ಕಳಚೆಯಲ್ಲಿ ಭೂಕುಸಿತವಾಗಿಲ್ಲ: ಜನಜೀವನ ಯಥಾಸ್ಥಿತಿ, ಆತಂಕ ಬೇಡ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಕಳಚೆ ಗ್ರಾಮದಲ್ಲಿ ಬೃಹತ್ ಭೂಕುಸಿತ ಸಂಭವಿಸಿದೆ ಎಂಬ ವದಂತಿಗಳು ಸುಳ್ಳಾಗಿದ್ದು, ಗ್ರಾಮದಲ್ಲಿ ಸದ್ಯ ಯಾವುದೇ ಭೂಕುಸಿತ ಸಂಭವಿಸಿಲ್ಲ. ರಸ್ತೆ ಬದಿಯ ದರೆಯಿಂದ ಕೆಲವು ಕಲ್ಲುಗಳು ಜಾರಿ ಬಿದ್ದಿರುವುದನ್ನು ಬಿಟ್ಟರೆ, ಸಾರ್ವಜನಿಕ ಆಸ್ತಿ ಪಾಸ್ತಿಗಾಗಲಿ ಅಥವಾ ಜನಜೀವನಕ್ಕಾಗಲಿ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ಸ್ಥಳೀಯ ಮುಖಂಡರಾದ ಪ್ರಮೋದ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಹಿಂದೆ ತಳಕೆಬೈಲ್ ಮತ್ತು ಹೆಬ್ಬಾರ್ ಕುಂಬ್ರಿ ಮಧ್ಯೆ ಇದೇ ರೀತಿ ಬಂಡೆಕಲ್ಲು ಬಿದ್ದಿದ್ದು, ಅದು ಇಂದಿಗೂ ರಸ್ತೆ ಪಕ್ಕದಲ್ಲೇ ಇದೆ. ಈಗ ಕಳಚೆಯಲ್ಲೂ ಅಂತಹದ್ದೇ ಸಾಮಾನ್ಯ ಘಟನೆ ನಡೆದಿದೆ. ಮಾಧ್ಯಮಗಳು ಮುನ್ನೆಚ್ಚರಿಕೆ ಮತ್ತು ಜವಾಬ್ದಾರಿಯಿಂದ ತಮ್ಮ ಕೆಲಸವನ್ನು ಮಾಡಿವೆಯೇ ಹೊರತು, ಗ್ರಾಮದಲ್ಲಿ ಯಾವುದೇ ಪ್ರಕೃತಿ ವಿಕೋಪ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಥಾಸ್ಥಿತಿಯಲ್ಲಿ ಜನಜೀವನ:
ಗ್ರಾಮಸ್ಥರೆಲ್ಲರೂ ಧೈರ್ಯವಾಗಿದ್ದು, ಯಾವುದೇ ಭಯಭೀತರಾಗಿಲ್ಲ. ಊರಿನಲ್ಲಿ ಎಂದಿನಂತೆ ಎಲ್ಲಾ ದೈನಂದಿನ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿವೆ. ಊರಿಗೆ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ವಿದ್ಯುತ್ ಸಂಪರ್ಕವೂ ಕಲ್ಪಿಸಲಾಗಿದೆ. ದೇವಾನುದೇವತೆಗಳ ಕೃಪೆಯಿಂದ ಊರು ಸುಭಿಕ್ಷವಾಗಿದೆ ಎಂದು ಹೆಬ್ಬಾರ್ ವಿವರಿಸಿದ್ದಾರೆ.

ಮೂಲಭೂತ ಸೌಕರ್ಯಕ್ಕೆ ಆಗ್ರಹ:
ಕಳಚೆಯನ್ನು ಈಗಾಗಲೇ ಭೂಕುಸಿತ ವಲಯ ಎಂದು ಗುರುತಿಸಿರುವುದರಿಂದ, ಹಿಂದೆ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರವಾಗಿ ಪರಿಹಾರ ಸಿಗಬೇಕಿದೆ. ಇದರೊಂದಿಗೆ, ಪ್ರಸ್ತುತ ಗ್ರಾಮದಲ್ಲಿ ವಾಸಿಸುತ್ತಿರುವ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


Leave a Reply

Your email address will not be published. Required fields are marked *