5-8-2026 ಬುಧವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.
ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಮತ್ತು ಆಗುಂಬೆಯಲ್ಲಿ ನಿನ್ನೆ ಭಾರಿ ಮಳೆಯಾಗಿದೆ. ಕಾಸರಗೋಡು ದ.ಕ ಉ.ಕ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ನಿನ್ನೆ ಸಾಧಾರಣ ಮಳೆಯಾಗಿತ್ತು. ದ.ಒಳನಾಡಿನ ಬೆಂಗಳೂರು ತುಮಕೂರು ದಾವಣಗೆರೆ ಜಿಲ್ಲೆಗಳಲ್ಲಿ ನಿನ್ನೆ ಮಳೆ ಆರಂಭವಾಗಿದೆ. ಹೆಬ್ರಿಯಲ್ಲಿ 180mm ಗರಿಷ್ಠ ಮಳೆಯಾಗಿತ್ತು.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದೆ. ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಆಗಾಗ ಮಳೆಯಾಗಲಿದ್ದು ಇವತ್ತೂ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂದಿನ 4 ದಿನ ಮೋಡ – ಮಳೆ ಮುಂದುವರೆಯಲಿದ್ದು ಆಗಸ್ಟ್ 9ರಿಂದ ಮಳೆ ಪ್ರಮಾಣ ಕಡಿಮೆ ಆಗಲಿದ್ದು ನಂತರ 4 ದಿನ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆ ಮುಂದುವರೆಯಬಹುದು.
ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ಹೊಸನಗರ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ, ಮತ್ತು ಶೃಂಗೇರಿ ಮೂಡಿಗೆರೆ ಸಕಲೇಶಪುರ ಮಡಿಕೇರಿ ವಿರಾಜಪೇಟೆ ತಾಲ್ಲೂಕುಗಳಲ್ಲಿ ಆಗಾಗ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಉಳಿದ ತಾಲ್ಲೂಕುಗಳಲ್ಲಿ ಮೋಡದ ವಾತಾವರಣ ಇರಲಿದ್ದು ಸಾಮಾನ್ಯ ಮಳೆಯಾಗಬಹುದು. ಮುಂದಿನ 4 ದಿನ ಮಳೆ ಮುಂದುವರಿಯಲಿದ್ದು ಆ 9 ರಿಂದ ಮಳೆ ಕಡಿಮೆ ಆಗಬಹುದು.
ದಕ್ಷಿಣ ಒಳನಾಡಿನ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ದಾವಣಗೆರೆ ಜಿಲ್ಲೆಗಳಲ್ಲಿ ಸಂಜೆ – ರಾತ್ರಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ಚಾಮರಾಜನಗರ ಮೈಸೂರು ಚಿತ್ರದುರ್ಗ ವಿಜಯನಗರ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆಯಾಗಬಹುದು.
ಉತ್ತರ ಒಳನಾಡಿನಎಲ್ಲಾ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಮಳೆ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಬಾಗಲಕೋಟೆ ಬಿಜಾಪುರ ಕಲ್ಬುರ್ಗಿ ಬೀದರ್ ಯಾದಗಿರಿ ರಾಯಚೂರು ಬಳ್ಳಾರಿ ಕೊಪ್ಪಳ ಗದಗ ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ – ರಾತ್ರಿ ಮಳೆಯಾಗಬಹುದು.
ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ವಾತಾವರಣದ ವಾಯು ಪರಿಚಲನೆ (Mid-tropospheric circulation) (ಎಂದರೆ ಭೂಮಿಯ ವಾತಾವರಣದ ಮಧ್ಯಮ ಪದರದಲ್ಲಿ (ಸುಮಾರು 3 ರಿಂದ 6 ಕಿಲೋಮೀಟರ್ ಎತ್ತರದಲ್ಲಿ) ಗಾಳಿಯು ಚಲಿಸುವ ಅಥವಾ ತಿರುಗುವ ದೊಡ್ಡ ಮಟ್ಟದ ಹವಾಮಾನ ಪ್ರಕ್ರಿಯೆ. ಇದು ಮಳೆ ಮತ್ತು ಮೋಡಗಳ ರಚನೆಗೆ ಕಾರಣವಾಗುತ್ತದೆ.) ಕಾರಣದಿಂದ ತಮಿಳುನಾಡಿನ ಅಲ್ಲಲ್ಲಿ ಗುಡುಗು ಮಳೆಯಾಗುತ್ತಿದ್ದು ಇದರಿಂದಾಗಿ ದ. ಒಳನಾಡಿನಲ್ಲಿಯೂ ಮಳೆಯಾಗಬಹುದು. ಕೇರಳ ಕರ್ನಾಟಕ ಮತ್ತು ಕೊಂಕಣ ತೀರದಲ್ಲಿಯೂ ಮಳೆ ಮುಂದುವರೆಯಬಹುದು.







Leave a Reply