ವಾರದ ಗಡುವು ನೀಡಿದ ಪ್ರಸಾದ ಹೆಗಡೆ: ಯಲ್ಲಾಪುರದಲ್ಲಿ ರಸ್ತೆ ಹೊಂಡಗಳ ವಿರುದ್ಧ ಬಿಜೆಪಿ ಹೋರಾಟದ ಮುನ್ಸೂಚನೆ

ಹಂಚಿಕೊಳ್ಳಿ

ಯಲ್ಲಾಪುರ: ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡದೇ ಹೊಂಡಗಳ ಭಾಗ್ಯ ಕರುಣಿಸಿದೆ. ಇಂತಹ ಭಾಗ್ಯಗಳು ನಮ್ಮ ತಾಲ್ಲೂಕಿಗೆ ,ನಮ್ಮ ರಾಜ್ಯಕ್ಕೆ ಬೇಕಾಗಿತ್ತೇ ? ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಟೀಕಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಡಬ್ಲುಡಿ ರಸ್ತೆಗಳು ತೀವೃವಾಗಿ ಹದಗೆಟ್ಟಿದೆ. ರಸ್ತೆಗಳಲ್ಲಿ ಹೊಂಡವಿದೆಯೋ? ಅಥವಾ ಹೊಂಡಗಳಲ್ಲಿ ರಸ್ತೆ ಇದೆಯೋ ತಿಳಿಯುತ್ತಿಲ್ಲ. ಕೇವಲ ಗ್ಯಾರಂಟಿ ಗ್ಯಾರಂಟಿ ಎಂದು ಸರ್ಕಾರ ಹೆಳುತ್ತಿದೆಯೇ ಹೊರತು ಜನರ ಮೂಲಭೂತ ಸೌಕರ್ಯದ ಬಗ್ಗೆ ಗಮನಿಸುತ್ತಿಲ್ಲ. ತಾಲೂಕಿನ ಹಲವಾರು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇದು ರಾಜ್ಯ ಸರ್ಕಾರದ ದೀವಾಳಿತನವನ್ನು ತೋರುವಂತಿದೆ. ಇದನ್ನು ತುರ್ತು ನಿರ್ವಹಣೆ ಮಾಡದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ , ಸಂಭಂಧಿಸಿದ ಅಧಿಕಾರಿಗಳು ಬರುವ ತನಕ ಸ್ಥಳದಲ್ಲೇ ಮೊಕ್ಕಂ ಹೂಡಿ‌ ಆಡಳಿತ ವ್ಯವಸ್ಥೆಗೆ ಛೀಮಾರಿ‌ ಹಾಕುತ್ತೇವೆ ಎಂದು ಹೇಳಿದರು.

ಕಂಪ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ ಭಟ್ಟ ಮಾಳಕೊಪ್ಪ ಹಾಗೂ ಇಡಗುಂದಿ ಮಹಾಶಕ್ತಿ ಕೇಂದ್ರದ ಜಿ.ಆರ್ ಭಾಗ್ವತ್ ಮಾತನಾಡಿ, ಯಲ್ಲಾಪುರ - ಶಿರಸಿ ರಸ್ತೆ, ಚಿನ್ನಾಪುರ- ಬಾರೆ ರಸ್ತೆ,ನಂದೊಳ್ಳಿ- ಮಾಗೋಡ ರಸ್ತೆ, ಇಡೀ ತಾಲ್ಲೂಕಿನ pwd ಇಲಾಖೆ ರಸ್ತೆ ಗಳು ಸಂಪೂರ್ಣ ಹದಗೆಟ್ಟದ್ದು, ಓಡಾಟ ದುಸ್ತರವಾಗಿದೆ. ಲೋಕೋಪಯೋಗಿ ಇಲಾಖೆ ನಿರ್ವಹಣೆ ನಿರ್ಲಕ್ಷ್ಯ ತಾಳಿದೆ. ವಾರದೊಳಗೆ ನಿರ್ವಹಣೆ ಆಗದೇ ಇದ್ದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಮಾತನಾಡಿ, ಪಿಡ್ಲುಡಿ ಇಲಾಖೆಯ ರಸ್ತೆ ತಾಲೂಕಿನಲ್ಲಿ ಹದಗೆಟ್ಟಿದೆ. ಕೆಲವೊಂದು ಕಡೆ ಕಾಟಾಚಾರದ ಪ್ಯಾಚ್ ವರ್ಕ ಮಾಡಿದ್ದು , ಅಲ್ಲೆ ದೊಡ್ಡ ಹೊಂಡವಾಗಿದೆ. ಇದಕ್ಕೆಲ್ಲಾ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳೆ ಸಂಪೂರ್ಣ ಹೊಣೆಯಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ನ್ಯಾಯವಾದಿ ಗಣೇಶ ಪಾಟಣಕರ್ ಮಾತನಾಡಿ, ಪಟ್ಟಣದಲ್ಲಿ ಹಂದಿಗಳು, ಬೀಡಾಡಿ ದನಗಳು, ನಾಯಿಗಳ ಹಾವಳಿ ಮಿತಿ ಮೀರಿದೆ. ವಾಹನ ಸವಾರರಿಗೆ ತೀವೃ ತೊಂದರೆ ಆಗುತ್ತಿದೆ. ಅಪಘಾತವಾದರೆ ಯಾರು ಹೊಣೆ. ಪ.ಪಂ ಎಲ್ಲಾ ಬೀದಿ ನಾಯಿಗಳಿಗೂ ರೇಬಿಸ್ ಇಂಜಕ್ಷ್ಯನ್ ಹಾಕಿಸಬೇಕು. ಕಂಡ ಕಂಡಲ್ಲಿ ಮೀನು ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದೆ ಪ.ಪಂ.ನ ಆಡಳಿತಾಧಿಕಾರಿಗಳೂ ಆದ ತಹಶೀಲ್ದಾರ ಅವರು ಪ.ಪಂ. ಸಂಬಂಧಪಟ್ಟ ಅಧಿಕಾರಿಗಳಿಗೆ ಮೀನು ಮಾರುಕಟ್ಟೆಯಲ್ಲಿ ಮಾತ್ರ ಮೀನು ಮಾರಬೇಕು. ಬೇರೆಡೆ ಎಲ್ಲೂ ಮಾರುವಂತಿಲ್ಲ. ಮಾರಿದವರ ಮೇಲೆ ಸೂಕ್ತ ಕಾನೂನು ಕ್ರಮ ಮಾಡುವಂತೆ ನಿರ್ದೇಶನ ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಇದನ್ನು ನೋಡಿದರೆ ಆ ಮೀನು ಮಾರಾಟಗಾರರ ಬೆಂಬಲಕ್ಕೆ ಪ್ರಭಾವಿ ಜನರಿದ್ದಾರೋ, ಕಮಿಷನ್ ವ್ಯವಹಾರ ಇದೆಯೇ ಎಂದು ಪ್ರಶ್ನಿಸಿದ ಅವರು, ತಕ್ಷಣದಿಂದ ರಸ್ತೆಯ ಮೇಲೆ ಮೀನು ಮಾರಾಟ ನಿಲ್ಲಿಸುವಂತೆ ಪ.ಪಂ.ಗೆ ಆಗ್ರಹಿಸಿದರು.

ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಅಲಂಕಾರಿಕ ದೀಪ ಆರು ವರ್ಷದಿಂದ ಪೂರ್ಣ ಕಾಮಗಾರಿ ಆಗಿಲ್ಲ. ಕೆಲವೊಂದು ಕಡೆ ಜನರ ಜೀವ ತೆಗೆಯುವಂತಿದೆ. ಇದನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಇಲಾಖೆಯ ಎದುರು ಧರಣಿ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗೇಂದ್ರ ಪತ್ರೇಕರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *