ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಇತ್ತೀಚೆಗೆ ಹುಂಡಿ ಕಳ್ಳತನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ದೇವಾಲಯಗಳ ಆವರಣದಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕಲು ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ದೇವಸ್ಥಾನದ ಹುಂಡಿ ಭದ್ರತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರು ಹೊಸ ಮಾರ್ಗಸೂಚಿಗಳನ್ನು (SOP) ಬಿಡುಗಡೆ ಮಾಡಿದ್ದು, ರಾಜ್ಯದ ಎಲ್ಲಾ ದೇವಾಲಯಗಳಿಗೂ ಅಲರ್ಟ್ ಸಂದೇಶ ರವಾನಿಸಿದ್ದಾರೆ.
ಈ ಹೊಸ ಗೈಡ್‌ಲೈನ್ಸ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಜಿಲ್ಲಾಧಿಕಾರಿಗಳು (DC), ಉಪವಿಭಾಗಾಧಿಕಾರಿಗಳು (AC), ತಹಶೀಲ್ದಾರ್‌ಗಳು ಹಾಗೂ ಮುಜರಾಯಿ ಇಲಾಖೆಯ ಆಯುಕ್ತರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಹೊಸ ಮಾರ್ಗಸೂಚಿಯ (SOP) ಪ್ರಮುಖ ಅಂಶಗಳು:
- ಹುಂಡಿ ಅಳವಡಿಕೆ ಮತ್ತು ಸಿಸಿಟಿವಿ ಕಣ್ಗಾವಲು: ದೇವಸ್ಥಾನದ ಹುಂಡಿಯನ್ನು ಎಲ್ಲರಿಗೂ ಕಾಣುವಂತಹ ಪ್ರಮುಖ ಸ್ಥಳದಲ್ಲೇ ಅಳವಡಿಸಬೇಕು ಹಾಗೂ ಅದಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಹುಂಡಿಯ ನಾಲ್ಕು ದಿಕ್ಕುಗಳು ಸ್ಪಷ್ಟವಾಗಿ ಗೋಚರಿಸುವಂತೆ ಸಿಸಿಟಿವಿ ಅಥವಾ ವೆಬ್ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ಕ್ಯಾಮೆರಾಗಳ ನಿರಂತರ ಮೇಲ್ವಿಚಾರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
- ಎಣಿಕೆ ವೇಳೆ ವಿಡಿಯೋ ಚಿತ್ರೀಕರಣ ಕಡ್ಡಾಯ: ದೇವಸ್ಥಾನದ ಹುಂಡಿ ಎಣಿಕೆ ಪ್ರಕ್ರಿಯೆ ನಡೆಯುವಾಗ ಕಡ್ಡಾಯವಾಗಿ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲೇಬೇಕು. ಈ ಕಾರ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಭಾಗವಹಿಸುವುದು ಕಡ್ಡಾಯವಾಗಿದೆ.
- ಅಧಿಕಾರಿಗಳೇ ನೇರ ಹೊಣೆಗಾರರು: ಹುಂಡಿ ಎಣಿಕೆ ಸಮಯದಲ್ಲಿ ಯಾವುದೇ ರೀತಿಯ ಕಳ್ಳತನ ಅಥವಾ ಅಕ್ರಮಗಳು ನಡೆದರೆ, ಅದಕ್ಕೆ ಅಲ್ಲಿ ಹಾಜರಿರುವ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು.
- ಡಿಜಿಟಲ್ ಪಾವತಿಗೆ ಒತ್ತು: ದೇವಾಲಯಗಳ ಆವರಣದಲ್ಲಿ ಭಕ್ತರ ಜೇಬುಗಳ್ಳತನ ಕಾಟವನ್ನು ತಪ್ಪಿಸಲು ಹಾಗೂ ಹಣದ ವಹಿವಾಟಿನಲ್ಲಿ ಪಾರದರ್ಶಕತೆ ತರಲು ಭಕ್ತರು ಡಿಜಿಟಲ್ ಪಾವತಿ (Digital Payment) ಮೂಲಕ ಕಾಣಿಕೆ ಸಲ್ಲಿಸಲು ಹೆಚ್ಚು ಉತ್ತೇಜನ ನೀಡಬೇಕು.

Leave a Reply