ಗಾಳಿ ಬಂದ್ರೆ ವಿದ್ಯುತ್ ತಂತಿಗಳ ರೋಮ್ಯಾಂಟಿಕ್ ಡಾನ್ಸ್! ಹೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಬೀಳದ ಲವ್ ಸ್ಟೋರಿ! ನೋಡಿ ಈ ವರದಿ .‌‌‌‌…

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಬೀಗಾರ-ತಾರಗಾರ ಗ್ರಾಮದಲ್ಲಿ ಹೆಸ್ಕಾಂ (HESCOM) ಇಲಾಖೆಯು ಸಾರ್ವಜನಿಕರಿಗೆ ದಿನದ 24 ಗಂಟೆಯೂ ಉಚಿತವಾಗಿ ‘ಜೀವಭಯ’ದ ಸೇವೆಯನ್ನು ನೀಡುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.

ವಜ್ರಳ್ಳಿ ಪಂಚಾಯತ ವ್ಯಾಪ್ತಿಯ ತಾರಾಗಾರ ಹಾಗೂ ಬೀಗಾರ ಗ್ರಾಮದ  ಕೆಲವು ಕಡೆಗಳಲ್ಲಿ ವಿದ್ಯುತ್ ಲೈನ್ ನೆಲಕ್ಕೆ ಮುತ್ತಿಡುವಷ್ಟರ ಮಟ್ಟಿಗೆ ಕೆಳಗೆ ಬಂದಿದ್ದು, ಸಾರ್ವಜನಿಕರು ನಿತ್ಯ ಸಾಹಸ ಸಿಂಹಗಳಂತೆ ತೋಟ, ರಸ್ತೆಗಳಲ್ಲಿ ಓಡಾಡುವಂತಾಗಿದೆ. ತಾರಗಾರ ಗ್ರಾಮದ ಉಪ್ಪರಿಗೆ ಮನೆ ಸಮೀಪದ ತೋಟದಲ್ಲಿ ಹಾಗೂ  ಹೆಗಡೆಮನೆ ಸಮೀಪ  ಮತ್ತು ಬೀಗಾರ ಗ್ರಾಮದ ಗಾಂವ್ಕರ್ ಕೇರಿ ಯ ಸಮೀಪ ಹಾದುಹೋಗಿರುವ ವಿದ್ಯುತ್ ತಂತಿಗಳ ಎಷ್ಟು ಕೆಳಗೆ ಬಂದಿವೆಯೆಂದರೆ, ಯಾರಾದರೂ ಕೈ ಎತ್ತಿ ನಮಸ್ಕಾರ ಮಾಡಿದರೆ ನೇರವಾಗಿ ಯಮಲೋಕಕ್ಕೆ ಟಿಕೆಟ್ ಸಿಗುವಷ್ಟು ಎತ್ತರದಲ್ಲಿ ತೂಗಾಡುತ್ತಿವೆ ಎಂಬ ಆರೋಪವನ್ನು ಸ್ಥಳಿಯರು ಮಾಡುತ್ತಿದ್ದಾರೆ.ಕೆಲವೊಂದು ಕಡೆಯಲ್ಲಿ ತೋಟದ ಮದ್ಯದಿಂದಲೆ ಬೇರೆ ಮನೆಗಳಿಗೆ ಹಾಗೂ ಸಣ್ಣ ಗ್ರಾಮಗಳಿಗೆ ವಿದ್ಯುತ್ ಲೈನ್ ಹೋಗಿದೆ‌ ‌. ಇನ್ನು ತೋಟದ ಮಧ್ಯದಿಂದ ಹೋದ ತಂತಿ ಲೈನಿನ ಮೇಲೆ ಅಡಿಕೆ ಹೆಡೆ ತೆಂಗಿನ ಹೆಡೆಗಳು ಬಿದ್ದು ಬಿದ್ದು  ತಂತಿಗಳು ನೆಲಕ್ಕೆ ತಾಗುವಂತೆ ಜೋಲುತ್ತಿದ್ದರೆ ಕೆಲವೊಂದು ಕಡೆ ಕಂಬದಿಂದ ಕಂಬದ ದೂರ ಹೆಚ್ಚಿರುವ ಕಾರಣ ಜೊತು ಬಿದ್ದಿದೆ‌ . ಇದರಿಂದಾಗಿ  ಶಾಲಾ ಮಕ್ಕಳು, ರೈತರು ಕೈಯಲ್ಲಿ ಜೀವ ಹಿಡಿದುಕೊಂಡು, ತಂತಿಗಳನ್ನು ತಪ್ಪಿಸಿಕೊಂಡು ಹೋಗುವುದೇ ಇಲ್ಲಿ ದೊಡ್ಡ ಕಲೆಯಾಗಿದೆ. ರೈತರು ತಮ್ಮ ತೋಟಗಳಿಗೆ ಮದ್ದು ಹೊಡೆಯಲು ದೊಟಿ ತೆಗೆದುಕೊಂಡು ಹೋಗುವಾಗ ಹಾಗೂ ಹಾಗೂ ತಲೆಯ ಮೇಲೆ ದೊಡ್ಡದಾದ ವಸ್ತುವನ್ನು  ತೆಗೆದುಕೊಂಡು ಹೋಗಬೇಕಾದರೆ, ವಿದ್ಯುತ್ ತಂತಿಗೆ ತಗುಲದಂತೆ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅಧಿಕಾರಿಗಳೇ, ಅನಾಹುತಕ್ಕೆ ಮುಹೂರ್ತ ಫಿಕ್ಸ್ ಮಾಡಬೇಕೇ?ಗಾಳಿ-ಮಳೆ ಬಂದರೆ ಸಾಕು, ಈ ತಂತಿಗಳು ರೊಮ್ಯಾಂಟಿಕ್ ಆಗಿ ಒಂದಕ್ಕೊಂದು ತಾಗಿ ಕಿಡಿ ಹಾರಿಸುತ್ತವೆ. ಆದರೆ, ಈ ‘ಕಿಡಿ’ ಹೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ ಎಂಬುದು ಗ್ರಾಮಸ್ಥರ ಯಕ್ಷಪ್ರಶ್ನೆ. “ಬಹುಶಃ ಇಲಾಖೆಯವರು ಯಾವುದಾದರೂ ದೊಡ್ಡ ದುರಂತ ಸಂಭವಿಸಿ, ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿ ಆದ ನಂತರವೇ ಇಲ್ಲಿಗೆ ಬರಲು ಮುಹೂರ್ತ ಇಟ್ಟುಕೊಂಡ ಹಾಗಿದೆ” ಎಂದು ಸ್ಥಳೀಯರು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರು ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತು ಯಾರಾದರೂ ಪ್ರಾಣ ಕಳೆದುಕೊಳ್ಳುವ ಮುನ್ನವೇ ದಯವಿಟ್ಟು ಬಂದು ಆ ತಂತಿಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ ಕಟ್ಟಿ ಪುಣ್ಯ ಕಟ್ಟಿಕೊಳ್ಳಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Leave a Reply

Your email address will not be published. Required fields are marked *