿ ಸ್ವತಂತ್ರವಾಗಿ ‘ಮಕ್ಕಳ್ ಶಕ್ತಿ ಇಯಕ್ಕಂ’ (ಜನಶಕ್ತಿ ಆಂದೋಲನ) ಎಂಬ ಹೊಸ ಜನಪರ ಚಳವಳಿ ಅಥವಾ ರಾಜಕೀಯ ಸಂಘಟನೆಯನ್ನು ಆರಂಭಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ವತಃ ಅಣ್ಣಾಮಲೈ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಣ್ಣಾಮಲೈ ರಾಜೀನಾಮೆ ಬೆನ್ನಲ್ಲೇ ಕೊಯಮತ್ತೂರಿನಾದ್ಯಂತ ಅವರ ಭಾವಚಿತ್ರವಿರುವ ನಿಗೂಢ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಬಲಿಷ್ಠ ಸಂದೇಶವಿರುವ ಈ ಪೋಸ್ಟರ್‌ಗಳು, ಅವರು ಹೊಸ ರಾಜಕೀಯ ಕ್ರಾಂತಿಗೆ ಸಜ್ಜಾಗುತ್ತಿರುವುದರ ಸ್ಪಷ್ಟ ಸುಳಿವು ನೀಡುತ್ತಿವೆ.
2021 ರಿಂದ 2025 ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಅಪ್ರತಿಮ ಹೋರಾಟ ಸಂಘಟಿಸಿದ್ದ ಅಣ್ಣಾಮಲೈ, ದ್ರಾವಿಡ ಕೋಟೆಯೊಳಗೆ ಬಿಜೆಪಿ ಭದ್ರವಾಗಿ ನೆಲೆಯೂರಲು ಮುಖ್ಯ ಕಾರಣರಾಗಿದ್ದರು. ಈಗ ಅವರೇ ಪಕ್ಷ ತೊರೆದಿರುವುದು ತಮಿಳುನಾಡಿನಲ್ಲಿ ಬಿಜೆಪಿಯ ಬೆಳವಣಿಗೆಗೆ ದೊಡ್ಡ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Leave a Reply