
ವರದಿ : ದತ್ತಾತ್ರೇಯ ಭಟ್ಟ ಕಣ್ಣಿಪಾಲ..
ಯಲ್ಲಾಪುರ ; ನಿತ್ಯದ ಸಂಪರ್ಕಕ್ಕೆ ಬೇಕಾದ ಆಧುನಿಕತೆಯ ಯಾವ ಮೂಲ ಸೌಕರ್ಯಗಳು ಇರದ ಕಾಲವದು.
ಕಾಡಿನ ಕಪ್ಪು ದಾರಿ ಹೊರಜಗತ್ತಿನ ಬೆಳಕು ಬರದ ಹಾಗೆ ಜನಜೀವನಕ್ಕೆ ಮಸುಕಾಗಿ ಅಂಟಿಕೊಂಡಿತ್ತು. ಕೃಷಿಯ ಜೊತೆಗೆ ಸಾಂಪ್ರದಾಯಿಕವಾಗಿ ದೇಸಿ ತಳಿಯ ಹಸು, ಎಮ್ಮೆ ಸಾಕಣೆ ಮಾತ್ರ ಮಾಡಿಕೊಂಡು ಉಪಜೀವನ ನಡೆಸುವ ಸವಕಳಿ ಜೀವದ ಕೃಷಿಯ ಕಷ್ಟದ ಹೊತ್ತು ಅದು. ತೊಂಬತ್ತರ ದಶಕದಲ್ಲಿ ಪ್ರತ್ಯಕ್ಷವಾದ ಪಾದರಸದಂತಹ ಕೆ ಜಿ ಹೆಗಡೆ ಎನ್ನುವ ವ್ಯಕ್ತಿತ್ವವೊಂದು ಕೃಷಿಯೊಂದಿಗೆ ಹೈನುಗಾರಿಕೆಯ ಉಪಕಸುಬಿಗೆ ಬೆನ್ನೆಲುಬಾಗಿ ನಿಂತ ಬಗೆ ಹೇಳಲು ಸಾವಿರಾರು ಜನ ಮುಂದೆ ಬಂದಾರು. ಬಡತನದ ಬಿಡಾರದಲ್ಲಿಯೇ ಇಷ್ಟು ದಿನ ಕಳೆದು, ಮನೆಯ ಹಿಂದಿನ ಇಳಿಮಾಡಿನ ಮಣ್ಣಿನ ನೆಲದ ಮೂಲೆಯಲ್ಲಿ ಕಟ್ಟುವ ದನಕರುಗಳಿಗೆ ಸುಸಜ್ಜಿತ ಕೊಟ್ಟಿಗೆ ಎನ್ನುವ ಆಶ್ರಯ ತಾಣವೊಂದು ತಯಾರಾಯಿತು. ಪ್ರತಿ ಮನೆಯಲ್ಲೂ ದೇಸಿ ತಳಿಯ ಹಸು ಎಮ್ಮೆಗಳ ಜೊತೆಗೆ ಜರ್ಸಿ,ಎಚ್ ಎಫ್ ತಳಿಯ ಹೆಚ್ಚು ಹಾಲು ಕೊಡುವ ಹಸುಗಳು ಬಂದವು . ಜಾನುವಾರುಗಳ ಸಾಕುವ ಗುಟ್ಟು ಮನೆ,ಕೊಟ್ಟಿಗೆಯ ದಿನಚರಿ ಬದಲಾಯಿಸಿತು. ನಿಶ್ಚಿತ ಆದಾಯ ದ್ವಿಗುಣಗೊಂಡು ಕೊಟ್ಟಿಗೆಯಿಂದಲೇ ಭವ್ಯ ಬಂಗಲೆವರೆಗೂ ಕಾರಣವಾಯಿತು. ಪಟ್ಟಣದ ಬಹುದೂರ ಇರುವ ಘಟ್ಟ ಪ್ರದೇಶದ ಕುಗ್ರಾಮ ಹಳ್ಳಿಗಳಲ್ಲಿ ನೂರಾರು ಲೀಟರ್ ಲೆಕ್ಕದಲ್ಲಿ ಹಾಲಿನ ಕ್ಯಾನು ತುಂಬಿ ತುಂಬಿ ಬಂದವು.
ಅಕ್ಕಚ್ಚಿಗೆ ಚೆಲ್ಲಿ ಹೋಗುತ್ತಿದ್ದ ಹೆಚ್ಚಾದ ಮನೆಯ ಬಿಳಿ ಹಾಲು ಮಜ್ಜಿಗೆ ದೂರದೂರಿಗೆ ಹೊರಟು ನಿಂತು ಪೊಟ್ಟಣದಲ್ಲಿ ಅಚ್ಚಾಗಿದ್ದವು.
ಆ ನೊರೆ ಹಾಲಿನ ಸಮೃದ್ಧಿಯ ಹಿಂದೆ ಸದ್ದಿಲ್ಲದೆ ಕಳಚೆ ಡಾಕ್ಟರ್ ಹೆಸರು ಹಸಿರಾಗಿತ್ತು. ಕೃಷಿ ರೈತರ ಉಪ ಜೀವನಕ್ಕೆ ದಾರಿ ಮಾಡಿಕೊಟ್ಟ ಜೀವನೋತ್ಸಾಹಿ ಕೆ. ಜಿ ಹೆಗಡೆ ತಮ್ಮ ಸೇವೆಯನ್ನು ಮೊದಲು ಯಲ್ಲಾಪುರ ತಾಲೂಕಿನ ಕಳಚೆಯಿಂದ ಆರಂಭಿಸಿರುವುದ ರಿಂದ ಆರಂಭದಲ್ಲಿ ಸಮಾಜದ ಪಾಲಿಗೆ ಕಳಚೆ ಡಾಕ್ಟರ್ ಆದರು.
ಮೂಲತಃ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಓಣಿಕೇರಿಯ ಕೃಷ್ಣಮೂರ್ತಿ.ಜಿ.ಹೆಗಡೆಯವರು ಸ್ಥಳೀಯ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಡಿಪ್ಲೊಮಾ ಮತ್ತು ಪದವಿಯ ಕಾಲೇಜು ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿದರು. ನಂತರ ಎರಡು ವರ್ಷ ಧಾರವಾಡದಲ್ಲಿ ಪಶು ಸಂಗೋಪನಾ ಇಲಾಖೆಯ ತರಬೇತಿ ಮುಗಿಸಿದರು. 1993ರ ಮಾರ್ಚನಲ್ಲಿ ಪಶುವೈದ್ಯ ಪರಿವೀಕ್ಷಕರಾಗಿ ಕಳಚೆಯಲ್ಲಿ ಸೇವೆ ಆರಂಭಿಸಿದರು. ಸೇವಾವಧಿಯಲ್ಲಿ ನಡುವೆ ಒಂದು ವರ್ಷ ಅಜ್ಜೀಬಾಳ ನಲ್ಲಿ ಸೇವೆ ಸಲ್ಲಿಸಿ ಪುನಃ ವಜ್ರಳ್ಳಿಯಲ್ಲಿ ನೆಲೆ ನಿಂತರು. ಎರಡು ಬಾರಿ ಮುಂಬಡ್ತಿಗೆ ಅವಕಾಶ ಇದ್ದರೂ ತಾವಿರುವ ಸ್ಥಳದಲ್ಲಿಯೇ ಸೇವೆ ಮಾಡಲು ಸಂಕಲ್ಪಿಸಿದರು.
ಪಶು ಸಂಗೋಪನೆಯ ಇಲಾಖೆಯಲ್ಲಿ ಹಿರಿಯ ಪಶು ಪರಿವೀಕ್ಷಕರಾಗಿ ಸುದೀರ್ಘವಾಗಿ ಅಂದರೆ ಇಂದಿಗೂ ಸೇವೆ ಸಲ್ಲಿಸುತ್ತಿರುವ ಕೆ .ಜಿ. ಹೆಗಡೆ ಇತ್ತೀಚೆಗೆ ನಿವೃತ್ತಿ ಆದರು ಎನ್ನುವ ಸುದ್ದಿ ಯಾರ ಕಿವಿಗೂ ಬೀಳಲೇ ಇಲ್ಲ.
ಜಾನುವಾರುಗಳ ಚಿಕಿತ್ಸೆಯ ನಿರಂತರ ಸೇವೆಯ ವ್ಯಾಕರಣದಲ್ಲಿ ಅವರು ಕೂಡಾ ನಿವೃತ್ತಿಯ ಪದ ಮರೆತಿದ್ದಾರೆ. ಅದಕ್ಕಾಗಿ ಅವರಿಗೆ ನಿವೃತ್ತಿ ಅನ್ನುವುದೇ ಇಲ್ಲ. ಯಲ್ಲಾಪುರದ ಅರ್ಧ ತಾಲೂಕಿನ ಹೊರತಾಗಿ ನೆರೆಯ ತಾಲೂಕಿನವರೆಗೆ ನಿತ್ಯವೂ ಕನಿಷ್ಠ ನೂರು ಕಿಲೋಮೀಟರು ಓಡಾಡುವ ಚಲನಶೀಲ ಸೇವೆಗೆ ಬೇಸರ ಅನ್ನುವುದೇ ಬಂದಿಲ್ಲ. ತಮ್ಮ ಇಡೀ ಸೇವಾವಧಿಯಲ್ಲಿ ಐವತ್ತಾರು ದಿನ ಮಾತ್ರ ವೈಯಕ್ತಿಕ ಅನಾರೋಗ್ಯದಿಂದ ಪಶುವೈದ್ಯಕೀಯ ಸೇವೆಯಿಂದ ಕೆ ಜಿ ಹೆಗಡೆಯವರು ದೂರ ಉಳಿಯಬೇಕಾಯಿತು ಬಿಟ್ಟರೆ ಉಳಿದ ದಿನಗಳ ಹೆಚ್ಚಿನ ವೇಳೆ ಪಶು ಚಿಕಿತ್ಸೆಯಲ್ಲಿ ಕಳೆದ ಹಿರಿಮೆ ಇದೆ. ಒಂದೇ ಒಂದು ದಿನ ರಜೆ ಹಾಕಿ ಮನೆಯಲ್ಲಿ ಕುಳಿತ ದಿನವಿಲ್ಲ.
ಸ್ಥಳೀಯ ಜನಸಮುದಾಯದೊಂದಿಗಿನ ಬೆಸೆದ ಸ್ನೇಹ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯಯವರೆಗೂ ಪಶು ಚಿಕಿತ್ಸೆಯಲ್ಲಿಯೇ ಕಳೆಯುವಂತಾಗಿದೆ. ಒಂದು ಕೊಟ್ಟಿಗೆಯ ರಚನೆ ಹೇಗಿರಬೇಕು. ರಾಸುಗಳಿಗೆ ನೀಡುವ ಹಿಂಡಿ ,ಮೇವಿನ ಪೋಷಕಾಂಶಗಳ ಆರೈಕೆ ಹೇಗಿರಬೇಕು. ಕೆಲವು ಸಲ ನಾಟಿ ವೈದ್ಯ ಚಿಕಿತ್ಸೆ ಅಂತ ಯಾವೆಲ್ಲ ತಪ್ಪುಗಳನ್ನು ಗೊತ್ತಿಲ್ಲದೇ ನಾವು ಸಾಂಪ್ರದಾಯಿಕವಾದ ಪದ್ಧತಿಯಿಂದ ಮಾಡುತ್ತೇವೆ. ಅವುಗಳಿಂದ ಗುಣವಾಗುವ ಅವಧಿ ದೀರ್ಘ ಆಗಬಹುದು. ಕೆಲವೊಮ್ಮೆ ಅಪೂರ್ಣ ಜ್ಞಾನದಿಂದ ಅಪಾಯಗಳೂ ಒದಗಿಬರಬಹುದು . ಕಾರಣ ಮೂಕ ಪ್ರಾಣಿಗಳಿಗೆ ಮಾತು ಬಾರದು. ಚಲನವಲನದ ಮೇಲೆ ನಿಗಾ ಇಟ್ಟು ಚಿಕಿತ್ಸೆ ಮಾಡುವುದು ಅಗತ್ಯ. ಹೀಗೆ ಸಾಕು ಪ್ರಾಣಿಗಳ ಜೊತೆಗಿನ ತರಬೇತಿ ಮತ್ತು ಪಳಗಿಸುವಿಕೆಯ ಕಲಿಕೆಯ ಕುರಿತು ವೇಳೆ ಸಿಕ್ಕಾಗಲೆಲ್ಲಾ ತಮ್ಮರಿವಿನ ಕಿವಿ ಮಾತು ಹೇಳುತ್ತಾರೆ.
ಜಪ ತಪ ಪೂಜೆ , ಭಕ್ತಿ ಭಜನೆ ಆರಾಧನೆಯಂತಹ ದೇವರ ಮೊರೆಯಿಂದ ದೂರ ಉಳಿಯಲು ಇಚ್ಛಿಸುವ ಕೆ.ಜಿ ಹೆಗಡೆಯವರು ಸಮಾಜದ ಸುಸ್ಥಿರ ಸೇವೆಯಲ್ಲಿ ಸಾರ್ಥಕತೆಯ ಪುಣ್ಯ ಗುರುತಿಸುವವರು.
ವಾದ ಪ್ರತಿವಾದಕ್ಕೆ ನಿಂತರೆ ಬದುಕಿನ ದಾರ್ಶನಿಕತೆಯ ಅಧ್ಯಯನದ ಆಳಕ್ಕಿಳಿದು ಗಂಭೀರವಾಗಿ ಮಾತನಾಡಬಲ್ಲ ವಿಚಾರವಂತರೂ ಹೌದು. ಭೂತ ಭವಿಷ್ಯದ ಮೂಢನಂಬಿಕೆಯ ಸೋಗಿಗೆ ಮಾರುಹೋಗಬಾರದೆನ್ನುವ ಅವರ ಹೃದಯವಂತಿಕೆಗೆ ಬೆಲೆ ಕಟ್ಟಲಾಗದು. ವರ್ತಮಾನದ ಸಂಗತಿಗಳಿಗೆ ಪ್ರಬಲವಾಗಿ ನಿಂತು ಸಾಕ್ಷಿಯಾಗುವುದೇ ಇಂದಿಗೆ ತುರ್ತು ಅಗತ್ಯವಿದೆ ಎನ್ನುವುದು ಅವರ ಅಭಿಮತ.
ಬಡವ ಬಲ್ಲಿದ ಎನ್ನುವ ಭೇದ ಭಾವ ತೋರದೇ ಜನರ ಒಂದೇ ಒಂದು ಮಾತಿಗೆ ಊಟ ತಿಂಡಿ, ನಿದ್ದೆಯ ತ್ಯಾಗ ಮಾಡಿಯಾದರೂ ಸೇವೆಯ ಧ್ಯಾನಕ್ಕೆ ತಕ್ಷಣ ಇಳಿವವರು.
ಅದಕ್ಕಾಗಿ ಇವರ ಸಂಪರ್ಕ ಸಂಖ್ಯೆ ಮಕ್ಕಳಿಂದ ಮುದುಕರವರೆಗೂ ಮನಸ್ಸಿನಲ್ಲಿ ಗಟ್ಟಿಯಾಗಿದೆ. ಕೊಟ್ಟಿಗೆಯ ಮಣ್ಣಿನ ಗೋಡೆಯ ಮೇಲೂ ಮಸಿ ಇಂಗಾಲದಲ್ಲಿ ಬರೆದಿಟ್ಟಂತೆ ಸಂಪರ್ಕ ಸಹಾಯವಾಣಿ ಅಳಿಸದೇ ಹಾಗೆ ಹಸಿಯಾಗಿರುತ್ತದೆ.
ಜನರ ಸ್ನೇಹಕ್ಕಾಗಿ ಆಳೆತ್ತರದ ತುಸು ಗಂಭೀರ ತುಸು ನಗುಮೊಗದ ಜೀವವು ಮಣ ಬಾರದ ಔಷಧಿ ಸರಂಜಾಮು ಹೊತ್ತು ನಡೆಯಲಾರಂಭಿಸಿದರೆ ಸವಾಲು ಗೆಲ್ಲಲು ಹೊರಟ
ಯೋಧನಂತೆ ಕಾಣುತ್ತದೆ.
ಕಾಡುದಾರಿಯ ಹಳ್ಳ ಹೊಳೆ, ಕಾಲು ಸಂಕ ದಾಟಿ,ಗುಡ್ಡ ಇಳಿಜಾರಿನಲ್ಲಿ ಇಳಿದು ಜಾನುವಾರುಗಳ ಆರೈಕೆಗೆ ಮೊದಲಿಗರಾಗುವುದೆಂದರೆ ಎಲ್ಲಿಲ್ಲದ ಪ್ರೀತಿ.
ಕೆ ಜಿ ಹೆಗಡೆಯವರು ಊರಲ್ಲಿ ಇರದ ದಿನ , ಸಂಪರ್ಕಕ್ಕೆ ಸಿಗದಿದ್ದರೆ ಸಮೂಹಕ್ಕೆ ದಿಗಿಲು. ಕಳೆದರೆ ಸಾಕು ಕಷ್ಟದ ರಾತ್ರಿ ಹಗಲು. ಕೃಷಿ ಬದುಕಿನ ಆಧಾರದ ಹೈನುಗಾರಿಕೆಗೆ ಅವರೇ ಹೆಗಲು.
ಕೆ ಜಿ ಹೆಗಡೆಯವರು ತಮ್ಮ ಸರ್ಕಾರಿ ಸೇವೆಯ ಹಿರಿತನದಲ್ಲಿ ಇಲಾಖೆಯ ಅನೇಕರ ಜೊತೆಗೂಡಿ ಪಶು ಚಿಕಿತ್ಸೆಯಲ್ಲಿ ಅನೇಕ ಗಂಭೀರ ಚಿಕಿತ್ಸೆಯನ್ನು ಕೂಡಾ ನಡೆಸಿ ಜಾನುವಾರುಗಳ ಜೀವ ಉಳಿಸಿದ ಉದಾಹರಣೆಗಳಿಗೆ ಲೆಕ್ಕವಿಲ್ಲ. ಇಲ್ಲಿಯ ಜನ ಬಹಳ ಬುದ್ಧಿವಂತಿಕೆಯಿಂದ ಅಳೆದು ತೂಗಿ ನೋಡಿ ತಮ್ಮ ಕಸುಬು ಕೃಷಿ ವ್ಯವಸಾಯ ಕ್ಷೇತ್ರದಲ್ಲಿ ಆಯ್ಕೆಯ ಹೆಜ್ಜೆ ಹಾಕುತ್ತಾರೆ ಹೊರತು ಬೇರೆಯವರ ಒತ್ತಾಯಕ್ಕೆ ಮಣಿಯುವವರಲ್ಲ ಎನ್ನುವ ಕೆ ಜಿ ಹೆಗಡೆಯವರ ವಿಚಾರ ಆಳವಾದದ್ದು . ಇರುವ ಕಡಿಮೆ ಸಮಯದಲ್ಲಿ ಎಷ್ಟೋ ಜನರ ಮನೆಗೆ ಭೇಟಿ ನೀಡಿದಾಗ ದಣಿವಾದರೂ ಬದುಕಿನ ಮಾರ್ಗಸೂಚಿಗಳನ್ನು, ಉಪಯುಕ್ತ ಸಲಹೆಗಳನ್ನು ಅವರವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಚಿಕಿತ್ಸೆ ರೂಪದಲ್ಲಿಯೇ ಪ್ರೀತಿಯಿಂದ ನೀಡುತ್ತಾರೆ. ತಮ್ಮದೇ ಆದ ನಿರಂತರ ಸೇವೆಯಲ್ಲಿ ವ್ಯಾವಹಾರಿಕವಾಗಿ ಯಾವುದೇ ಕಟ್ಟುಪಾಡು ಕಾಣದ ಮಾನವೀಯತೆಯ ಮುಖವಾಗಿ ಕಾಣಿಸುತ್ತಾರೆ.
ಬಾಳಸಂಗಾತಿ ಶ್ಯಾಮಲಾ ರವರು ಅವರ ನಿತ್ಯದ ಸೇವೆಯ ಮಾರ್ಗಸೂಚಿಯ ಆದ್ಯತೆಯನ್ನು ನೆನಪಿಸುವವರು. ಮಗ ಅಕ್ಷಯ ಕೂಡಾ ಪಶು ಸಂಗೋಪನೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಅವರ ಔದ್ಯೋಗಿಕ ಆಸಕ್ತಿ ಕ್ಷೇತ್ರಬೇರೆಯೇ ಆಯ್ದುಕೊಂಡಿದ್ದಾರೆ.
ಬರುವ ಸೆಪ್ಟೆಂಬರ್ ೬ರಂದು ವಜ್ರಳ್ಳಿಯಲ್ಲಿ ಕೆ ಜಿ ಹೆಗಡೆಯವರ ಸೇವಾಜೀವನದ ಸಾಧನೆಗೆ ನಾಗರಿಕ ಗೌರವ ಸನ್ಮಾನ ನೀಡಲು ವಿವಿಧ ಸಂಘಸಂಸ್ಥೆಗಳು ಸಜ್ಜುಗೊಂಡಿದೆ.
ಪ್ರಾಥ: ಸ್ಮರಣೀಯರು ಎನ್ನುವ ಭಾವಕ್ಕೆ ಸಾಕ್ಷಿಯಾಗಿ ಕೆ ಜಿ ಹೆಗಡೆ ನಿಲ್ಲುತ್ತಾರೆ. ತಮ್ಮ ಸೇವೆಯನ್ನು ಜನರ ಒಡನಾಟಕ್ಕೆ ಮೀಸಲಿರಿಸಿಕೊಂಡ ಇವರು ಹೊಗಳಿಕೆ ಸನ್ಮಾನದಿಂದ ಬಹುದೂರದ ಅಂತರ ಕಾಪಾಡುತ್ತಾರೆ. ಸಮೂಹದಲ್ಲಿ ತನ್ನ ಪಾಲ್ಗೊಳ್ಳುವಿಕೆಯ ಪಾತ್ರ ಅಗತ್ಯವಿಲ್ಲದಿದ್ದಲ್ಲಿ ಒಂದು ಕ್ಷಣವೂ ನಿಲ್ಲರಾರರು. ಮೂಕ ಪ್ರಾಣಿಗಳ ಸೇವೆಯಲ್ಲಿ ಬಹಳ ಹೊತ್ತು ಕಳೆಯುವ ಹಂಬಲದ ಹಿಂದೆ ಹಸಿವು,ನಿದ್ದೆ, ವಿಶ್ರಾಂತಿಯ ತ್ಯಾಗವಿದೆ.
ಅವರ ಎಚ್ಚರದ ಪ್ರತಿ ಕ್ಷಣವೂ ಅವರ ಪಾಲಿಗೆ ಜೀವ ಬದುಕಿಸುವ ನೋವು ಮರೆಸುವ ವರವೆಂದು ತಿಳಿದು ಸಮಯ ಪ್ರಜ್ಞೆ ಯಿಂದ ಜಾಗೃತಿಯಾಗುತ್ತಾರೆ. ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಿ ಕೊಟ್ಟಿಗೆಯಿಂದ ಹೊರಬರುವಾಗ ಹಿತ್ತಲ ತರಕಾರಿ ,ತಾವೇ ಬೆಳೆದ ಹಣ್ಣು, ಸೊಪ್ಪುಗಳನ್ನು ಬೊಗಸೆ ತುಂಬಾ ನೀಡಿ ವ್ಯಕ್ತ ಪಡಿಸುವ ಸುತ್ತಲಿನವರ ಅಂತರಾಳದ ಪ್ರೀತಿಗೆ ಒಂದು ಕ್ಷಣ ಮೌನವಾಗುತ್ತದೆ ಅವರ ಗುಣ. ಮರು ಕ್ಷಣ ಹೆಗಲಿಗೆ ಬ್ಯಾಗ್ ಏರಿಸಿ, ಬೈಕ್ ಏರಿದರೆಂದರೆ ಮತ್ತೆ ಬೈಕ್ ನಿಲ್ಲುವುದು ಮತ್ತೊಂದು ಮನೆಯ ಕೊಟ್ಟಿಗೆಯ ಮೆಟ್ಟಿಲು.
ಆರೋಗ್ಯ ಇರುವವರೆಗೂ ಜಾನುವಾರುಗಳ ಕ್ಷೇಮ ನೋಡಿಕೊಳ್ಳುವ ಉಮೇದು ಅವರಲ್ಲಿ ಇಂದಿಗೂ ಪುಟಿದೇಳುತ್ತದೆ. ಒಬ್ಬ ಸರ್ಕಾರಿ ನೌಕರ ಎನಿಸದೇ ಕೃಷಿ ಬದುಕಿನ ಆಪತ್ಭಾಂದವ ಎಂದೆನಿಸುವ ತಜ್ಞತೆ ಅವರಲ್ಲಿ ಇದೆ. ಅದೇ ಕಾರಣಕ್ಕೆ ಅವರ ನಿವೃತ್ತಿ ದಿನಾಂಕ ಯಾರೂ ನೆನಪಿಗೆ ತರಲು ಇಚ್ಛಿಸುವುದಿಲ್ಲ. ಅವರೂ ಹೇಳಿಕೊಳ್ಳುವುದಿಲ್ಲಾ. ಪಶು ಚಿಕಿತ್ಸೆ ಮಾಡುವ ಕಾಯಕಕ್ಕೆ ದೇಹದ ಶಕ್ತಿ ಇರುವವರೆಗೂ ಕಾರ್ಯತತ್ಪರರಾಗಿರುವ ಜೀವನ್ಮುಖಿ.
ಹೊಗಳಿಕೆಯಿಂದ ಹಿಂಜರಿಯುವ ಕೆ ಜಿ ಹೆಗಡೆಯವರಿಗೆ ಪಶುಪಾಲಕರ ಪ್ರೀತಿಯೇ ಬದುಕಿನ ವ್ಯಾಖ್ಯೆಗೆ ಅರ್ಥ ನೀಡಿದೆ.
ವೃತ್ತಿಯ ಕಾಯಕದಲ್ಲಿ ಕೆಟ್ಟ ಯೋಚನೆ ನುಸುಳದಿದ್ದರೆ , ಭಾವನೆಗಳು ಶುದ್ಧವಾಗಿದ್ದರೆ ಮನುಷ್ಯನಿಗೆ ಮನುಷ್ಯತ್ವ ಸಂಪಾದಿಸಲು ಸುಲಭ ಸಾಧ್ಯ ಹೊರತು ಜೀವನ ಎನ್ನುವುದು ಯಾರ ಪವಾಡವೂ ಅಲ್ಲಾ. ಎಂದು ಜೀವನವನ್ನು ತರ್ಕಿಸುತ್ತಾರೆ.ನಮ್ಮ ಸ್ವಂತ ಪರಿಶ್ರಮದಿಂದ ನಾವು ಮೇಲೇರಬೇಕಷ್ಟೇ. ಹೊಸ ತಲೆಮಾರು ಕೃಷಿಯಿಂದ ವಿಮುಖ ಆಗಲು ಅವರ ಉದ್ಯೋಗ ಕಾಳಜಿಯ ನಿರಾಸಕ್ತಿ, ಕೃಷಿ ಕೌಶಲ್ಯದ ಕೊರತೆ ಕಾರಣ. ಸಾಂಪ್ರದಾಯಿಕತೆಯಿಂದ ಬಂದ ಮೂರು ತಲೆಮಾರಿನ ಈ ಸಂದರ್ಭದಲ್ಲಿ ಹೈನುಗಾರಿಕೆಯ ಉಪಕಸುಬು ನಿಧಾನವಾಗಿ ಕರಗುತ್ತಿದೆ. ತಂತ್ರಜ್ಞಾನ ಸಾಕಷ್ಟು ಪ್ರವೇಶಿಸಿದೆ. ಆದರೆ ಅವುಗಳನ್ನು ಬಳಸುವ ಶ್ರಮದ ಜೀವನ ಹೊಸ ತಲೆಮಾರಿನ ಯಾರಿಗೂ ಬೇಡವಾಗಿದೆ. ಹಿಂದೆ ಹಸಿವು ಇತ್ತು, ದುಡಿಮೆಯ ತೃಪ್ತಿ ಇತ್ತು. ಇವರ ಈ ನಿಷ್ಕಲ್ಮಷ ಸೇವೆಯಿಂದ ಸಮಾಜಕ್ಕೆ ಬಹಳಷ್ಟು ಉಪಯೋಗವಾಗಿದೆ. ಜನಸೇವೆಯ ಈ ವೈದ್ಯರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ” ಹಳ್ಳಿನ್ಯೂಸ್ ” ಆಶಿಸುತ್ತದೆ.
ಸಂಪೂರ್ಣ ವರದಿ ,ಚಿತ್ರ : ದತ್ತಾತ್ರೇಯ ಕಣ್ಣಿಪಾಲ್ ( ಸಾಹಿತಿಗಳು , ಖ್ಯಾತ ಪತ್ರಕರ್ತರು)













Leave a Reply