ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖಡಕ್ ಹಾಗೂ ನಿಷ್ಠಾವಂತ ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜ್ ಅವರನ್ನು ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಚ್ಚರಿಯ ಸಂಗತಿಯೆಂದರೆ, ವರ್ಗಾವಣೆಗೊಂಡ ಅವರಿಗೆ ಮುಂದಿನ ಯಾವುದೇ ನೂತನ ಸ್ಥಳ ನಿಯೋಜನೆ ಮಾಡದೆ ಆದೇಶಿಸಲಾಗಿದೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳ ಚಳಿ ಬಿಡಿಸುತ್ತಿದ್ದ, ಲಂಚಗುಳಿತನದ ವಿರುದ್ಧ ಸಿಡಿದೆದ್ದಿದ್ದ ಈ ನಿಷ್ಠಾವಂತ ಅಧಿಕಾರಿಯ ಎತ್ತಂಗಡಿ ಇದೀಗ ಸಾರ್ವಜನಿಕ ವಲಯದಲ್ಲಿ ಹಾಗೂ ಇಲಾಖೆಯೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಐಪಿಎಸ್ ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 9 ಬಾರಿ ವರ್ಗಾವಣೆಗೊಂಡಿರುವ ಶಿವಪ್ರಕಾಶ್ ದೇವರಾಜ್ ಅವರು, ಲೋಕಾಯುಕ್ತದಲ್ಲಿ ನೂರಾರು ಟ್ರ್ಯಾಪ್ ಪ್ರಕರಣಗಳು ಹಾಗೂ ಭ್ರಷ್ಟರ ಮನೆಗಳ ಮೇಲೆ ನೂರಾರು ಯಶಸ್ವಿ ದಾಳಿಗಳನ್ನು ಮುನ್ನಡೆಸಿದ್ದರು.
ವಿಶೇಷವೆಂದರೆ, ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಲ್ಯಾಂಡ್ ಮಾಫಿಯಾದಲ್ಲಿ ಶಾಮೀಲಾಗಿದ್ದ ಪ್ರಭಾವಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಇವರು ದಿಟ್ಟತನದಿಂದ ರೇಡ್ ಮಾಡಿದ್ದರು. ಭ್ರಷ್ಟರ ಬೇಟೆಯಾಡುತ್ತಿದ್ದ ಈ ಖಡಕ್ ಅಧಿಕಾರಿಗೆ ಇದೀಗ ಲ್ಯಾಂಡ್ ಮಾಫಿಯಾ ವಿರುದ್ಧ ಸಮರ ಸಾರಿದ್ದಕ್ಕಾಗಿಯೇ ಈ ‘ವರ್ಗಾವಣೆ ಭಾಗ್ಯ’ ಒಲಿದುಬಂತೇ ಎಂಬ ಅನುಮಾನಗಳು ಹಾಗೂ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ದಟ್ಟವಾಗಿ ಕೇಳಿಬರುತ್ತಿವೆ.

Leave a Reply