ಕಾರವಾರ: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ವಿವಿಧ ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾಕೂಟಗಳ ಸಂದರ್ಭದಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರಧ್ವಜಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ. ರಾಷ್ಟ್ರಧ್ವಜಕ್ಕೆ ಅಪಚಾರ ಎಸಗುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ರಾಷ್ಟ್ರಧ್ವಜದ ಗೌರವ ರಕ್ಷಣೆ: ಕಾನೂನು ಏನು ಹೇಳುತ್ತದೆ?
ರಾಷ್ಟ್ರೀಯ ಗೌರವ ಕಾಯ್ದೆ-1971 ಹಾಗೂ ಭಾರತದ ಧ್ವಜ ಸಂಹಿತೆಯ ಅನ್ವಯ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜಗಳನ್ನು ಬಳಸಬಾರದು. ಅದರ ಬದಲಾಗಿ ಕಾಗದ ಅಥವಾ ಬಟ್ಟೆಯಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನಷ್ಟೇ ಬಳಸುವಂತೆ ಸೂಚಿಸಲಾಗಿದೆ.
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ-1971 ರ ಸೆಕ್ಷನ್ 2 ರ ಅಡಿಯಲ್ಲಿ ರಾಷ್ಟ್ರಧ್ವಜವನ್ನು ಸಾರ್ವಜನಿಕವಾಗಿ ಸುಡುವುದು, ಹರಿದು ಹಾಕುವುದು, ಕಾಲಿನಿಂದ ತುಳಿಯುವುದು ಅಥವಾ ವಿಕೃತಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯ ಎಸಗುವ ವ್ಯಕ್ತಿಗೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಇಲ್ಲವೇ ಇವೆರಡನ್ನೂ ಒಟ್ಟಿಗೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇದೇ ತಪ್ಪನ್ನು ಎರಡನೇ ಬಾರಿ ಅಥವಾ ಪದೇ ಪದೇ ಮಾಡಿದರೆ ಕನಿಷ್ಠ 1 ವರ್ಷದ ಕಡ್ಡಾಯ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಪೇಪರ್ ಅಥವಾ ಮರದ ಕಡ್ಡಿಯ ಧ್ವಜಕ್ಕೆ ಮಾತ್ರ ಅವಕಾಶ
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಕಡ್ಡಿಯುಳ್ಳ ಪ್ಲಾಸ್ಟಿಕ್ ಧ್ವಜಗಳ ಬಳಕೆಯನ್ನು ಸಾರ್ವಜನಿಕರು ಸಂಪೂರ್ಣವಾಗಿ ತಪ್ಪಿಸಬೇಕು. ಮರದ ಕಡ್ಡಿ ಅಥವಾ ಪೇಪರ್ ಕಡ್ಡಿಯೊಂದಿಗೆ ತಯಾರಿಸಿದ ಕಾಗದ ಮತ್ತು ಬಟ್ಟೆಯ ಧ್ವಜಗಳನ್ನು ಮಾತ್ರ ಬಳಸಬೇಕು. ಕಾರ್ಯಕ್ರಮ ಮುಗಿದ ನಂತರ ಧ್ವಜಗಳನ್ನು ಎಲ್ಲೆಂದರಲ್ಲಿ ರಸ್ತೆ, ಚರಂಡಿಗಳಿಗೆ ಎಸೆದು ರಾಷ್ಟ್ರಧ್ವಜಕ್ಕೆ ಅಪಚಾರ ಮಾಡಬಾರದು. ಸಾರ್ವಜನಿಕರು ಅವುಗಳನ್ನು ಗೌರವಯುತವಾಗಿ ಸಂರಕ್ಷಿಸಬೇಕು ಅಥವಾ ಧ್ವಜ ಸಂಹಿತೆಯ ಪ್ರಕಾರ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಕಬಳಕೆ ಪ್ಲಾಸ್ಟಿಕ್ ಮುಕ್ತವಾಗಲಿ ದೇಶ
ಇದೇ ವೇಳೆ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ನಿಷೇಧಿಸಿರುವ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ, ಸ್ಟ್ರಾ, ಕ್ಲಿಂಗ್ ಫಿಲ್ಮ್, ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್ ಹಾಗೂ ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಿಸಿದ ವಸ್ತುಗಳನ್ನು ಬಳಸುವುದನ್ನು ಸಾರ್ವಜನಿಕರು ಸಂಪೂರ್ಣವಾಗಿ ತಪ್ಪಿಸಬೇಕು.
ರಾಷ್ಟ್ರದ ಗೌರವ ಹಾಗೂ ಪರಿಸರದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ವ್ಯಾಪಾರಿಗಳು ಪ್ಲಾಸ್ಟಿಕ್ ಧ್ವಜಗಳನ್ನು ಮಾರಾಟ ಮಾಡಬಾರದು ಮತ್ತು ನಾಗರಿಕರು ಅವುಗಳನ್ನು ಖರೀದಿಸಬಾರದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ. ನಿಯಮ ಮೀರಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತದ ರಾಷ್ಟ್ರಧ್ವಜವು ಕೇವಲ ಒಂದು ಬಟ್ಟೆಯಲ್ಲ, ಅದು ದೇಶದ ಸಾರ್ವಭೌಮತ್ವ, ಅಖಂಡತೆ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ವೀರ ಯೋಧರ ಬಲಿದಾನದ ಪವಿತ್ರ ಸಂಕೇತವಾಗಿದೆ ಎಂದು ಅಧಿಕಾರಿಗಳು ನೆನಪಿಸಿದ್ದಾರೆ. ಇದು ದೇಶದ ವೈವಿಧ್ಯಮಯ ಸಂಸ್ಕೃತಿಗಳನ್ನು ಮೀರಿ, ದೇಶದ ಎಲ್ಲಾ ನಾಗರಿಕರನ್ನು ಒಂದೇ ದೇಶಪ್ರೇಮದ ಕಲ್ಪನೆಯಡಿ ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ.
ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ತ್ಯಾಗವನ್ನು, ಬಿಳಿ ಬಣ್ಣವು ಶಾಂತಿ ಮತ್ತು ಸತ್ಯವನ್ನು, ಹಸಿರು ಬಣ್ಣವು ದೇಶದ ಸಮೃದ್ಧಿಯನ್ನು ಸಾರಿದರೆ, ಮಧ್ಯದ ಅಶೋಕ ಚಕ್ರವು ನಿರಂತರ ಪ್ರಗತಿಯ ಸಂದೇಶವನ್ನು ನೀಡುತ್ತದೆ. ಇಂತಹ ಮಹೋನ್ನತ ಇತಿಹಾಸವಿರುವ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಮತ್ತು ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ಕಾನೂನು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಪರಮ ಕರ್ತವ್ಯ ಮತ್ತು ಹೆಮ್ಮೆಯಾಗಿದೆ






Leave a Reply