ಗುಂಡಿ’ ಪ್ರದರ್ಶನ ಮುಕ್ತಾಯ: ಇಲಾಖೆ ಮಾಡದ ಕೆಲಸ ಮುಗಿಸಿದ ಅಜ್ಜೀಬಳ ಯುವ ಪಡೆ! ನೋಡಿ ಈ ವರದಿ

ಹಂಚಿಕೊಳ್ಳಿ

ಶಿರಸಿ: ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಅಜ್ಜೀಬಳದಿಂದ ಜಾಗನಳ್ಳಿ ಕ್ರಾಸ್‌ವರೆಗೆ ನಿರ್ಮಾಣಗೊಂಡಿದ್ದ ದೊಡ್ಡ ಗಾತ್ರದ ಹೊಂಡ-ಗುಂಡಿಗಳನ್ನು ಅಜ್ಜೀಬಳ ಯುವಕ ಸಂಘದ ಸದಸ್ಯರು ಸ್ವಯಂಪ್ರೇರಿತರಾಗಿ ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ತಾಲೂಕಿನ ಅಜ್ಜೀಬಳದಿಂದ ಶಿರಸಿ ತಾಲೂಕಿನ ಗಡಿ ಭಾಗವಾದ ಜಾಗನಳ್ಳಿ ಕ್ರಾಸ್‌ವರೆಗಿನ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಹಲವು ಕಡೆಗಳಲ್ಲಿ ದೊಡ್ಡ ಗಾತ್ರದ ಹೊಂಡ-ಗುಂಡಿಗಳು ನಿರ್ಮಾಣಗೊಂಡಿದ್ದವು. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ರಾತ್ರಿ ವೇಳೆ ಹೊಂಡಗಳು ಕಾಣಿಸದೆ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದೊಂದು ತಿಂಗಳ ಅವಧಿಯಲ್ಲಿ ಹೊಂಡಗಳನ್ನು ತಪ್ಪಿಸುವ ಭರಾಟೆಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅವಧಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಹೆದ್ದಾರಿಯ ದುಸ್ಥಿತಿಯ ಕುರಿತು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರೂ ಸಮರ್ಪಕ ದುರಸ್ತಿ ಕಾರ್ಯ ನಡೆಯದ ಹಿನ್ನೆಲೆಯಲ್ಲಿ ಅಜ್ಜೀಬಳ ಯುವಕ ಸಂಘದ ಸದಸ್ಯರು ಸ್ವತಃ ಮುಂದಾಗಿ ಹೊಂಡ-ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *