ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬಂಡಿದಾರಿ (ಗಾಡಿ ದಾರಿ) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. 15 ರಿಂದ 20 ಜನರ ನಡುವೆ ನಡೆದ ಈ ಗುಂಪು ಘರ್ಷಣೆಯಲ್ಲಿ ಬಡಿಗೆ, ಕುಡುಗೋಲು ಹಾಗೂ ಕಂದಲಿಯಿಂದ ಪರಸ್ಪರ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಗಲಾಟೆಗೆ ಮೂಲ ಕಾರಣ
ಮಾಲತೇಶ ನಿಂಗಪ್ಪ ಕಾಮೆರ ಎಂಬುವವರಿಗೆ ಸೇರಿದ 17 ಎಕರೆ ಜಮೀನಿನಲ್ಲಿ ಸುಮಾರು 20 ಅಡಿ ರಸ್ತೆಯನ್ನು ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಅತಿಕ್ರಮಣ ಮಾಡಲಾದ ದಾರಿಯನ್ನು ತೆರವುಗೊಳಿಸುವಂತೆ ಉದ್ದನಕಾಲು ಕುಟುಂಬದವರು ತಹಶೀಲ್ದಾರ್ ಅವರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರವಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮಾರಣಾಂತಿಕ ಹಲ್ಲೆಯಲ್ಲಿ ಅಂತ್ಯವಾಗಿದೆ.
ಕೊ*ಲೆ ಯತ್ನ ಹಾಗೂ ಗಾಯಾಳುಗಳ ಸ್ಥಿತಿ
ಗಲಾಟೆಯ ಸಂದರ್ಭದಲ್ಲಿ ಎದುರಾಳಿಗಳ ಮೇಲೆ ಟಿಟಿ ವಾಹನವನ್ನು ಹಾಯಿಸಿ ಕೊ*ಲೆ ಮಾಡಲು ಯತ್ನಿಸಿದ ಗಂಭೀರ ಆರೋಪವೂ ಕೇಳಿಬಂದಿದೆ. ಈ ಭೀಕರ ಘರ್ಷಣೆಯಲ್ಲಿ 7 ರಿಂದ 8 ಜನರಿಗೆ ತೀವ್ರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ (KIMS) ಹಾಗೂ ವೀರಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ಕಾರ್ಯಾಚರಣೆ ಹಾಗೂ ಬಂದೋಬಸ್ತ್
ಘಟನೆಗೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಗವಾದಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದಾರೆ. ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಹೆಚ್ಚುವರಿ ಎಸ್ಪಿ ಅವರು ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ ಮತ್ತು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply