ಒಂಟಿ ಬೀಜದ ಹೋರಿ ; ಓದಿ ಈ ಲೇಖನವನ್ನು

ಹಂಚಿಕೊಳ್ಳಿ

ಡಾ|| ಯುವರಾಜ ಹೆಗಡೆ
ಪಶುವೈದ್ಯರು, ತೀರ್ಥಹಳ್ಳಿ

ಎರಡು ದಶಕಗಳ ಹಿಂದೆ ನಾನು ಪಶುವೈದ್ಯನಾಗಿ ದೇವಂಗಿಯಲ್ಲಿ ಕರ್ತವ್ಯದಲ್ಲಿದ್ದಾಗ ಆಗಷ್ಟೇ ಕೃಷಿ ಬದುಕಿನಲ್ಲಿ ಎತ್ತುಗಳ ಬಳಕೆ ಕಡಿಮೆಯಾಗುತ್ತಾ, ಹಂತ ಹಂತವಾಗಿ ಮಲೆನಾಡು ಯಾಂತ್ರೀಕೃತ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಕಾಲವದು. ಆದರೂ ಹತ್ತಿಪ್ಪತ್ತು ಜೋಡಿ ಎತ್ತುಗಳನ್ನು ಮಂಡಗದ್ದೆ, ಕನ್ನಂಗಿ ಭಾಗಗಳಲ್ಲಿ ಉಳುಮೆಗಾಗಿ ಬಳಸುತ್ತಿದ್ದರು. ಅವುಗಳನ್ನು ಸಾಮಾನ್ಯವಾಗಿ ಆಯನೂರು, ಶಿಕಾರಿಪುರ, ಹೊನ್ನಾಳಿ, ಚಿತ್ರದುರ್ಗ, ಹಾವೇರಿ ಭಾಗಗಳಿಂದ ಖರೀದಿ ಮಾಡಿ ತರುತ್ತಿದ್ದರು. ಈಗ ಬಿಡಿ ಇಡೀ ತಾಲ್ಲೂಕು ಜಾಲಾಡಿದರೂ ಹತ್ತು ಜೋಡಿ ಎತ್ತು ಕಾಣಲು ಸಿಗದು.
ಅಂದು ನನ್ನ ಹುಡುಕಿಕೊಂಡು ಬಂದ ಮಂಡಗದ್ದೆ ಭಾಗದ ರೈತರೊಬ್ಬರು ನನ್ನೊಂದಿಗೆ ಮಾತಿಗಿಳಿದು, ತಮಗಿರುವ ಗಂಭೀರ ಸಮಸ್ಯೆಯೊಂದನ್ನು ವಿವರಿಸಿದರು. ಈಗ ನಾಲ್ಕು ತಿಂಗಳ ಹಿಂದೆ ಶಿಕಾರಿಪುರದಿಂದ ಎತ್ತನ್ನೊಂದು ತುಸು ದುಬಾರಿ ಹಣಕ್ಕೆ ಖರೀದಿಸಿ, ‘ನೀಲ’ ಎಂದು ಹೆಸರಿಟ್ಟು ತಮ್ಮಲ್ಲಿದ್ದ ಒಂಟಿ ಎತ್ತು ‘ಜಾಲ’ ನೊಂದಿಗೆ ಜೋಡಿ ಮಾಡಿಕೊಂಡರು. ಎತ್ತು ಆಕರ್ಷಕ ಮೈಕಟ್ಟು, ಕೆಲಸದಲ್ಲಿ ನಿಪುಣ.ಆದರೆ ನೀಲನಿಗೆ ಕೆಲವು ಕೆಟ್ಟ ಚಾಳಿಗಳಿದ್ದವು. ಯಾರಾದರೂ ಜೋರಾಗಿ ಕೂಗಿ ಶಬ್ಧ ಮಾಡಿದರೆ, ಜನ ಗುಂಪು ಕಟ್ಟಿಕೊಂಡರೆ ಅದಕ್ಕೆ ಕೆಣಕಿದಂತಾಗಿ ಅವರ ಮೇಲೆ ಹಲ್ಲೆ ಮಾಡುತ್ತಿತ್ತು. ಮೋಸದಿ ಹಿಂಬದಿಯಿಂದ ಕೋಡು ಹಾಕಿ ಎತ್ತಿ ಎಸೆಯುವ ಬುದ್ದಿ . ಅದರ ಬೀಜಗಳನ್ನು ಕಸಿ (ಒಡೆದಿರುವುದು/ ಸೀಲ್ ಮಾಡಿರುವುದು) ಮಾಡಲಾಗಿತ್ತಾದರೂ, ಬೆದೆಗೆ ಬಂದ ಹಸುಗಳನ್ನು ಕಂಡರೆ ಹಿಂದೆ ಬಿದ್ದು ಇದರ ಭಾರೀ ಗಾತ್ರದ ದೇಹದ ಭಾರವನ್ನು ಮಲೆನಾಡು ಗಿಡ್ಡ ರಾಸುಗಳ ಮೇಲಿಟ್ಟು ಅವುಗಳ ಜೀವಕ್ಕೆ ಕಂಟಕ ತರುತ್ತಿತ್ತು.
ಊರಿನಲ್ಲಿ ಇದರ ಉಪಟಳ ತಾಳಲಾರದೆ ಭಯಭೀತರಾದ ಜನ “ಮಾರಾಯ ಇದನ್ನು ತಂದಲ್ಲಿಗೆ ತಲುಪಿಸಿ ಬಿಡು” ಎಂದು ದುಂಬಾಲು ಬಿದ್ದರು. “ ಇಲ್ನೋಡಿ ಸಾರ್ , ಈಗಷ್ಟೆ ತೀರ್ಥಹಳ್ಳಿಯ ದೊಡ್ಡಾಸ್ಪತ್ರೆಗೆ ಹೋಗಿ ಕೈಗೆ ಹೊಲಿಗೆ ಹಾಕಿಸಿಕೊಂಡು ಬಂದೆ. ನಶೆಗೆ ಬಂದ ದನದ ಹಿಂದೆ ಹೊರಟಿತ್ತು. ವಾಪಾಸು ಕರೆತರುವಾಗ ಸಿಟ್ಟಿನಿಂದ ನನಗೇ ಕೊಂಬು ಹಾಕಿತು!! ಎಂದು ತನ್ನ ಬ್ಯಾಂಡೇಜು ಮಾಡಿದ ಗಾಯದ ಕೈಯನ್ನು ತೋರಿ ಹೇಳಿದರು.
“ಏನಾದ್ರು ಮಾಡಿ ಸ್ವಾಮಿ, ಅದನ್ನು ಹದ್ಬಸ್ತಿಗೆ ತಂದು ಕೊಡಿ, ಮೈಕಟ್ಟು ಚೆನ್ನಾಗಿತ್ತು ಅಂತ ದುಬಾರಿ ಬೆಲೆ ಕೊಟ್ಟು ತಂದಿರುವೆ”.
“ಅಲ್ಲಾರಿ, ’ಎತ್ತು’ ಅಂತೀರಿ ಬೆದೆಗೆ ಬಂದ ದನದ ಹಿಂದೆ ಹೋಗತ್ತೆ ಅಂತೀರಿ ಅದರ ಬೀಜ ಒಡೆದಿಲ್ವ?”
“ ಒಡೆದಿದೆ ಸಾರ್, ಯಾಕೋ ಅದರ ಬಗ್ಗೆ ಗುಮಾನಿ ನನಗೆ. ಒಂದು ಬೀಜ ಸಣ್ಣದು ಮತ್ತೊಂದು ದೊಡ್ಡದು ನೇತಾಡ್ತವೆ”
“ಅರೆಗಾಳು ಆಗಿರಬೇಕು ಸರ್”
ನನಗೆ ಅನುಮಾನ ಘಾಡವಾಗತೊಡಗಿತ್ತು. ಅದು ಸರಿಯಾಗಿ ಬೀಜ ಒಡೆಯದ “ಒಂಟಿ ಬೀಜದೋರಿ”ಯೇ ಸರಿ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡೆ. ಭಾನುವಾರ ಬರುತ್ತೇನೆಂದು, ಜನರ ವ್ಯವಸ್ಥೆ ಮಾಡಿಕೊಳ್ಳಿ ಎಂದು ವಿಳಾಸ ಪಡೆದು ಕಳಿಸಿಕೊಟ್ಟೆ.
ಅದು ಮಂಡಗದ್ದೆಯ ಸಮೀಪದ ಯಾವುದೋ ಹಳ್ಳಿ. ಊರಿನ ಹೆಸರು ಈಗ ನನಗೆ ನೆನಪಿಲ್ಲ. ತೇಗದ ಮರಗಳ ದಟ್ಟ ಕಾಡುಗಳ ನಡುವೆ 10-15 ಮನೆಗಳಿರುವ ಒಂದು ಪುಟ್ಟ ಊರು. ಮಲೆನಾಡಿನ ಊರುಗಳೇ ಹಾಗೆ . ಕಾಡು , ಜಮೀನುಗಳ ನಡುವೆ ಇರುವ ಒಂಟಿ ಮನೆಗಳು. ಅಂತಹ ಎಂಟತ್ತು ಮನೆಗಳಿಗೆ ಸಮೀಪದಲ್ಲಿ ಒತ್ತಾಗಿ ನಿರ್ಮಿಸಿದ ಕೆಲವು ಕೂಲಿ ಕಾರ್ಮಿಕರ ಮನೆಗಳು ಸೇರಿದರೆ ಅದು ’ಒಂದೂರು’ . ವಿಳಾಸ ಹುಡುಕುತ್ತಾ ಬೈಕ್ ಏರಿ ಮಂಡಗದ್ದೆಯ ಯಾವುದೋ ಅಂದಾಜು ರಸ್ತೆಯಲ್ಲಿ ಹೊರಟವನಿಗೆ ಕಿವಿಗಡಚುತ್ತಿದ್ದ ಜೀರುಂಡೆಗಳ ಝೇಂಕಾರದ ಹೊರತಾಗಿ ಬೇರಾವ ಸದ್ದು ಕೇಳದೆ ತಬ್ಬಿಬ್ಬಾಗಿದ್ದೆ. ಅಂತೂ ಊರು ಸಿಕ್ಕಾಗ ನಿಟ್ಟುಸಿರು.
ಕಡು ಬೂದು ಬಣ್ಣದ, ಕಟ್ಟು ಮಸ್ತಾದ ಮೈಕಟ್ಟಿನ, ಅಮೃತ್ ಮಹಲ್ ಹೋರಿ ಅದು. ನನ್ನನ್ನು ನೋಡಿದೊಡನೆ ಬಲಗಾಲು ಕೆರೆದು, ಗುಟುರು ಹಾಕಿ, ಒಂದೇ ಕಣ್ಣಿನಿಂದ ನೋಡಿ ತಾನೆಷ್ಟು ಅಪಾಯಕಾರಿ ಎಂಬ ಸಂದೇಶ ತಲುಪಿಸಿತು. ಮಾಲಿಕ ಅದರ ಹಿಂಬದಿಯಿಂದ ಅರೆಗಳಾಗಿ ನೇತಾಡುತ್ತಿದ್ದ ಒಂದು ಬೀಜ(ಅದಕ್ಕಾಗಿಯೇ ಅದನ್ನು ಹೋರಿ ಎಂದಿದ್ದು)ತೋರಿದ. ಡಾಕ್ಟ್ರು ಬಂದು ಅದರ ಬೀಜ ಒಡೀತಾರಂತೆ ಎಂಬ ಸುದ್ದಿ ಹರಡಿ ನೋಡಲು ಜನರ ಗುಂಪೇ ಜಮಾಯಿಸಿತ್ತು. ಅಲ್ಲಿ ನೆರದಿದ್ದವರೆಲ್ಲ ಒಬ್ಬೊಬ್ಬರು ಒಂದೊಂದು ಘಟನೆಗಳನ್ನು ವಿವರಿಸತೊಡಗಿದರು.
“ಸಾರ್, ಇದು ಶಿಕಾರಿಪುರದಲ್ಲಿ ’ಹೋರಿ ಬೆದರಿಸುವ ಸ್ಪರ್ಧೆ’ಯಲ್ಲಿ ಕಟ್ಟಿ ನಂತರ ತಿದ್ದಿದ್ದಾರೆ .ಹೋರಿ ಬೆದರಿಸುವಾಗ ಜನರ ಕೇಕೆ, ಗುಂಪುಗಳು ಇರುವುದರಿಂದ ಭಯಗೊಂಡಿದ್ದ ಇದು ಈಗಲೂ ಜೋರಾಗಿ ಯಾರಾದರೂ ಕೂಗಿದರೆ ಜನ ಗುಂಪುಗೂಡಿದರೆ ಅನಾಮತ್ತಾಗಿ ಕೊಂಬು ಹಾಕಿ ಎತ್ತಿ ಎಸೆದು ಬಿಡುತ್ತದೆ” ಎಂದಾಗ ಇದರ ರಣಾರ್ಭಟಕ್ಕೆ ಕಾರಣಗಳು ತಿಳಿಯ ತೊಡಗಿದವು.
ಅಂದು ಸೊಪ್ಪು ಮಾರುವ ರಂಗಮ್ಮ ಬುಟ್ಟಿ ತಲೆಯ ಮೇಲಿಟ್ಟುಕೊಂಡು ದೂರದೂರದ ಒಂಟಿ ಮನೆಗಳಿಗೂ ಕೇಳುವಂತೆ ತುಸು ಜೋರಾಗಿ ಸೊಪ್ಪೋ ಸೊಪ್ಪೋ ಹರಿವೆ…ಮೆಂತೆ….., ಬಸಳೆ….. ಎಂದು ಕೂಗುತ್ತಾ ರಸ್ತೆಯಲ್ಲಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಕೆರಳಿದ ಹೋರಿ ಹಿಂಬದಿಯಿಂದ ಆಕೆಯನ್ನು ಎತ್ತಿ ರಸ್ತೆಗೆ ಕುಕ್ಕಿದ ಹೊಡೆತಕ್ಕೆ ಆಕೆಯ ಸೊಂಟ ಮುರಿದು ಆಸ್ಪತ್ರೆಯಲ್ಲಿ ತಿಂಗಳು ಕಳೆದಿದ್ದಳು. ಈ ಯಮ್ಮನಿಗೆ ಇನ್ನೂ ಒಂದು ತಿಂಗಳು ’ರೆಸ್ಟ್’ ಮಾಡುವಂತೆ ವೈದ್ಯರು ಸಲಹೆ ಮಾಡಿದ್ದರು. ಆಕೆಯ ಗಂಡ ಕುಡಿದ ಮತ್ತಿನಲ್ಲಿ ಹೋರಿಯ ಮಾಲಿಕನ ಮನೆಯ ಬಳಿ ಬಂದು ಸೂ…ಮಗನೆ ಎಂದು ಪ್ರಾರಂಭಿಸಿ, ತನ್ನ ಬೈಗುಳಗಳ ಡಿಕ್ಷ್ನರಿಯಲ್ಲಿ ಇದ್ದ ಎಲ್ಲಾ ಶಬ್ಧಗಳನ್ನೂ ಬಳಕೆ ಮಾಡಿ ಹೋಗಿದ್ದ. ಊರಿನಲ್ಲಿ ಮರ್ಯಾದಸ್ಥನಾಗಿದ್ದ ಹೋರಿಯ ಮಾಲಿಕ ಆ ಬೈಗುಳಗಳನ್ನು ಕೇಳಿ ಅರಗಿಸಿಕೊಳ್ಳಲಾಗದೆ ಉಡುಗಿ ಹೋದ . ಕೊನೆಗೆ ಆಕೆಯ ಖರ್ಚನ್ನೆಲ್ಲಾ ಈತನೇ ಭರಿಸಿದ್ದ ಕೂಡ.
ಆ ಊರಿನ ’ಕಿಟ್ಟ’ ಇನ್ನೂ ನಲವತ್ತರ ಪ್ರಾಯದವ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ . ದಿನವಿಡೀ ಶರಾಬಿನ ನಶೆಯಲ್ಲಿ ಮುಳುಗಿದವನ ’ಲಿವರ್’ ಎಕ್ಕುಟ್ಟೊಗಿತ್ತು. ಇದರಿಂದ ಹೊಟ್ಟೆಯಲ್ಲಿ ನೀರು ತುಂಬಿದಂತಾಗಿ ಹೊಟ್ಟೆ ಗಡಿಗೆಯಂತೆ, ಕೈಕಾಲುಗಳು ಬಿದಿರಿನ ಊಟಂಡೆಯಂತಾಗಿ ಗದ್ದೆಗಳಲ್ಲಿ ನೇತಾಡುವ “ಬೆಚ್ಚಪ್ಪ”ನ ರೀತಿ ಕಾಣುತ್ತಿದ್ದ.ಊರಿನಲ್ಲಿ ಎಲ್ಲರೂ ಆತನನ್ನು “ಬೆಚ್ಚಪ್ಪ” ಅಂತಲೇ ಕರೆಯಲು ಶುರುಮಾಡಿದ್ದರು. ಸ್ನೇಹಿತರು ಈತನನ್ನು ಗದ್ದೆಯಲ್ಲಿ ನಿಲ್ಲಿಸಿದರೆ ಹಕ್ಕಿಗಳು ಸುಳಿಯುವುದಿಲ್ಲ ಎಂದು ರೇಗಿಸುತ್ತಿದ್ದರು. ಎಂದಿನಂತೆ ಕಿಟ್ಟ ಅಮಲಿನಲ್ಲಿ ಒಂದಷ್ಟು ಜನ ಕುಡುಕ ಸ್ನೇಹಿತರೊಂದಿಗೆ ಮಸ್ತಿ ಮಾಡುತ್ತಾ ರಸ್ತೆ ಬದಿಯಲ್ಲಿ ಹೊರಳಾಡುತ್ತಿದ್ದ. ಗುಂಪುಕಟ್ಟಿ ಮಸ್ತಿ ಮಾಡುತ್ತಿದ್ದುದನ್ನು ನೋಡಿ ಕೆರಳಿದ ಹೋರಿ ಮಾಮೂಲಿಯಂತೆ ಆತನನ್ನು ಎತ್ತಿ ಎಸೆದಿತ್ತು. ತೂಕವೇ ಇಲ್ಲದ ಕಿಟ್ಟ , ಹಕ್ಕಿಯಂತೆ ಹಾರುತ್ತಾ ಹೋಗಿ ಹತ್ತಾರು ಅಡಿ ದೂರದಲ್ಲಿ ಬಿದ್ದ. ಆತನ ಬಲಗಾಲಿನ ತೊಡೆ ಮೂಳೆ ಮುರಿದು ರಾಡ್ ಹಾಕಿ ಆಪರೇಷನ್ ಮಾಡಿದ ವೈದ್ಯರು ಬಲಗಾಲಿನ ಅಗಲವಾದ ಗಾಯಕ್ಕೆ ಎಡಗಾಲಿನ ತೊಡೆಯ ಚರ್ಮ ತೆಗೆದು ‘ಪ್ಯಾಚ್’ ಹಾಕಿ ಕಳಿಸಿದ್ದರು. ಆರು ತಿಂಗಳು ಊರುಗೋಲು ಹಿಡಿದು ಮನೆಯಲ್ಲೇ ಇರಬೇಕೆಂಬ ಪರಿಸ್ಥಿತಿ ಆತನದು. ಊರುಗೋಲು ಹಿಡಿದು ಕುಂಟುತ್ತಾ, ಮನೆಯ ಗೇಟಿನ ಬಳಿ ಬಂದ ಕಿಟ್ಟ ಭಯಬೀತನಾಗಿ ಹೋರಿಯನ್ನು ನೋಡುತ್ತಿದ್ದಾಗ ಆತನ ಕಥೆ ಕೇಳಿ ನಾವುಗಳು ವ್ಯಥೆ ಪಟ್ಟರೆ, ತೊಡೆಮುರಿದು ಮನೆಯಿಂದ ಹೊರಹೋಗಲು ಅವಕಾಶವಿಲ್ಲದೆ ಕುಡಿತಕ್ಕೆ ಬ್ರೇಕ್ ಹಾಕಿದ ಹೋರಿಯ ಕಾರ್ಯಕ್ಕೆ ಮೆಚ್ಚಿ ಧನ್ಯತಾ ಭಾವ ಹೊಂದಿದ್ದ ಅವರಪ್ಪ “ಒಳ್ಳೆಯ ಕೆಲಸ ಮಾಡ್ತು ಬಿಡಿ ” ಎಂದು ಹಿರಿಹಿರಿ ಹಿಗ್ಗಿದ್ದ!!!
ಪಕ್ಕದೂರಿನ ಎತ್ತುಗಳಿಗೆ ’ಹಲ್ಲೆ ಕಟ್ಟಲು’ ಬಂದಿದ್ದ ಆಯನೂರು ಸಾಬುಗೆ ಈ ಹೋರಿಯ ವಿಷಯ ಮುಟ್ಟಿತು. ನನ್ನ ಜೀವನದಾಗ ಎಂತೆಂಥ ಹೋರಿ ಪಳಗಿಸಿದೀನಿ, ಇದ್ಯಾವ ಲೆಕ್ಕ ನೋಡೆ ಬಿಡಾನ ಎಂದು ಈ ಹೋರಿಯನ್ನು ಕೆಡವಿ ಮೂಗುದಾರ ಸುರಿದು, ಹಲ್ಲೆ ಕಟ್ಟುವ ಸಾಹಸಕ್ಕೆ ಮುಂದಾಗಿದ್ದ. ಆಯನೂರು ಸಾಬು ಹೋರಿಯನ್ನು ಕೆಡುವುತ್ತಾನೆಂಬ ಸುದ್ದಿ ಅಕ್ಕಪಕ್ಕದ ಊರುಗಳಲ್ಲಿ ಹಬ್ಬಿ ನೋಡಲು ಒಂದೈವತ್ತು ಜನರು ಗುಂಪುಕಟ್ಟಿದರು. ಜನರ ಗುಂಪು ನೋಡಿ ಹೋರಿ ಗಾಬರಿಗೊಂಡಿತು. ಎಂದಿನಂತೆ ಬೀಡಿ ಮುಂಡನ್ನೊಂದು ಬಾಯಲ್ಲಿಟ್ಟಿ ನಾಲ್ಕು ’ದಮ್, ಎಳೆದು ಕೆಲಸಕ್ಕಣಿಯಾದ ಸಾಬು, ಹೋರಿಯ ಕೊಂಬು ತಲೆಯನ್ನು ಒಂದು ಬದಿ ತಿರುಗಿಸಲು ಸಹಾಯಕನಿಗೆ ಹೇಳಿ ಅದರ ಸೊಂಟಕ್ಕೆ ಹಗ್ಗ ಹಾಕಿ ಬಿಗಿಗೊಳಿಸಿ ಕೆಡಗುವ ಪ್ರಯತ್ನದಲ್ಲಿದ್ದ. ನೆರೆದಿದ್ದ ಜನ ರೋಮಾಂಚನಗೊಂಡು ಚಪ್ಪಾಳೆ ತಟ್ಟಿದರು, ಚಪ್ಪಾಳೆಯ ಶಬ್ದ ಕೇಳಿ ಹೋರಿ ಮತ್ತಷ್ಟು ಗಾಬರಿಬಿದ್ದಿತು. ಒಮ್ಮೆಲೇ ಕೆರಳಿದ ಹೋರಿ ತನ್ನ ಹಿಂಗಾಲುಗಳನ್ನು ಕತ್ತೆಯಂತೆ ಎತ್ತಿ ಎದೆಗೆ ಒದೆಯಲು ನಾಲ್ಕಡಿ ದೂರ ಹೋಗಿ ಬಿದ್ದೆದ್ದ ಸಾಬು “ ಥತ್ ತರೀಕೆ ಇಸ್ಕಿ ಮಾಕಿ” ಎಂದು ಇಲ್ಲಾ ಇಲ್ಲಾ ತನಗೇನೂ ಆಗಿಲ್ಲ ಎನ್ನುತ್ತಲೇ ತೆವಳುತ್ತಾ ಲಂಟಾನ ಗಿಡದ ಮರೆಗೆ ಸರಿದು ಪೆಟ್ಟಾದ ಜಾಗವನ್ನು ಮುಟ್ಟಿ ನೋಡಿ ಕೊಳ್ಳಲಾರಂಭಿಸಿದನಂತೆ. ಅಸಲಿಯಾಗಿ ಆಯನೂರು ಸಾಬು ಹೋರಿ ಕೆಡವಿ ಹಲ್ಲೆ ಕಟ್ಟುವುದರಲ್ಲಿ ನಿಷ್ಣಾತನೇ ಆಗಿದ್ದ. ಆತನ ಅಘಾದವಾದ ಅನುಭವದಲ್ಲಿ ಇಂತಹ ನೂರಾರು ಹೋರಿಗಳನ್ನು ಕೆಡವಿ ಹಲ್ಲೆ ಕಟ್ಟಿದವನು . ಆದರೆ ಸುತ್ತಲೂ ನೆರೆದಿದ್ದ ಜನರು ಶಬ್ಧ ಮಾಡಿದ ಕಾರಣ “ಹೋರಿ ಬೆದರಿಸುವ ಸ್ಪರ್ಧೆಯ” ನೆನಪಾಗಿ ಗಾಬರಿಗೊಂಡು ಆತನಿಗೆ ಒದ್ದು ಕಳಿಸಿತ್ತು.
ಮಾಲಿಕನ ಮನೆಯಲ್ಲಿ ಒಂದು ಮಲೆನಾಡು ಗಿಡ್ಡ ಹಸು ಇತ್ತು ಅದು ಬೆದೆಗೆ ಬಂದಾಗ ಅಕ್ಕಪಕ್ಕದಲ್ಲಿ ಹೊಟ್ಟೆಗಿಲ್ಲದ ಮುರುಟು ಹೋರಿಗಳು ಎಟುಕದಿದ್ದರೂ ಹಸುವಿನ ಬೆನ್ನು ಹಿಡಿದು ನೆಗೆದು ಹಾರುತ್ತಾ ವ್ಯರ್ಥಪ್ರಯತ್ನ ಮಾಡುತ್ತಿದ್ದವು . ಇದನ್ನು ದೂರದಿಂದಲೇ ಗ್ರಹಿಸಿ ಅತ್ತಧಾವಿಸಿದ ‘ನೀಲ’ನಿಗೆ ಬೆದರಿದ ಉಳಿದ ಹೋರಿಗಳು ಎರಡೂ ಬದಿ ನಿಂತು ಆಸ್ಥಾನಕ್ಕೆ ಬರುವ ರಾಜನಿಗೆ ಮರ್ಯಾದೆ ಕೊಡುವಂತೆ ಸ್ವಾಗತಕ್ಕೆ ನಿಂತವು. ಮುರುಟು ಹೋರಿಗಳದ್ದು ಎತ್ತರ ಕಡೆಮೆಯಾಗಿರುವುದು ಸಮಸ್ಯೆಯಾಗಿದ್ದರೆ, ನೀಲನ ಬೃಹದಾಕಾರದ ದೇಹವೇ ಈಗ ಸಮಸ್ಯೆಯಾಯಿತು. ನಾಲ್ಕು ಕ್ವಿಂಟಾಲ್ ತೂಗುವ ನೀಲ ನೂರು ಕೆಜಿಯೂ ಇರದ ಗಿಡ್ಡ ಹಸುವಿನ ಮೇಲೆ ಹಾರಲು , ಹಸುವಿನ ಹಿಂಬದಿಯ ಕಾಲುಗಳು ಆಯತಪ್ಪಿ , ಸೊಂಟದ ಮೂಳೆಗಳ ಕೀಲು ತಪ್ಪಿದವು. ಹಸು ಗೊಂಕರ ಕಪ್ಪೆಯು ನೀರಿನಲ್ಲಿ ಈಜುವಂತೆ ಕಾಲುಗಲು ಆಚೆ ಈಚೆ ಎರಡೂ ಬದಿಯಾಗಿ ನೆಲ ಹಿಡಿದು ನರಳಿ ಮೃತಪಟ್ಟಿತು.
ದೀಪಾವಳಿಯ ದಿನ ಪಟಾಕಿಯ ಸದ್ದು ಪ್ರಾರಂಭವಾಗಿದ್ದೇ ತಡ, ಇದರ ಅವತಾರಕ್ಕೆ ಕೊಟ್ಟಿಗೆಯಲ್ಲಿದ್ದ ಎಲ್ಲಾ ಜಾನುವಾರುಗಳು ಹಗ್ಗ ಹರಿದುಕೊಂಡು ಕಾಡು ಸೇರಿದವು. ರಾತ್ರಿ ಪಟಾಕಿಯ ಶಬ್ಧ ಜೋರಾದಂತೆ ಹೋರಿಯ ಅರ್ಭಟಕ್ಕೆ ಮರುದಿನ ಅಲ್ಲಿ ಕೊಟ್ಟಿಗೆ ಇತ್ತೆಂದೇ ಹೇಳಲು ಕಷ್ಟವಾಗುತ್ತಿತ್ತು. ಓಡಿ ಹೋದ ಜಾನುವಾರುಗಳು ಮೂರು ದಿನಗಳ ನಂತರ ಮನೆಯ ಬಳಿ ಬಂದರೂ ಕೊಟ್ಟಿಗೆ ಸೇರಲು ನಿರಾಕರಿಸಿ ಬೀದಿಯಲ್ಲೆ ಮಲಗಿದವು.
ಹೀಗೆ ಅದರ ಉಪಟಳಗಳನ್ನು ವಿವರಿಸುತ್ತಾ ಹೈರಾಣಾಗಿದ್ದ ಮಾಲಿಕ, ಹೋರಿಯ ಹಿಂಬಾಗದಿಂದ ಏರುಪೇರಾಗಿ ಕಾಣುತ್ತಿದ್ದ ಅದರ ಒಂಟಿ ಬೀಜವನ್ನು ಮತ್ತೊಮ್ಮೆ ನೋಡಿ ಎಂಥೆಂತಾ ಬೋಳಿ ಮಕ್ಕಳು ಇರ್ತಾರೆ, “ಅವನ ಬೀಜ ಸೀದೋಗ” ಎಂದು ಹೋರಿಯ ಬೀಜ ಒಡೆದವನನ್ನು ಶಪಿಸತೊಡಗಿದ.
ಹಿಂದೆ ಹಳ್ಳಿಗಳಲ್ಲಿ ಹೋರಿಯ ಬೀಜಗಳನ್ನು ವೈಜ್ಞಾನಿಕವಾಗಿ ಒಡೆಯುತ್ತಿರಲಿಲ್ಲ . ಎರಡು ಮರದ ಕೋಲುಗಳ ನಡುವೆ ವೃಷಣಗಳನ್ನು ಇರಿಸಿ ಅರೆದು ಅದನ್ನು ನೀರು ಮಾಡಿ ಬಿಡುತ್ತಿದ್ದರು. ಆಗ ಅವು ನೋವಿನಿಂದ ಬಳಲುತ್ತಿದ್ದವು. ಹೀಗೆ ಅರೆಯುವಾಗ ಅವುಗಳ ಒದ್ದಾಟ ಚೀರಾಟದ ಕಾರಣ ಬೇಗನೆ ಮುಗಿಸುವ ಭರದಲ್ಲಿ ಕೆಲವೊಮ್ಮೆ “ಅರೆಕಾಳಾಗಿ” ಹಾಗೇ ಸ್ವಲ್ಪ ಉಳಿದು ಬಿಡುತ್ತಿತ್ತು. ಅರ್ಧ ಬತ್ತಿದ ವೃಷಣಗಳಲ್ಲಿ ವೀರ್ಯ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ಆಗದೆ ಇರಬಹುದು ಆದರೆ ’ಟೆಸ್ಟೋಸ್ಟಿರಾನ್’ ಎಂಬ ಹಾರ್ಮೋನು ಉತ್ಪಾದನೆ ತಕ್ಕ ಮಟ್ಟಿಗೆ ಆಗುತ್ತದೆ. ಜಗತ್ತಿನಲ್ಲಿ ಗಂಡಿನ ಉನ್ಮಾದ ಹೆಚ್ಚಿಸಲು ಈ ಹಾರ್ಮೋನ್ ಮುಖ್ಯವಾಗಿ ಕಾರಣವಾಗಿರುತ್ತದೆ. ಹಾಗಾಗಿ ಈ ಹೋರಿಯ ಉನ್ಮಾದ ತಗ್ಗಿಸಲು ಅರೆಗಾಳನ್ನು ಸೀಲ್ ಮಾಡಿದಲ್ಲಿ ಸಾದ್ಯವಾಗುತ್ತದೆ. ವೃಷಣಗಳನ್ನು ಸರಿಯಾದ ಮಾದರಿಯಲ್ಲಿ ಕಸಿ ಮಾಡಿದಾಗ ಅವುಗಳಿಗೆ ರಕ್ತಸಂಚಾರ ಗಣನೀಯವಾಗಿ ಕಡಿಮೆಯಾಗಿ ಗಾತ್ರದಲ್ಲಿ ಕುಗ್ಗುತ್ತವೆ. ಆಗ ವೀರ್ಯ ಉತ್ಪಾದನೆ ನಿಂತು ಹೋಗುತ್ತದೆ ಹಾಗೂ ಉನ್ಮಾದ ಹೆಚ್ಚಿಸುವ ಹಾರ್ಮೋನ್ ’ಟೆಸ್ಟೋಸ್ಟಿಲಾನ್’ ಸೃವಿಸುವಿಕೆ ಕೋಡ ಬಹುತೇಕ ನಿಂತು ಹೋಗುತ್ತದೆ . ಇದರಿಂದ ಅವು ಮೃದು ಸ್ವಭಾವಕ್ಕೆ ತಿರುಗುತ್ತವೆ. ಆಗ ಅವುಗಳನ್ನು ತಿದ್ದಿ ಕೃಷಿ ಕೆಲಸಕ್ಕೆ ಅನುಕೂಲವಾಗುವಂತೆ ಉಪಯೋಗಿಸಲಾಗುತ್ತದೆ. ಇದು ಅದರ ಹಿಂದಿರುವ ವೈಜ್ಞಾನಿಕ ಅಂಶವಾಗಿದೆ.
ಇಷ್ಟೆಲ್ಲಾ ಹೋರಿಯ ಕುರಿತಾದ ಘಟನೆಗಳನ್ನು ಕೇಳಿದ ನನಗೆ ಭಯ ಹಾಗೂ ಒತ್ತಡ ಕಾಡಿದ್ದು ನಿಜ. ಜನರಿಗೆ ನಿರೀಕ್ಷೆ ಹಾಗೂ ಕುತೂಹಲವೂ ಇತ್ತು. ಎಲ್ಲದಕ್ಕೂ ಮುಖ್ಯವಾಗಿ ಮಾಲೀಕರಿಗೆ ಈ ಸಮಸ್ಯೆ ಬಗೆ ಹರಿದು ದುಬಾರಿ ಬೆಲೆ ಕೊಟ್ಟು ತಂದಿದ್ದ ನೀಲನನ್ನು ಪಳಗಿಸಿ ತಮ್ಮಲ್ಲೇ ಉಳಿಸಿಕೊಂಡು ಕೃಷಿ ಕೆಲಸಕ್ಕೆ ಬಳಸಬೇಕೆಂಬ ಅಪೇಕ್ಷೆ ಇತ್ತು.
ಅಲ್ಲಿ ನೆರೆದಿದ್ದವರಿಗೆಲ್ಲಾ ಒಂದೇ ಕುತೂಹಲ. ಈ ಕೃಶಕಾಯದ ಡಾಕ್ಟ್ರು ಬಲಿಷ್ಠವಾದ ಈ ಹೋರಿಯನ್ನು ಹೇಗೆ ನಿಭಾಯಿಸುತ್ತಾರೆ? ಅವರ ನೋಟದಲ್ಲಿ ಆಯನೂರು ಸಾಬು ತಿಂದ ಪೆಟ್ಟಿನಂತೆ ಈ ಡಾಕ್ಟ್ರು ಏನಾದರೂ ಅನಾಹುತ ಮಾಡಿಕೊಳ್ತಾರೆ ಅನ್ನೋ ಭಾವನೆ ವ್ಯಕ್ತವಾಗುತ್ತಿತ್ತು. ಅಷ್ಟರಲ್ಲೇ ಅಲ್ಲಿದ್ದವನೊಬ್ಬ ಏರಾದ್ರೂ ಮದುವೆ ಆಗದವರು ಇಲ್ಲಿದ್ರೆ ’ನಿಮ್ಮದನ್ನು’ ಜಾಗ್ರತೆ ಮಾಡ್ಕೊಳಿ ಅಂದ. ನಾನು ಸುತ್ತಲೂ ನೆರೆದಿದ್ದವರನ್ನು ನೋಡಿದೆ, ಅಲ್ಲಿ ಮದುವೆ ಆಗದಿದ್ದವನು ನಾನೋಬ್ಬನೇ ಇದ್ದಿದ್ದು ಅನ್ನಿಸಿತು. ಆತ ನನಗೇ ಪರೋಕ್ಷವಾಗಿ ಹೇಳಿದ್ದು ಎಂದು ತಿಳಿಯಲು ನನಗೆ ಕಷ್ಟವಾಗಲಿಲ್ಲ. ತೇಲಿ ಬಂದ ನಗುವನ್ನು ಅದುಮಿಟ್ಟು ಕೇಳಿಯೂ ಕೇಳದವನಂತೆ ಮುಂದಿನ ಕೆಲಸಕ್ಕೆ ಅಣಿಯಾದೆ.
ಈ ರೀತಿಯ ಆಕ್ರಮಣಕಾರಿ ಹೋರಿಯನ್ನು ನಿಯಂತ್ರಿಸುವಾಗ ಪಶುವೈದ್ಯರಾದ ನಾವು ಕಲಿತ ವಿದ್ಯೆ ಮತ್ತು ಜ್ಞಾನವನ್ನು ಬಳಸಿಕೊಳ್ಳುತ್ತೇವೆ . ನಾನು ಮೊದಲೇ ಅವರಿಗೆ ತಿಳಿಸಿದಂತೆ ಹೋರಿಯನ್ನು ಬೆಳಗಿನಿಂದಲೇ ಉಪವಾಸ ಇಡಲು ತಿಳಿಸಿದ್ದೆ, ಅವರೂ ಹಾಗೇ ಮಾಡಿದ್ದರು. ಅರಿವಳಿಕೆ ಮದ್ದು ನೀಡುವಾಗ ಹೊಟ್ಟೆ ಖಾಲಿ ಇಡಬೇಕೆಂಬ ನಿಯಮವಿರುತ್ತದೆ. ನಿಗದಿತ ಡೋಸ್ ಅರವಳಿಕೆಯನ್ನು ಲೆಕ್ಕಹಾಕಿ ಹೋರಿಗೆ ಚುಚ್ಚುಮದ್ದು ನೀಡಿದೆ 20 ನಿಮಿಷ ಯಾರೂ ಅದರ ಬಳಿ ಸುಳಿಯದೆ ದೂರ ನಿಲ್ಲುವಂತೆ ನಿರ್ದೇಶಿಸಿದೆ. ಹೋರಿ ನಿಧಾನವಾಗಿ ಮಂಪರಿಗೆ ಜಾರಿ ಮಲಗಿತು. ನೆರೆದವರಲ್ಲಿ ಕೂತೂಹಲ ತಾಳದ ಕೆಲವು ಪಡ್ಡೆಗಳು ಬಂದು ಅದರ ಬೀಜವನ್ನು ಹಿಡಿದು ಗಿಲಿಗಿಲಿ ಗಿಟ್ಟಿಸಿ ಖುಷಿ ಪಟ್ಟರು.ನಂತರ ಅಲ್ಲಿ ನೆರೆದಿದ್ದ ಸ್ಥಳೀಯರ ಸಹಕಾರದೊಂದಿಗೆ ಅದನ್ನು ನಿಯಂತ್ರಿಸಿ ಅದಕ್ಕೆ ಮೂಗುದಾರ ಸುರಿದು, ಅರೆಕಾಳಾಗಿ ಉಳಿದಿದ್ದ ಒಂಟಿ ಬೀಜವನ್ನು ಕಸಿ ಮಾಡಿ ನನ್ನ ಕೆಲಸ ಪೂರೈಸಿದೆ.
ಹಂತ ಹಂತವಾಗಿ ಆರು ತಿಂಗಳ ಸಮಯದಲ್ಲಿ ಮಾಲಿಕ ಅದನ್ನು ತಿದ್ದಿ ತನ್ನ ನಿಯಂತ್ರಣಕ್ಕೆ ತಂದುಕೊಂಡನು. ಕಸಿ ಮಾಡಿದ ನಂತರ ಅದರ ದೇಹದಲ್ಲಿ ’ಟೆಸ್ಟೋಸ್ಟಿರಾನ್’ ಹಾರ್ಮೋನಿನ ಪ್ರಮಾಣ ಗಣನೀಯವಾಗಿ ಇಳಿದು ಉನ್ಮಾದ ಕಡಿಮೆಯಾಯಿತು ಹಾಗೂ ಅದರ ಆರ್ಭಟವು ಇಳಿದು ಶಿಸ್ತಿನ ಸಿಪಾಯಿಯಂತಾಯಿತು.
ಈ ಪಶುವೈದ್ಯಕೀಯ ವೃತ್ತಿಯ ಪ್ರತಿ ಕ್ಷಣವನ್ನು ಅನುಭವಿಸಿ ಬಿಡಬೇಕು ಎಂಬ ಹೆಬ್ಬಯಕೆ ನನ್ನದು. ಆ ಗೊಂಡಾರಣ್ಯದ ನಡುವಿನ ಜನರ ಬದುಕು ಬವಣೆಯೊಂದಿಗೆ ಅರೆ ಕ್ಷಣವಾದರೂ ಅರಿತು ಬೆರೆತು ಅದನ್ನು ವೃತ್ತಿ ಬದುಕಿನ ಪುಟಗಳಲ್ಲಿ ದಾಖಲಿಸುವ ಅವಕಾಶ ನನಗೆ ಒದಗಿ ಬಂದದ್ದು ನನ್ನ ಸೌಭಾಗ್ಯವೆಂದೇ ಭಾವಿಸುವೆ .ಇಂತಹ ಅನೇಕಾನೇಕ ವೈವಿದ್ಯಮಯ ಸನ್ನಿವೇಶಗಳುಳ್ಳ ನೈಜ ಘಟನಾವಳಿಗಳನ್ನು ನನ್ನದೇ ಶೈಲಿಯಲ್ಲಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಲೇ ಇರುತ್ತೇನೆ.

“ಹರಕೆಯ ಕೋಳಿಯೊಂದಿಗೆ” ಮುಂದೊಮ್ಮೆ ಸಿಗುವೆ.
ನಮಸ್ಕಾರಗಳು

Leave a Reply

Your email address will not be published. Required fields are marked *