
ಯಲ್ಲಾಪುರ: ತಾಲೂಕಿನ ಇಡಗುಂದಿ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯೊಂದು ದಾಳಿ ನಡೆಸಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಬುಧವಾರ ಮಧ್ಯರಾತ್ರಿ ಸಂಭವಿಸಿದ್ದು ಸಿ ಸಿ ಟಿ ವಿ ಯಲ್ಲಿ ಸೇರೆಯಾಗಿದ್ದು, ಇಡೀ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಇಡಗುಂದಿ ವ್ಯಾಪ್ತಿಯ ಹೆಬ್ಬಾರಮನೆಯ ನಿವಾಸಿ ಆರ್. ಡಿ. ಹೆಬ್ಬಾರ್ ಅವರ ಮನೆಗೆ ಬುಧವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನುಗ್ಗಿದ ಚಿರತೆಯು, ಮನೆಯ ಅಂಗಳದಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಅದನ್ನು ಕಚ್ಚಿ ಹೊತ್ತೊಯ್ದಿದೆ. ಚಿರತೆಯ ಈ ಭೀಕರ ಬೇಟೆಯ ದೃಶ್ಯಗಳು ಮನೆಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಗ್ರಾಮಸ್ಥರಲ್ಲಿ ಮನೆಮಾಡಿದ ಭೀತಿ:
ಮಧ್ಯರಾತ್ರಿಯ ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ಭಯಭೀತರಾಗಿದ್ದಾರೆ. ಮನೆಯ ಆವರಣದಲ್ಲಿ ಚಿರತೆ ಬಂದು ದಾಳಿ ನಡೆಸಿರುವುದರಿಂದ, ತೋಟ-ಗದ್ದೆಗಳಿಗೆ ಕೆಲಸಕ್ಕೆ ಹೋಗಲು ಹಾಗೂ ಸಂಜೆ ವೇಳೆ ಮನೆಯಿಂದ ಹೊರಬರಲು , ಹಾಗೂ ರಾತ್ರೆ ಮನೆಯ ಹೊರಗಡೆ ಬರಲು ಜನ ಸಾಮಾನ್ಯರು ಹೆದರುವಂತಾಗಿದೆ.
ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ:
ಈ ಘಟನೆಯ ಬೆನ್ನಲ್ಲೇ ಸ್ಥಳೀಯರು ಅರಣ್ಯ ಇಲಾಖೆಯ ನಡೆಗೆ ತೀವ್ರ ಆಕ್ರೋಶ ಹಾಗೂ ವ್ಯಂಗ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ. “ಸಾಮಾನ್ಯ ಮನುಷ್ಯರು ಏನಾದರೂ ಸಣ್ಣಪುಟ್ಟ ಕಾರಣಗಳಿಗಾಗಿ ಅರಣ್ಯದೊಳಗೆ ಕಾಲಿಟ್ಟರೆ ಸಾಕು, ತಕ್ಷಣವೇ ಎಚ್ಚರಿಕೆ ನೀಡಿ ಕಾನೂನು ಜರುಗಿಸುವ ಅರಣ್ಯ ಇಲಾಖೆಯ ಅಧಿಕಾರಿಗಳು, ಈಗ ಕಾಡುಪ್ರಾಣಿಗಳು ನಮ್ಮ ಸ್ವಂತ ಜಾಗಕ್ಕೆ, ಮನೆ ಬಾಗಿಲಿಗೆ ಬಂದು ದಾಳಿ ಮಾಡುತ್ತಿದ್ದರೂ ಏನು ಮಾಡುತ್ತಿದ್ದಾರೆ?” ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ವನ್ಯಜೀವಿಗಳ ಹಾವಳಿಯಿಂದ ತಮಗೆ ರಕ್ಷಣೆ ನೀಡಲು ಇಲಾಖೆ ವಿಫಲವಾಗಿದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.
ಕಾಡುಪ್ರಾಣಿಗಳು ನಾಡಿಗೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಜಾನುವಾರು ಮತ್ತು ಸಾಕುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ತಕ್ಷಣವೇ ಮುಂದಾಗಬೇಕು ಎಂದು ಇಡಗುಂದಿ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ















Leave a Reply