KIA ಕಸ್ಟಮ್ಸ್ ಭರ್ಜರಿ ಬೇಟೆ: ಬ್ಯಾಂಕಾಕ್‌ನಿಂದ ತಂದಿದ್ದ 4.22 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ!

ಹಂಚಿಕೊಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನೋರ್ವ ತನ್ನ ಲಗೇಜ್ ಬ್ಯಾಗ್‌ನಲ್ಲಿ ಅತ್ಯಂತ ಜಾಣ್ಮೆಯಿಂದ ಅಡಗಿಸಿಟ್ಟುಕೊಂಡು ತಂದಿದ್ದ ಬರೋಬ್ಬರಿ 12.07 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು (Hydroponic Weed) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಈ ಗಾಂಜಾದ ಅಂದಾಜು ಮೌಲ್ಯ ಸುಮಾರು 4 ಕೋಟಿ 22 ಲಕ್ಷ ರೂಪಾಯಿಗಳು ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಈ ಕೃತ್ಯ ಬಯಲಾಗಿದ್ದು, ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕಾಕ್ ಟು ಬೆಂಗಳೂರು: ಹೆಚ್ಚುತ್ತಿರುವ ಡ್ರಗ್ಸ್ ಸಾಗಣೆ

​ಇತ್ತೀಚಿನ ದಿನಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬರುವ ವಿಮಾನಗಳ ಮೂಲಕವೇ ಅತಿಹೆಚ್ಚು ಡ್ರಗ್ಸ್ ಸಾಗಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಜೂನ್ 26 ರಂದು ಬ್ಯಾಂಕಾಕ್‌ನಿಂದಲೇ ಬಂದಿದ್ದ ಪ್ರಯಾಣಿಕನ ಬ್ಯಾಗೇಜ್ ಪರಿಶೀಲಿಸಿದಾಗ, 2.086 ಕೋಟಿ ರೂಪಾಯಿ ಮೌಲ್ಯದ 5.960 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಪತ್ತೆ ಮಾಡಲಾಗಿತ್ತು.

ಅದೇ ದಿನ ನಡೆದ ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಅಂದಾಜು 5.58 ಕೋಟಿ ಮೌಲ್ಯದ 6.98 ಕೆಜಿ ಮೆಸ್ಕಲಿನ್ (Mescaline) ಎಂಬ ಮತ್ತೊಂದು ಅಪಾಯಕಾರಿ ಮಾದಕ ವಸ್ತುವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಕಂಬಿ ಹಿಂದೆ ತಳ್ಳಲಾಗಿತ್ತು.

ಸತತ ಕಾರ್ಯಾಚರಣೆ, ಡ್ರಗ್ಸ್ ಮಾಫಿಯಾಗೆ ನಡುಕ

​ಕಸ್ಟಮ್ಸ್ ಅಧಿಕಾರಿಗಳ ಹದ್ದಿನ ಕಣ್ಣಿನಿಂದಾಗಿ ಡ್ರಗ್ಸ್ ಪೆಡ್ಲರ್‌ಗಳು ಸತತವಾಗಿ ಸಿಕ್ಕಿಬೀಳುತ್ತಿದ್ದಾರೆ. ಕಳೆದ ಜೂನ್ 17 ರಂದು ಕೂಡ ಪ್ರಯಾಣಿಕನೊಬ್ಬನಿಂದ 5.43 ಕೋಟಿ ರೂಪಾಯಿ ಮೌಲ್ಯದ 15.520 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಭರ್ಜರಿಯಾಗಿ ಜಪ್ತಿ ಮಾಡಲಾಗಿತ್ತು.

ಅದೇ ರೀತಿ, ಜೂನ್ 29 ರಂದು ಬ್ಯಾಂಕಾಕ್‌ನಿಂದ ಆಗಮಿಸಿದ್ದ ಮತ್ತೋರ್ವ ಪ್ರಯಾಣಿಕನಿಂದ 8 ಕೆಜಿ ತೂಕವಿರುವ 2.80 ಕೋಟಿ ಮೌಲ್ಯದ ಮಾದಕ ವಸ್ತುವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕೇವಲ ಒಂದು ತಿಂಗಳ ಅಂತರದಲ್ಲಿ ಸತತವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಗಳು ವಿಮಾನ ನಿಲ್ದಾಣದಲ್ಲಿನ ಭದ್ರತೆಯನ್ನು ಸಾಬೀತುಪಡಿಸಿದ್ದು, ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾಗೆ ತೀವ್ರ ನಡುಕ ಹುಟ್ಟಿಸಿವೆ.

Leave a Reply

Your email address will not be published. Required fields are marked *

Advertisement


This will close in 3 seconds