1-8-2026 ಶನಿವಾರದ ಹವಾಮಾನ ಮುನ್ಸೂಚನೆ

ಹಂಚಿಕೊಳ್ಳಿ

1-8-2026 ಶನಿವಾರದ ಹವಾಮಾನ ಮುನ್ಸೂಚನೆ
ರಘುರಾಮ ಕಂಪದಕೋಡಿ.

ಕರಾವಳಿಯ ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. . ಸುಳ್ಯ ಕಡಬ ಬೆಳ್ತಂಗಡಿ ಕಾರ್ಕಳ ಘಟ್ಟಪ್ರದೇಶಗಳಲ್ಲಿ ನಿನ್ನೆ ಭಾರೀ ಮಳೆಯಾಗಿತ್ತು. ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು ಶೃಂಗೇರಿ ಕೊಪ್ಪ ತೀರ್ಥಹಳ್ಳಿ ಹೊಸನಗರ ಸಕಲೇಶಪುರ ತಾಲ್ಲೂಕುಗಳಲ್ಲಿ ಅತೀಹೆಚ್ಚು ಮಳೆಯಾಗಿತ್ತು.

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ – ಉತ್ತಮ ಮಳೆಯ ವಾತಾವರಣ ಮುಂದುವರೆಯಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಆಗಾಗ ಸಾಧಾರಣ ಮಳೆಯಾಗಲಿದ್ದು ದ.ಕ ಉಡುಪಿ ಉ.ಕ ಜಿಲ್ಲೆಗಳ ಗ್ರಾಮಾಂತರ ಮತ್ತು ಘಟ್ಟಪ್ರದೇಶಗಳಲ್ಲಿ ಅಧಿಕ ಮಳೆಯಾಗಬಹುದು. ವಾಯುಭಾರಕುಸಿತ ದುರ್ಬಲ ಆಗಲಿದ್ದು ನಾಳೆಯೂ ಮೋಡ – ಸಾಧಾರಣ ಮಳೆಯ ವಾತಾವರಣ ಇರಬಹುದು. ಸೋಮವಾರದಿಂದ ಮಳೆ ಪ್ರಮಾಣ ಕಡಿಮೆ ಆದರೂ ಇಡೀ ದಿನ ಬಿಸಿಲು ಬರಲಿಕ್ಕಿಲ್ಲ. ಆಗಸ್ಟ್ 12 ತನಕ ಸಾಮಾನ್ಯ ಮಳೆ ಮುಂದುವರೆಯಲಿದೆ.

ಮಲೆನಾಡಿನ ಶಿವಮೊಗ್ಗ ಚಿಕ್ಕಮಗಳೂರು ಕೊಡಗು ಜಿಲ್ಲೆಗಳಲ್ಲಿ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರ ಮಳೆ ಮುಂದುವರೆಯಲಿದ್ದು ಆಗಸ್ಟ್ 3-5 ಮಳೆ ಪ್ರಮಾಣ ಕಡಿಮೆ ಇರಬಹುದು. ನಂತರ ಮತ್ತೆ ಒಂದು ವಾರ ಸಾಧಾರಣ ಮಳೆ ಮುಂದುವರೆಯಬಹುದು.

ದಕ್ಷಿಣ ಒಳನಾಡಿನ ಮೈಸೂರು ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ. ರಾಮನಗರ ಮಂಡ್ಯ ಬೆಂಗಳೂರು – ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಜೆಯ ನಂತರ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆಯಾಗಬಹುದು. ಉಳಿದ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಮುಂದುವರೆಯಲಿದೆ.

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ ಬಿಜಾಪುರ ಬಾಗಲಕೋಟೆ ಧಾರವಾಡ ಗದಗ ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು.ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ತುಂತುರು ಮಳೆಯಾಗಬಹುದು.

ಮಹಾರಾಷ್ಟ್ರ ಗುಜರಾತ್ ನಲ್ಲಿರುವ ವಾಯುಭಾರಕುಸಿತ ದುರ್ಬಲ ಆಗುತ್ತಿದ್ದು ಲೋ ಪ್ರೆಷರ್ ಹಂತ ತಲುಪಿದೆ. ಇದರಿಂದಾಗಿ ಪಶ್ಚಿಮದಿಂದ ಪೂರ್ವಕ್ಕೆ ಮಧ್ಯಮ ಸ್ಥರದ ಗಾಳಿ ಬೀಸುತ್ತಿದ್ದು ಕೇರಳ ಕರ್ನಾಟಕ ಮಹಾರಾಷ್ಟ್ರ ಕರಾವಳಿ ಜಿಲ್ಲೆಗಳು – ಘಟ್ಟಪ್ರದೇಶಗಳಲ್ಲಿ ಅರಬ್ಬೀಸಮುದ್ರದ ಮೋಡದಿಂದ ಇವತ್ತೂ ಉತ್ತಮ ಮಳೆ ಮುಂದುವರೆಯಲಿದೆ. ಮುಂದಿನ ವಾರಾಂತ್ಯಕ್ಕೆ ಮೇಲ್ಮೈ ಸುಳಿಗಾಳಿ ಕಾರಣದಿಂದ ದಕ್ಷಿಣದಿಂದ ಸಾಮಾನ್ಯ ಮುಂಗಾರು ಮಳೆ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *