
ಯಲ್ಲಾಪುರ:
ಗ್ರಾಮೀಣ ಭಾಗದ ನಿಸ್ವಾರ್ಥ ಸೇವೆಗೆ ರಾಜ್ಯ ಮಟ್ಟದ ಅತ್ಯುನ್ನತ ಮನ್ನಣೆ ದೊರೆತಿದೆ. ಕಳಚೆ ಮೂಲದ, ಪ್ರಸ್ತುತ ಕಲ್ಲೇಶ್ವರ ನಿವಾಸಿಗಳಾದ ಪ್ರಕಾಶ್ ಹೆಗಡೆ ಕೇರಿ ಹಾಗೂ ದೀಪಾ ಹೆಗಡೆ ದಂಪತಿಗಳು ರಾಜಭವನದ ಗಾಜಿನ ಮನೆಯಲ್ಲಿ ನಡೆದ ರಾಜ್ಯಪಾಲರ ವಿಶೇಷ ಔತಣಕೂಟದಲ್ಲಿ ಭಾಗವಹಿಸಿ, ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಗೌರವಕ್ಕೆ ಪಾತ್ರರಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ಪ್ರತಿಷ್ಠಿತ ಚಹಾ ಕೂಟದಲ್ಲಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ದಂಪತಿಗಳಿಗೆ ವಿಶೇಷ ಆತಿಥ್ಯ ನೀಡಿ ಪುರಸ್ಕರಿಸಿದರು.

ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ ಆರೋಗ್ಯ ಸೇವೆಗೆ
ದೀಪಾ ಹೆಗಡೆ ಅವರು ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರ ಸೇವೆ ಕೇವಲ ಕರ್ತವ್ಯಕ್ಕೆ ಸೀಮಿತವಾಗಿಲ್ಲ. ಕೋವಿಡ್ ಸಾಂಕ್ರಾಮಿಕದ ಭೀಕರ ದಿನಗಳಲ್ಲಿ ಮತ್ತು ಗಂಗಾವಳಿ ನದಿ ಪಾತ್ರದಲ್ಲಿ ನೆರೆಯ ಕಠಿಣ ಪರಿಸ್ಥಿತಿಯಲ್ಲಿ ಅವರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಹಳವಳ್ಳಿ- ಕಲ್ಲೇಶ್ವರ ಡೋಂಗ್ರಿ ಪಂಚಾಯತನಲ್ಲಿ ಅತ್ಯಂತ ಹಿಂದುಳಿದ ಗ್ರಾಮೀಣ ಭಾಗಗಳಿಗೂ ಭೇಟಿ ನೀಡಿ, ಅತ್ಯಂತ ಶ್ರದ್ಧೆಯಿಂದ ಆರೋಗ್ಯ ಸೇವೆ ಒದಗಿಸಿದ್ದಾರೆ. ಇವರ ಈ ಅಪ್ರತಿಮ ಜನಸೇವೆಯನ್ನು ಸೂಕ್ಷ್ಮವಾಗಿ ಗಮನಿಸಿದ ಸರ್ಕಾರ, ಇವರನ್ನು ಈ ಬಾರಿಯ ಸ್ವಾತಂತ್ರ್ಯ ದಿನದ ವಿಶೇಷ ಗೌರವಕ್ಕೆ ಆಯ್ಕೆ ಮಾಡಿದೆ.

ಮುಖ್ಯಮಂತ್ರಿಗಳ ಗಮನ ಸೆಳೆದ ಅಡಿಕೆ ಬೆಳೆಗಾರರ ಸಮಸ್ಯೆ
ಇದೇ ವೇದಿಕೆಯಲ್ಲಿ ಪ್ರಕಾಶ್ ಹೆಗಡೆ ಅವರು ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಡನೆ ಕೃಷಿಕರ ಧ್ವನಿಯಾಗಿ ಮಾತನಾಡಿದರು. ಅಡಿಕೆ ಬೆಳೆಗಾರರ ದೀರ್ಘಕಾಲದ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಗುಟ್ಕಾ ನಿಷೇಧ ವಾಪಸ್ ಪಡೆದ ಸರ್ಕಾರದ ನಿರ್ಧಾರಕ್ಕೆ ಕೃಷಿಕರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು. “ನಿಮ್ಮ ನೇತೃತ್ವದ ಸರ್ಕಾರ ಇಡೀ ರಾಜ್ಯದ ಜನರಲ್ಲಿ ಮತ್ತು ರೈತರಲ್ಲಿ ಹೊಸ ಹುಮ್ಮಸ್ಸು ತಂದಿದೆ” ಎಂದು ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಗ್ರಾಮೀಣ ಭಾಗದ ನೈಜ ಸೇವಕರನ್ನು ಗುರುತಿಸಿ ರಾಜಭವನದಲ್ಲಿ ಗೌರವಿಸಿರುವುದು ಕಳಚೆ ಹಾಗೂ ಕಲ್ಲೇಶ್ವರ ಗ್ರಾಮದ ಜನರಲ್ಲಿ ಹರ್ಷ ತಂದಿದೆ. ದೀಪಾ ಹೆಗಡೆ ಅವರ ಸೇವಾ ಮನೋಭಾವ ಮತ್ತು ಪ್ರಕಾಶ್ ಹೆಗಡೆ ಅವರ ಸಾಮಾಜಿಕ ಕಳಕಳಿಗೆ ಇಡೀ ನಾಡು ಇಂದು ಹೆಮ್ಮೆ ಪಡುತ್ತಿದೆ.

ಇವರು ಸಲ್ಲಿಸಿದ ಪ್ರಾಮಾಣಿಕ ಸೇವೆಗೆ ದೊರೆತ ಗೌರವ ಇದು. ಈ ದಂಪತಿಗಳೂ ಮೂಲ ಕಳಚೆ ಗ್ರಾಮದವರು ಎಂಬ ಹೆಮ್ಮೆ ನಮಗಿದೆ.
ಪ್ರಮೋದ ಹೆಬ್ಬಾರ್ ( ಸಾಮಾಜಿಕ ಕಾರ್ಯಕರ್ತರು)


















Leave a Reply